ತಾ|ಸರಕಾರಿ ನೌಕರರ ಸಂಘದಿಂದ ನಿವೃತ್ತ ಸಿಡಿಪಿಒ ಭಾರತಿರವರಿಗೆ ನಿವೃತ್ತ ಸನ್ಮಾನ – ಪದೋನ್ನತಿಯೊಂದಿಗೆ ವರ್ಗಾವಣೆಗೊಂಡ ಮಲಿಕ್ ಕುಮಾರ್‌ರವರಿಗೆ ಬೀಳ್ಕೊಡುಗೆ ಸನ್ಮಾನ

0

ಪುತ್ತೂರು: ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ಶಾಖೆಯ ಆಶ್ರಯದಲ್ಲಿ ಇತ್ತೀಚೆಗೆ ಸರಕಾರಿ ಸೇವಾ ವೃತ್ತಿಯಿಂದ ನಿವೃತ್ತಿ ಹೊಂದಿದ ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ನಿವೃತ್ತ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಕೆ.ಪಿರವರಿಗೆ ನಿವೃತ್ತ ಸನ್ಮಾನ ಹಾಗೂ ಭೂ ಮಾಪನಾ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಯಿಂದ ಸೂಪರಿಟೆಂಡೆಂಟ್ ಆಗಿ ಪದೋನ್ನತಿಗೊಂಡು ಮೈಸೂರು ತರಬೇತಿ ಸಂಸ್ಥೆಗೆ ವರ್ಗಾವಣೆಗೊಂಡಿರುವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮಲಿಕ್ ಕುಮಾರ್‌ರವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮವು ಮಿನಿ ವಿಧಾನಸೌಧದ ಬಳಿಯ ತಾಲೂಕು ಸರಕಾರಿ ನೌಕರರ ಸಂಘದ ಭವನದಲ್ಲಿನ ಕಛೇರಿಯಲ್ಲಿ ಅ.11ರಂದು ಸಂಜೆ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು.

