ಪುತ್ತೂರು: ಪೆರ್ಲಂಪಾಡಿ ಸಮೀಪದ ಮಾಲೆತ್ತೋಡಿ ಎಂಬಲ್ಲಿಂದ ಅ.16ರಂದು ಬೆಳಿಗ್ಗೆಯಿಂದ ಕಾಣೆಯಾಗಿದ್ದ ಸುಬ್ಬಣ್ಣ ನಾಯ್ಕ್ ಮಾಲೆತ್ತೋಡಿ ಪುತ್ತೂರು ಸಂಪ್ಯದ ಕಮ್ಮಾಡಿ ಮೈದಾನದ ಬಳಿ ಪತ್ತೆಯಾಗಿದ್ದಾರೆ.
ಅ.16ರಂದು ಬೆಳಿಗ್ಗೆ ಕಟ್ಟಿಗೆ ತರುವುದಾಗಿ ಮನೆಯವರಲ್ಲಿ ತಿಳಿಸಿ ಹೋಗಿದ್ದ ಸುಬ್ಬಣ್ಣ ಆ ಬಳಿಕ ಕಾಣೆಯಾಗಿದ್ದರು. ನೆನಪಿನ ಶಕ್ತಿ ಕಳೆದು ಕೊಂಡಿರುವ ಸುಬ್ಬಣ್ಣ ಮನೆಯಿಂದ ಕಟ್ಟಿಗೆ ತರಲು ಹೊರಡುವ ವೇಳೆ ಕತ್ತಿ ಹಿಡಿದು ತೆರಳಿದ್ದರು. ಸಂಜೆಯವರೆಗೂ ಮನೆಗೆ ಬಾರದ ಇವರಿಗಾಗಿ ಮನೆಯವರು ಮತ್ತು ಊರವರು ಹುಡುಕಾಟ ಆರಂಭಿಸಿದ್ದರು. ಆದರೆ ಸುಬ್ಬಣ್ಣ ನಾಯ್ಕ್ ಪತ್ತೆಯಾಗಿರಲಿಲ್ಲ. ನಿನ್ನೆ ಸಂಜೆ ಸುಬ್ಬಣ್ಣ ನಾಯ್ಕ್ ನೈತಾಡಿ ಸಮೀಪ ನಡೆದುಕೊಂಡು ಹೋಗುತ್ತಿದ್ದ ಬಗ್ಗೆ ಇಂದು ಬೆಳಗ್ಗೆ ಮಾಹಿತಿ ಲಭಿಸಿದ ಹಿನ್ನಲೆಯಲ್ಲಿ ನೈತಾಡಿ, ಮೊಟ್ಟತ್ತಡ್ಕ, ಸಂಪ್ಯ ಭಾಗದಲ್ಲಿ ಹುಡುಕಾಟ ನಡೆಸಲಾಗಿತ್ತು. ಕೊನೆಗೂ ಸಂಪ್ಯ ಕಮ್ಮಾಡಿ ಮೈದಾನದ ಬಳಿ ತೆಂಗಿನ ಗರಿಯೊಂದನ್ನು ಎರಳೆದುಕೊಂಡು ಹೋಗುತ್ತಿದ್ದ ಸುಬ್ಬಣ್ಣ ನಾಯ್ಕ್ ಹುಡುಕಾಡುತ್ತಿದ್ದವರ ಕಣ್ಣಿಗೆ ಬಿದ್ದಿದ್ದಾರೆ. ಕಳೆದ ರಾತ್ರಿ ಅವರು ಎಲ್ಲಿದ್ದರು ಎನ್ನುವ ಬಗ್ಗೆ ಅವರಿಗೆ ನೆನಪಿಲ್ಲ. ಆದರೆ ಪರಿಸರದ ಜನ ಅವರಿಗೆ ಅಂಗಿ, ಕೊಡೆ, ಮತ್ತು ಕುಡಿಯಲು ಚಹಾ ನೀಡಿ ಮಾನವೀಯತೆ ಮೆರೆದಿದ್ದಾರೆ. ಆರೋಗ್ಯವಾಗಿ ಸುಬ್ಬಣ್ಣ ನಾಯ್ಕ್ ಮತ್ತೆ ಮನೆಗೆ ವಾಪಾಸ್ಸಾಗಿದ್ದು, ಮನೆಯವರಿಗೆ ಮತ್ತು ಊರಿನವರಿಗೆ ಸಂತಸ ತಂದಿದೆ.
ನೆನೆಪಿನ ಶಕ್ತಿ ಕಳೆದುಕೊಂಡಿರುವ 85 ವರ್ಷ ವಯಸ್ಸಿನ ಸುಬ್ಬಣ್ಣ ನಾಯ್ಕ್ ಅವರಿಗೆ ಆಹಾರ ಬಟ್ಟೆ, ಕೊಡೆ, ನೀಡಿ ಸಹಕರಿಸಿದ ಹೃದಯವಂತರಿಗೆ ಸುಬ್ಬಣ್ಣ ನಾಯ್ಕ್ ಅವರ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ. ಸುಬ್ಬಣ್ಣ ನಾಯ್ಕ ಅವರನ್ನು ಹುಡುಕಾಡಲು ಪುತ್ರ ಪುರುಷೋತ್ತಮ ಅವರೊಂದಿಗೆ ಶಿವರಾಂ ಭಟ್ ಪೆರ್ಲಂಪಾಡಿ, ಜನಾರ್ಧನ, ಭವಿತ್, ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಯುವಕರು ಸಹಕರಿಸಿದ್ದರು.