ಮನೆಯಲ್ಲಿ ಓದುವ ವಾತಾವರಣ ನಿರ್ಮಿಸಿದರೆ ಮಾತ್ರ ಮಕ್ಕಳು ಸಾಧನೆ ಮಾಡಲು ಸಾಧ್ಯ: ಅಶೋಕ್ ರೈ
ಪುತ್ತೂರು: ನಿಮ್ಮ ಮಕ್ಕಳು ಕಲಿತು ಸಾಧನೆ ಮಾಡಬೇಕಾದರೆ ಕೇವಲ ಶಾಲೆಯಲ್ಲಿ ಕಲಿತರೆ ಮಾತ್ರ ಸಾಲದು ಮಕ್ಕಳಿಗೆ ಮನೆಯಲ್ಲಿ ಓದುವ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿದ್ದು ಪೋಷಕರ ಕರ್ತವ್ಯವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಶಾಲಾ ಶಿಕ್ಷಣ ಇಲಾಖೆ, ಮಣಿಕ್ಕರ ಸ.ಪ್ರೌಢಶಾಲೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇದರ ಆಶ್ರಯದಲ್ಲಿ 2022-23ನೇ ಸಾಲಿನ ಎಸೆಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ, ನಿವೃತ್ತ ಶಿಕ್ಷಕರಿಗೆ, ದಾನಿಗಳಿಗೆ ಸಮ್ಮಾನ ಮತ್ತು ಪಾಲ್ತಾಡು ನ್ಯೂ ಬ್ರದರ್ಸ್ ಇವರು ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಟೀ ಶರ್ಟ್ ಅನಾವರಣ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಖಾಸಗಿ ಶಾಲೆಯಂತೆ ಸರಕಾರಿ ಶಾಲೆಯಲ್ಲಿಯು ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯಗಳ ಅಗತ್ಯತೆ ಇದೆ ಎಂದ ಅವರು ಸರಕಾರಿ ಶಾಲೆಗಳಲ್ಲಿಯು ಇಂಗ್ಲಿಷ್ ಕಲಿಕೆಯ ಅಗತ್ಯ ಇದೆ. ಏಕೆಂದರೆ ಉದ್ಯೋಗ ಕ್ಷೇತ್ರದಲ್ಲಿ ಆಂಗ್ಲ ಭಾಷೆಯ ಸಂವಹನದ ಅನಿವಾರ್ಯ. ಈಗಾಗಿ ತಾಲೂಕಿನ ಪ್ರತಿ ಸರಕಾರಿ ಶಾಲೆಯಲ್ಲಿಯು ಆಂಗ್ಲ ಭಾಷಾ ವಿಭಾಗದ ಅಗತ್ಯ ಇದ್ದು ಎಲ್ಲ ಶಾಲೆಗಳು ಕೆಪಿಎಸ್ ಆದಲ್ಲಿ ಅದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಸಯ್ಯದ್ ಗಫೂರ್ ಸಾಹೇಬ್ ಪಾಲ್ತಾಡು ಮಾತನಾಡಿ, ಮಣಿಕ್ಕರ ಪ್ರಾಥಮಿಕ ಶಾಲೆಗೆ ಕಟ್ಟಡದ ಕೊರತೆಯಿಂದ ವಿದ್ಯಾರ್ಥಿಗಳು ಮರದಡಿಯಲ್ಲಿ ಕಲಿಯಬೇಕಾದ ಪರಿಸ್ಥಿತಿ ಉಂಟಾದಾಗ ಅಶೋಕ್ ರೈ ಅವರು ಕೊಠಡಿ ನಿರ್ಮಾಣಕ್ಕೆ ನೆರವು ನೀಡಿದ್ದರು. ಆಗ ಅವರು ಶಾಸಕರಾಗಿರಲಿಲ್ಲ. ಬಡ ಮಕ್ಕಳ ಸ್ಥಿತಿಯನ್ನು ಮಾಧ್ಯಮದಲ್ಲಿ ಕಂಡು ಸಹಾಯಕ್ಕೆ ಬಂದಿದ್ದರು. ಈಗ ಶಾಸಕರಾಗಿ ಬಂದಿದ್ದಾರೆ. ಮಣಿಕ್ಕರ ಶಾಲೆಯನ್ನು ಕೆಪಿಎಸ್ ಆಗಿ ಪರಿವರ್ತಿಸಲು ಶಾಸಕರು ಸಹಕಾರ ನೀಡುವ ವಿಶ್ವಾಸ ಇದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಸಮ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಿವೃತ್ತ ಶಿಕ್ಷಕ ಎಂ. ಮಹಾಲಿಂಗೇಶ್ವರ ಭಟ್, ಹಾಲಿ ಶಿಕ್ಷಕರಿಗೆ, ದಾನಿ ಪಿ. ಅಬ್ಬಾಸ್ ಪೆರ್ಜಿ, ಪಾಲ್ತಾಡು ನ್ಯೂ ಬ್ರದರ್ಸ್ನ ಶರೀಫ್ ಕುಂಡಡ್ಕ, ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷೆ ಅಕ್ಕಮ್ಮ, ಉಪಾಧ್ಯಕ್ಷ ಪ್ರಮೋದ್ ಕೆ.ಎಸ್.ಅವರನ್ನು ಸಮ್ಮಾನಿಸಲಾಯಿತು. ಪಾಲ್ತಾಡು ನ್ಯೂ ಬ್ರದರ್ಸ್ ಇವರು ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಟೀ ಶರ್ಟ್ ಅನಾವರಣಗೊಳಿಸಲಾಯಿತು.
ವೇದಿಕೆಯಲ್ಲಿ ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷೆ ಅಕ್ಕಮ್ಮ, ಉಪಾಧ್ಯಕ್ಷ ಪ್ರಮೋದ್ ಕೆ.ಎಸ್., ಪೆರುವಾಜೆ ಗ್ರಾ.ಪಂ.ಉಪಾಧ್ಯಕ್ಷೆ ಶಾಹಿನಾಜ್, ಗ್ರಾ.ಪಂ.ಸದಸ್ಯರಾದ ಶುಭಲತ ಜೆ ರೈ, ಸುಂದರ ಪಿ.ಬಿ., ಬೆಳ್ಳಾರೆ ರೋಟರಿ ಕ್ಲಬ್ ಸದಸ್ಯ ಎನ್.ಎಸ್.ವೆಂಕಪ್ಪ ಗೌಡ ನಾರ್ಕೋಡ್, ಪಾಲ್ತಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪಿ.ವಿನೋದ್ ರೈ ಪಾಲ್ತಾಡು, ಮಣಿಕ್ಕರ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷ ಪಿ.ಸುನಿಲ್ ರೈ ಪಾಲ್ತಾಡು ಮೊದಲಾದವರು ಉಪಸ್ಥಿತರಿದ್ದರು.
ಸುಗುಣ ಎ ವರದಿ ಮಂಡಿಸಿದರು. ಶಿಕ್ಷಕಿ ವಸಂತಿ ಸಾಧಕ ವಿದ್ಯಾರ್ಥಿಗಳ ಪರಿಚಯ ವಾಚಿಸಿದರು. ಪ್ರಭಾರ ಮುಖ್ಯಗುರು ಉಮಾವತಿ ಎಲ್ ಸ್ವಾಗತಿಸಿ, ಶಿಕ್ಷಕಿ ಗೀತಾ ಬಿ.ವಿ. ವಂದಿಸಿದರು. ಶಿಕ್ಷಕ ಕರುಣಾಕರ ಮಣಿಯಾಣಿ ನಿರೂಪಿಸಿದರು.