ತಾಲೂಕು ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಸರಕಾರಿ ಕರ್ತವ್ಯದಿಂದ ವಯೋ ನಿವೃತ್ತಿಗೊಳ್ಳುತ್ತಿರುವ ಭಾರತಿ ಹಾಗೂ ಪದೋನ್ನತಿ ಹೊಂದಿ ವರ್ಗಾವಣೆಗೊಳ್ಳುತ್ತಿರುವ ಮಲಿಕ್ ರವರು ಸಂಘದ ಅಭಿವೃದ್ಧಿ ನಿಟ್ಟಿನಲ್ಲಿ ಕೈಜೋಡಿಸಿದ್ದು ಅವರ ಮುಂದಿನ ಜೀವನವು ಫಲಪ್ರದವಾಗಿರಲಿ ಎಂದು ಹಾರೈಸಿದರು.
ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಕೃಷ್ಣಪ್ಪರವರು ಮಾತನಾಡಿ, ನಿವೃತ್ತಿ ಹೊಂದಿದ ಭಾರತಿರವರನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ಅವರಲ್ಲಿ ಯಾರಾದರೂ ಒಮ್ಮೆ ಮಾತನಾಡಿದರೆ ಸಾಕು ಮತ್ತೆ ಅವರೇ ಗುರುತು ಹಿಡಿದು ಮಾತನಾಡುವ ಸ್ವಭಾವ ಅವರದ್ದಾಗಿದೆ. ವರ್ಗಾವಣೆಗೊಳ್ಳುತ್ತಿರುವ ಮಲಿಕ್‌ರವರೂ ಕೂಡ ಪುತ್ತೂರಿನಲ್ಲಿ ನಗುಮುಖದಿಂದ ಸೇವೆಯನ್ನು ಆರಂಭಿಸಿ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದಾರೆ ಎಂದು ಹೇಳಿ ಅವರಿರ್ವರಿಗೂ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿ, ನಿವೃತ್ತರಾದ ಭಾರತಿರವರು ಈ ಹಿಂದಿನ ಕಾರ್ಯಕಾರಿ ಸಮಿತಿಯಲ್ಲಿ ಇದ್ದಾಗ ಸಕ್ರಿಯವಾಗಿ ಭಾಗವಹಿಸಿ ಸಂಘದ ಅಭಿವೃದ್ಧಿಗೆ ಕೈಜೋಡಿಸಿರುತ್ತಾರೆ. ಸುತ್ತಿದ್ದರು. ವರ್ಗಾವಣೆಗೊಳ್ಳುತ್ತಿರುವ ಮಲಿಕ್‌ರವರು ಸಂಘದ ಪ್ರತಿ ಮೀಟಿಂಗ್‌ಗೆ, ಕಾರ್ಯಕ್ರಮಗಳಿಗೆ, ಪ್ರತಿಭಟನೆಗಳಿಗೆ ಹಾಜರಾಗಿ ನಮ್ಮೊಂದಿಗೆ ಸಹಕರಿಸುತ್ತಿದ್ದು ಈರ್ವರಿಗೂ ಶುಭವಾಗಲಿ ಎಂದು ಹಾರೈಸಿದರು.
ತಾಲೂಕು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ ಬಿ.ರವರು ಮಾತನಾಡಿ, ಸರಕಾರಿ ನೌಕರರಿಗೆ ವರ್ಗಾವಣೆ ಮತ್ತು ನಿವೃತ್ತಿ ಒಂದೇ ನಾಣ್ಯದ ಎರಡು ಮುಖವಾಗಿದೆ. ಯಾರು ತನ್ನ ಸೇವಾವಧಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೋ ಅವರನ್ನು ಜನರು ಗುರುತಿಸುತ್ತಾರೆ ಎನ್ನುವುದಕ್ಕೆ ನಿವೃತ್ತಿ ಹೊಂದಿರುವ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಭಾರತಿ ಹಾಗೂ ವರ್ಗಾವಣೆಗೊಳ್ಳುತ್ತಿರುವ ಮಲಿಕ್ ರವರು ಉದಾಹರಣೆಯಾಗಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.
ಉಪ ತಹಶೀಲ್ದಾರ್ ಸುಲೋಚನಾ ಪಿ.ಕೆ ಮಾತನಾಡಿ, ಮಲಿಕ್‌ರವರು ಓರ್ವ ಸ್ನೇಹಜೀವಿ. ಗೆಳೆತನ ಅಂದರೆ ಹೇಗಿರಬೇಕು ಅನ್ನುವುದನ್ನು ನಾವು ಅವರಿಂದ ಕಲಿಯಬೇಕಾಗಿದೆ ಮಾತ್ರವಲ್ಲ ಎಲ್ಲರನ್ನು ಸಮಾನವಾಗಿ ಕಾಣುವ ಸ್ವಭಾವ ಕೂಡ ಅವರದ್ದಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಂಘದ ಜೊತೆ ಕಾರ್ಯದರ್ಶಿ ರವಿಚಂದ್ರ ಯು.ರವರು ಮಾತನಾಡಿ, ನಿವೃತ್ತಿ ಹೊಂದಿರುವ ಭಾರತಿರವರು ಒಳ್ಳೆಯ ಅಧಿಕಾರಿ ಎಂಬ ಹೆಸರು ಗಳಿಸಿಕೊಂಡಿದ್ದಾರೆ. ಸರಳ ವ್ಯಕ್ತಿಯಾಗಿರುವ ಭಾರತಿರವರು ಯಾರೊಡನೆ ಆದರೂ ಒಮ್ಮೆ ಮಾತನಾಡಿದರೆ ಸಾಕು, ಅವರೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಳ್ಳುತ್ತಾರೆ ಅದೇ ರೀತಿ ವರ್ಗಾವಣೆಗೊಳ್ಳುತ್ತಿರುವ ಮಲಿಕ್ ರವರೂ ಕೂಡ ನಮ್ನ ಯಾವುದೇ ಕಾರ್ಯಕ್ರಮವಿರಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಎಂದು ಹೇಳಿ ಶುಭ ಹಾರೈಸಿದರು.
ಸಂಘದ ಗೌರವಾಧ್ಯಕ್ಷ ರಾಮಚಂದ್ರ, ಕೋಶಾಧಿಕಾರಿ ಕೃಷ್ಣ ಬಿ, ಪದ್ಮರಾಜ ಜಿ, ಕವಿತಾ ಕೆ, ಚೆನ್ನಪ್ಪ ಗೌಡ, ವರುಣ್ ಕುಮಾರ್, ಎಪ್.ಜಿ.ಎಂ ಗೌಡ, ಸುಜಾತಾ ಎಸ್, ಸುಧೀರ್ ಪಿ, ವಿಜಯಕುಮಾರ್ ಕೆ, ಸೀತಾರಾಮ ಗೌಡ ಮಿತ್ತಡ್ಕ, ಚಿದಾನಂದ ಬಿ, ವೆಂಕಟೇಶ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಎಸ್.ಎ ಸ್ವಾಗತಿಸಿ, ಹಿರಿಯ ಉಪಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ ವಂದಿಸಿದರು.

