34 ನೆಕ್ಕಿಲಾಡಿ: 2 ಪ್ರತ್ಯೇಕ ದೂರು-ಗ್ರಾ.ಪಂ. ಅಧ್ಯಕ್ಷೆ ಉಪಾಧ್ಯಕ್ಷರ ಸಹಿತ 13ಮಂದಿ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು

0

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ, ಉಪಾಧ್ಯಕ್ಷ, 4 ಮಂದಿ ಸದಸ್ಯರು ಸೇರಿದಂತೆ ಒಟ್ಟು 13 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.
34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ. ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಅ.18ರಂದು ಮಧ್ಯಾಹ್ನ 2ಗಂಟೆಯ ಸಮಯಕ್ಕೆ ನಾನು, ಗ್ರಾ.ಪಂ. ಸದಸ್ಯ ರಮೇಶ್ ನಾಯ್ಕ ಅವರೊಂದಿಗೆ 34 ನೆಕ್ಕಿಲಾಡಿ ಗ್ರಾಮದ ಬೀತಲಪ್ಪು ನೂತನ ಅಂಗನವಾಡಿ ಪರಿಶೀಲನೆಗೆ ಹೋಗಿದ್ದು, ಬೀತಲಪ್ಪು ವಿವಾದಿತ ಸ್ಥಳದ ರಸ್ತೆಯ ಬದಿಯಲ್ಲಿ ಹೋಗುತ್ತಿದ್ದಾಗ ಅಲ್ಲಿ ಅಳತೆ ಪ್ರಕ್ರಿಯೆಯ ಸಿದ್ಧತೆ ಕಂಡು ಬಂದಿತ್ತು.

ನಾನು ಹಾಗೂ ರಮೇಶ ನಾಯ್ಕ ಅಲ್ಲಿ ನಿಲ್ಲಿಸಿ ವಿವಾದಿತ ವಿಚಾರವನ್ನು ವಿಮರ್ಶೆ ನಡೆಸಿ, ಆ ಜಾಗದ ಕೇಸು ಇರುವುದರಿಂದ ಮತ್ತು ಅಂಬೇಡ್ಕರ್ ಭವನಕ್ಕೆ ಸಾರ್ವಜನಿಕರ ಕೋರಿಕೆಯಂತೆ ಮೀಸಲಿರಿಸುವ ಪ್ರಸ್ತಾಪ ಇರುವುದರಿಂದ ಪಂಚಾಯತ್‌ಗೆ ಮಾಹಿತಿ ನೀಡದೆ ಇರುವುದರಿಂದ ಆಕ್ಷೇಪ ಹಾಕಿರುತ್ತೇವೆ. ಅದರಂತೆ ಸರ್ವೇಯರ್ ಅಳತೆಯನ್ನು ನಿಲ್ಲಿಸಿ ಅಲ್ಲಿಂದ ತೆರಳಿರುತ್ತಾರೆ. ಬಳಿಕ ನಾನು ಹಾಗೂ ರಮೇಶ ನಾಯ್ಕ ಬೀತಲಪ್ಪು ನೂತನ ಅಂಗನವಾಡಿ ಪರಿಶೀಲನೆಗೆ ಹೋಗಿ ಬರುವಾಗ ಬೀತಲಪ್ಪುವಿನ ಅಶೋಕ್ ನಾಯಕ್ ಹಾಗೂ ಗಣೇಶ್ ನಾಯಕ್ ಎಂಬವರು ನಮ್ಮಿಬ್ಬರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದದ್ದಲ್ಲದೆ, ಜಾತಿ ನಿಂದನೆಯನ್ನು ಮಾಡಿದ್ದಾರೆ ಹಾಗೂ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಅಶೋಕ್ ನಾಯಕ್ ಹಾಗೂ ಗಣೇಶ್ ನಾಯಕ್ ಎಂಬವರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಬೀತಲಪ್ಪುವಿನ ಶಂಭು ಮುಗೇರ ಎಂಬವರ ಪುತ್ರ ಉಮೇಶ ಎಸ್. ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಅ.19ರಂದು ರಾತ್ರಿ ಸುಮಾರು 7ರಿಂದ 7:30ರ ಸಮಯದಲ್ಲಿ ತನ್ನ ಮನೆಗೆ ಅಕ್ರಮವಾಗಿ ಪ್ರವೇಶಿಸಿದ 34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯರಾದ ಪ್ರಶಾಂತ್, ರಮೇಶ್, ವಿಜಯಕುಮಾರ್, ಸ್ವಪ್ನ, ಉಪಾಧ್ಯಕ್ಷ ಹರೀಶ್ ಡಿ., ಅಧ್ಯಕ್ಷೆ ಸುಜಾತ ರೈ, ಸ್ಥಳೀಯರಾದ ಮಲ್ಲೇಶ್, ಶ್ರೀಮತಿ ರೇಖಾ, ಅಶ್ವಿನ್, ವೀಣಾ, ಶಕುಂತಳಾ ಎಂಬವರು ನನಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಲ್ಲದೆ, ನೀನು ತಾರಾ ನಾಯಕ್‌ಗೆ ಬೆಂಬಲ ನೀಡುತ್ತೀಯ ಎಂದು ನನ್ನ ಮೈ ಮೇಲೆ ಕೈ ಹಾಕಿ ದೂಡಿ, ನನ್ನ ಪತ್ನಿಯ ಮೇಲೆ ದೌರ್ಜನ್ಯ ಮಾಡಲು ಬಂದಿದ್ದಲ್ಲದೆ, ನಿನಗೆ ಈ ಊರಲ್ಲಿ ನೆಲೆ ಇಲ್ಲದ ಹಾಗೆ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಆರೋಪಿಗಳಾದ 34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯರಾದ ಪ್ರಶಾಂತ್, ರಮೇಶ್, ವಿಜಯಕುಮಾರ್, ಸ್ವಪ್ನ, ಉಪಾಧ್ಯಕ್ಷ ಹರೀಶ್ ಡಿ., ಅಧ್ಯಕ್ಷೆ ಸುಜಾತ ರೈ, ಸ್ಥಳೀಯರಾದ ಮಲ್ಲೇಶ್, ಶ್ರೀಮತಿ ರೇಖಾ, ಅಶ್ವಿನ್, ವೀಣಾ, ಶಕುಂತಳಾ ಎಂಬವರ ಮೇಲೆ ದಲಿತ ದೌರ್ಜನ್ಯ ತಡೆಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here