ದೇವರ ಚಿನ್ನಾಭರಣ ನಾಪತ್ತೆ ಪ್ರಕರಣ: 12 ಮಂದಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು

0

ಉಪ್ಪಿನಂಗಡಿ: ಪೆರ್ನೆಯ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳೆಂದು ಹೆಸರಿಸಲಾದ ಟ್ರಸ್ಟ್ ಅಧ್ಯಕ್ಷ ಭರತ್ ಕುಮಾರ್ ಅರಿಗ ಪಟ್ಟೆಗುತ್ತು, ಪಡ್ನೂರು ಗ್ರಾಮದ ಅವಿನಾಶ್ ಜೈನ್ ಪರಂಗಾಜೆ ಹಾಗೂ ಸಮಿತಿಯ 12 ಮಂದಿ ಸದಸ್ಯರಿಗೆ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪೆರ್ನೆಯ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಈ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಆ ಬಳಿಕ ಇಲ್ಲಿ ಆಡಳಿತ ವಿವಾದಗಳು ಕಂಡು ಬಂದಿದ್ದರಿಂದ ಸರಕಾರ ದೇವಾಲಯಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಅಧಿಕಾರ ಸ್ವೀಕರಿಸಿದ ಅವರು ಅ.15ರಂದು ಭಕ್ತಾದಿಗಳ ಸಮ್ಮುಖದಲ್ಲಿ ಮಹಜರು ನಡೆಸಿದಾಗ ಚಿನ್ನದ ಸರಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು.

ಚಿನ್ನದ ಸರಗಳು ನಾಪತ್ತೆಯಾಗಿರುವ ಕುರಿತು ದೇವಾಲಯದ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಕಬ್ಬಿಣದ ಕಪಾಟನ್ನು ದೇವಾಲಯದ ಕಾರ್ಯಾಲಯದಿಂದ ಕಳ್ಳತನ ಮಾಡಿ ಅದನ್ನು ಒಡೆದು ಅದರಲ್ಲಿದ್ದ ದಾಖಲೆಪತ್ರಗಳನ್ನು ನಾಶ ಮಾಡಲಾಗಿದ್ದು, ಆ ಖಾಲಿ ಕಪಾಟು ಭದ್ರತಾ ಕೊಠಡಿಯಲ್ಲಿರುವುದು ಮಹಜರು ಸಂದರ್ಭ ಕಂಡು ಬಂದಿದೆ. ಭದ್ರತಾ ಕೊಠಡಿಯ ಕೀಲಿಕೈಯನ್ನು ಅನಧಿಕೃತವಾಗಿ ಹುಟ್ಟು ಹಾಕಿದ ಖಾಸಗಿ ಟ್ರಸ್ಟ್ ಮತ್ತು ಅದಕ್ಕೆ ಪೂರಕವಾದ ಸಮಿತಿಗೆ ದೇವಾಲಯದ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು, ಟಸ್ಟ್ನ ಅಧ್ಯಕ್ಷ ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಪಡ್ನೂರು ಗ್ರಾಮದ ಅವಿನಾಶ್ ಜೈನ್ ಪರಂಗಾಜೆ ಇವರುಗಳು ಹಾಗೂ ಇದಕ್ಕೆ ಪೂರಕವಾದ ಸಮಿತಿಯ ಸದಸ್ಯರು ಕಾರಣಕರ್ತರಾಗಿದ್ದು, ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಆಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಂತೆಯೇ , ಅ.17ರಂದು ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟುರವರು ಚಿನ್ನಾಭರಣದೊಂದಿಗೆ ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಅವರು ಚಿನ್ನಾಭರಣವನ್ನು ಉಪ್ಪಿನಂಗಡಿಯ ಖಾಸಗಿ ಹಣಕಾಸು ಸಂಸ್ಥೆಯೊAದರಲ್ಲಿ ಅಡಮಾನವಿರಿಸಿ ಹಣ ಪಡೆದಿದ್ದರು. ಅವರು ಹಣಕಾಸು ಸಂಸ್ಥೆಯಿಂದ ಚಿನ್ನಾಭರಣವನ್ನು ಬಿಡಿಸಿ ನೇರವಾಗಿ ಠಾಣೆಗೆ ಬಂದಿದ್ದ ವಿಚಾರವನ್ನು ತಿಳಿದುಕೊಂಡ ಪೊಲೀಸರು, ಅಧಿಕಾರ ದುರುಪಯೋಗಪಡಿಸಿಕೊಂಡ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ದೇವಾಲಯದಲ್ಲಿ ಮಹಜರು ನಡೆಸಿ ಇಲಾಖಾ ಕ್ರಮಕೈಗೊಂಡಿದ್ದರು. ನ್ಯಾಯಾಲಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಸಮಿತಿಯ ಇತರರ ಮೇಲೂ ಪ್ರಕರಣ ದಾಖಲಾಗಿದ್ದು, ಭರತ್ ಕುಮಾರ್ ಪಿ., ಬಿಳಿಯೂರು ಧನ್ಯಕುಮಾರ್ ರೈ, ಪ್ರಶಾಂತ್ ಎನ್., ಕೆ. ರಘುನಾಥ, ಅವಿನಾಶ್, ಕೇಶವ ಸುಣ್ಣಾನ, ಸುರೇಶ್ ಎನ್., ಪಿ. ನವೀನ್ ಕುಮಾರ್, ಸುರೇಶ ಕೆ., ಅಶೋಕ ಕೆ., ಡಿ. ಚಂದಪ್ಪ ಪೂಜಾರಿ, ಲೊಕೇಶ್ ಅವರಿಗೆ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಅ. 19ರಂದು ಆದೇಶಿಸಿದೆ.

