ರಾಮಕುಂಜ: ಯಕ್ಷಗಾನ ಕಲೆಯು ಅತ್ಯಂತ ಶ್ರೀಮಂತ ಕಲೆ. ಇದರಲ್ಲಿ ಜಾನಪದ ಅಂಶಗಳನ್ನು ಒಳಗೊಂಡ ಶಾಸ್ತ್ರೀಯ ಅಂಶಗಳು ಮೇಳೈಸಿವೆ. ಕೇರಳ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ, ಅನ್ಯ ರಾಜ್ಯಗಳಲ್ಲಿ ಇದು ಪ್ರವೃತ್ತವಾಗಿದೆ. ಸಂಗೀತ, ನಾಟ್ಯ, ವರ್ಣ ಚಿತ್ತಾರಗಳೊಂದಿಗೆ ಸರ್ವಜನಾಕರ್ಷಕವಾಗಿ, ಸರ್ವಜನಾದರಣೀಯವಾಗಿ ಯಕ್ಷಗಾನವು ಆಬಾಲ ವೃದ್ಧರನ್ನು ಏಕಕಾಲದಲ್ಲಿ ರಂಜಿಸುತ್ತದೆ. ಪುರಾಣ, ಇತಿಹಾಸ, ವರ್ತಮಾನಗಳನ್ನು ಏಕತ್ರ ತರುವ ಸಾಮರ್ಥ್ಯ ಯಕ್ಷಗಾನಕ್ಕಿದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ತುಂಬಾ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ’ಯಕ್ಷನಂದನ’ದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಶ್ರೀಪತಿ ಕಲ್ಲೂರಾಯ ಹೇಳಿದರು.
ಅವರು ಯಕ್ಷನಂದನ ಕಲಾಸಂಘ ಗೋಕುಲನಗರ ಇವರು ಬೆಳ್ತಂಗಡಿ ತಾಲೂಕಿನ ಅಂಡೆತಡ್ಕ ಸರಕಾರಿ ಶಾಲೆಯಲ್ಲಿ ಆಯೋಜಿಸಿದ ಯಕ್ಷಗಾನ ಬಣ್ಣಗಾರಿಕೆ ಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುರಳಿಕೃಷ್ಣ ಬಡಿಲ ಅವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಸಾಮಾಜಿಕ ಮುಂದಾಳು ಸುಂದರ ಶೆಟ್ಟಿ ಶುಭಾಶಯ ನುಡಿಗಳನ್ನು ಶಿಬಿರಾರ್ಥಿಗಳಿಗೆ ಹೇಳಿದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ, ಶಾಲಾ ಮುಖ್ಯಗುರು ಕೃಷ್ಣಪ್ಪ ಪೂಜಾರಿ, ನಾಟ್ಯಾಭ್ಯಾಸಿಗಳ ಪೋಷಕರ ಸಂಘದ ಅಧ್ಯಕ್ಷೆ ಧನ್ಯಶ್ರೀ ಎಣ್ಮಾಡಿ, ನಾಟ್ಯಗುರು ಎಡಮಂಗಲ ಲಕ್ಷಣಾಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಸ್ವಾಗತಿಸಿದರು. ನಾಟ್ಯ ತರಬೇತಿ ಸಂಚಾಲಕ ಭಾಸ್ಕರ ಬಟ್ಟೋಡಿ ವಂದಿಸಿದರು. ಸಂಘದ ಕಾರ್ಯದರ್ಶಿ ಹರಿಕಿರಣ್ ಕೊಯಿಲ ಕಾರ್ಯಕ್ರಮ ನಿರೂಪಿಸಿದರು