ನಾಗರಿಕ ಸೇವಾ ಪ್ರಶಸ್ತಿ ನನ್ನ ಭಾಗ್ಯ..
ಜನರೊಂದಿಗೆ ಬೆರೆತು ಕೆಲಸ ಮಾಡುವ ಇಲಾಖೆ ನನ್ನದು. ಹಲವು ಜಿಲ್ಲೆಗಳಲ್ಲಿ ನಾನು ಕೆಲಸ ಮಾಡಿದ್ದೇನೆ ಆದರೆ ದಕ್ಷಿಣ ಕನ್ನಡದಲ್ಲಿ ಸೇವೆಗೈಯ್ದಿರುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ. ಸರಕಾರಿ ವೃತ್ತಿಯಲ್ಲಿ ನಾವು ಅಧಿಕಾರಿಗಳಾಗಿ ಕೆಲಸ ಮಾಡಬಹುದು ಆದರೆ ಸಂಘಟನೆ ಅಂತ ಬಂದಾಗ ನಾವೆಲ್ಲಾ ಒಂದೇ. 2006ರಲ್ಲಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನನಗೆ ನಾಗರಿಕ ಸೇವಾ ಪ್ರಶಸ್ತಿ ಲಭಿಸಿರುವುದು ನನ್ನ ಪಾಲಿನ ಭಾಗ್ಯವಾಗಿದೆ. ಪುತ್ತೂರಿನ ಸರಕಾರಿ ನೌಕರರ ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಮಾತ್ರವಲ್ಲ ಇಂದು ನನ್ನನ್ನು ಕರೆದು ಸನ್ಮಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
-ಭಾರತಿ,
ನಿವೃತ್ತ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ

ದ.ಕ ಜಿಲ್ಲೆಯ ಪುತ್ತೂರಿಗೆ ಒಳ್ಳೆಯ ಹೆಸರಿದೆ..
2012ರಲ್ಲಿ ನಾನು ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಸೇವೆ ಆರಂಭಿಸಿರುವುದಾಗಿದೆ. ಆವಾಗ ನನಗೆ ಎಲ್ಲವೂ ಹೊಸದು. ರೆವೆನ್ಯೂ ಇಲಾಖೆಯ ವಿಷಯ ಅಷ್ಟೇನೂ ಗೊತ್ತಿರಲಿಲ್ಲ. ಆದರೆ ಎಲ್ಲರ ಸಹಕಾರದಿಂದ ಕೆಲಸದಲ್ಲಿನ ಒತ್ತಡವನ್ನು ನಿಭಾಯಿಸಿ ಕೆಲಸ ಮಾಡ್ತಿದ್ದೆ. ಕೆಲಸದ ಮೇಲೆ ಒತ್ತಡ ಬಂದಾಗ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಹೋಗಿ ಪ್ರಾರ್ಥಿಸುತ್ತಿದ್ದೆ ಮಾತ್ರವಲ್ಲ ದೇವರು ನನ್ನ ಕೆಲಸವನ್ನು ಸುಸೂತ್ರವಾಗಿ ನಡೆಸಿ ಕೊಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಒಳ್ಳೆಯ ಹೆಸರಿದೆ. ಈ ಪುತ್ತೂರನ್ನು ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ. ಮುಂದಿನ ದಿನಗಳಲ್ಲಿ ಈ ಸಂಘವು ಅಭಿವೃದ್ಧಿಯತ್ತ ಸಾಗಲಿ ಎಂಬುದೇ ನನ್ನ ಪ್ರಾರ್ಥನೆ.
-ಮಲಿಕ್ ಕುಮಾರ್,
ಸೂಪರಿಟೆಂಡೆಂಟ್ ಆಗಿ ಪದೋನ್ನತಿಗೊಂಡು ವರ್ಗಾವಣೆ

LEAVE A REPLY

Please enter your comment!
Please enter your name here