ಪುತ್ತೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವಿವಿಧ ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ವರ್ಗಾವಣೆಗೊಳಿಸಲಾಗಿದ್ದು ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿದ್ದ ಶ್ರೀಲತಾರವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆ ವರ್ಗಾವಣೆಗೊಂಡಿದ್ದಾರೆ.
2020ರ ಫೆಬ್ರವರಿಯಲ್ಲಿ ಪುತ್ತೂರಿಗೆ ಪೂರ್ಣಕಾಲಿಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ಆ ಮೂಲಕ ಸುಮಾರು ಏಳು ವರ್ಷಗಳ ಕಾಲ ಪ್ರಭಾರವಾಗಿದ್ದ ಶಿಶು ಅಭಿವೃದ್ಧಿ ಅಧಿಕಾರಿಯ ಸ್ಥಾನವನ್ನು ಭರ್ತಿ ಮಾಡಿದ್ದರು. ನಂತರ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಶ್ರೀಲತಾರವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಯಾರೆಂಬುದನ್ನು ಆದೇಶದಲ್ಲಿ ಸೂಚಿಸಿದೇ ಇರುವುದರಿಂದ ಮತ್ತೆ ಆ ಸ್ಥಾನ ಖಾಲಿಯಾಗಲಿದೆ.
ಇಲಾಖೆಯ ಸೌಲಭ್ಯಗಳನ್ನು ಕ್ಲಪ್ತ ಸಮಯದಲ್ಲಿ ಫಲಾನುಭವಿಗಳು ಪಡೆದುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ತೃಪ್ತಿಯಿದೆ. ತನ್ನ ವರ್ಗಾವಣೆಯಿಂದ ಇಲಾಖೆಯ ಸಿಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನೋವುಂಟಾಗಿದೆ ಎಂದು ಶ್ರೀಲತಾರವರು ಸುದ್ದಿಗೆ ತಿಳಿಸಿದ್ದಾರೆ.