ರಾಮಕುಂಜ: ಯುವ ಜನಾಂಗ ದೇಶದ ದೊಡ್ಡ ಸಂಪನ್ಮೂಲ. ಸುಸಂಸ್ಕೃತ ಯುವಕರು ಮಾತ್ರ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಯಶಸ್ವಿಯಾಗಬಲ್ಲರು. ಹೆತ್ತವರು, ಗುರುಗಳು ಹಾಗೂ ತಾಯಿ ನೆಲವನ್ನು ಸದಾ ಗೌರವದಿಂದ ಕಾಣುವ ಗುಣ ಯುವಕರಲ್ಲಿ ಇರಬೇಕು. ರಾಷ್ಟ್ರಭಕ್ತಿ, ರಾಷ್ಟ್ರಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಗುಣ, ನವ ಜನಾಂಗದಲ್ಲಿದ್ದಾಗ ಸುಂದರ ಭವಿಷ್ಯದ ಕನಸು ನನಸಾಗಬಹುದು. ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ಜೀವನವನ್ನು ಸ್ವೀಕರಿಸಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಕೃಷ್ಣ ಶೆಟ್ಟಿ ಕಡಬ ಹೇಳಿದರು.
ಅವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಸಂಘಗಳ ಉದ್ಘಾಟನೆಯನ್ನು ನೆರವೇರಿಸಿ ಮಾತಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಮಾತನಾಡಿ, ನಾಯಕರಲ್ಲಿ ಸಮಸ್ಯೆಗಳನ್ನು ಜಟಿಲಗೊಳಿಸದೆ, ಅವುಗಳಿಗೆ ಪರಿಹಾರ ಕಾಣುವ ಗುಣ ಬೆಳೆಯಲಿ. ಹಿರಿಯರಿಂದ ಯೋಗ್ಯ ಮಾರ್ಗದರ್ಶನವನ್ನು ಪಡೆದುಕೊಂಡು ಯಶಸ್ವಿ ಯೋಜನೆಗಳನ್ನು ಕಾರ್ಯಗತಗೊಳಿಸಿರಿ ಎಂದು ಕರೆ ನೀಡಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಪ್ರಸಾದ್ ನಾಯಕತ್ವದ ಹಿನ್ನೆಲೆಯಲ್ಲಿ ಎಲ್ಲರ ಸಹಕಾರವನ್ನು ಕೋರಿದರು. ಪ್ರಾಂಶುಪಾಲ ಗಣರಾಜ ಕುಂಬಳೆ ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿ ನಾಯಕರಿಗೆ ಬೋಧಿಸಿದರು. ಉಪನ್ಯಾಸಕಿ ಸವಿತಾ ಪಿ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರದ್ಧಾ ಯು.ಎಸ್. ವಂದಿಸಿದರು. ಉಪನ್ಯಾಸಕ ದಯಾನಂದ ನಿರೂಪಿಸಿದರು. ವಿದ್ಯಾರ್ಥಿನಿ ಅಮೃತ ಪ್ರಾರ್ಥನೆ ಗೀತೆ ಹಾಡಿದರು.