ಇದೊಂದು ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾದ ಅಪರೂಪದ ಪ್ರಕರಣವಾಗಿದೆ. ದೇವಾಲಯದ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ಸಂಬAಧಿಸಿ ಸಮಿತಿಯ ಎಲ್ಲರ ಮೇಲೆಯೂ ದೂರು ದಾಖಲಾಗಿತ್ತು. ಚಿನ್ನವನ್ನು ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು ತಂದೊಪ್ಪಿಸಿ, ಶರಣಾಗಿದ್ದರೂ ಇತರ 12 ಮಂದಿಯೂ ಬಂಧನ ಭೀತಿ ಎದುರಿಸುತ್ತಿದ್ದು, ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಅ.25ಕ್ಕೆ ಮುಂದೂಡಿತ್ತು. ಈ ಹಿನ್ನೆಲೆಯಲ್ಲಿ ಅವರ ವಕೀಲನಾಗಿರುವ ನಾನು ಮಧ್ಯಂತರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಜಾಮೀನು ಅರ್ಜಿ ಸಲ್ಲಿಸಿರುವವರು ಕಾನೂನನ್ನು ಪಾಲಿಸುವ, ಸಮಾಜದಲ್ಲಿ ಗಣ್ಯ ವ್ಯಕ್ತಿಗಳೆನಿಸಿಕೊಂಡ ನಾಗರಿಕರಾಗಿದ್ದಾರೆ. ಅಲ್ಲದೇ, ಕದ್ದ ಸೊತ್ತನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.

ಕಳೆದ ಆಗಸ್ಟ್ನಲ್ಲಿ ಚಿನ್ನವನ್ನು ಖಾಸಗಿ ಹಣಕಾಸು ಸಂಸ್ಥೆಯಲ್ಲಿರಿಸಲಾಗಿದೆ. ಆದರೆ ಈ ಸಮಿತಿಯಾಗಿದ್ದು ಸೆಪ್ಟೆಂಬರ್ ತಿಂಗಳಲ್ಲಿ. ದೇವಾಲಯದ ಆಡಳಿತ ವಿವಾದದ ಕಾರಣಕ್ಕೆ ಇಲ್ಲಿ ಸಮಿತಿಯವರ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಲಾಗಿದೆ. ಈಗ ರಜಾದಿನಗಳಾಗಿದ್ದು, ನವರಾತ್ರಿ ಹಬ್ಬ ನಡೆಯುತ್ತಿದೆ. ಅರ್ಜಿದಾರರುಗಳು ಪೂಜೆಗಳಿಗೆ ಹಾಜರಾಗಬೇಕಿದೆ. ಅಲ್ಲದೇ, ದೇವಾಲಯದ ಆಡಳಿತ ವಿವಾದಕ್ಕೆ ಸಂಬಂಧಿಸಿ ಒಂದು ಸಿವಿಲ್ ಕೇಸ್ ಕೂಡಾ ನ್ಯಾಯಾಲಯದಲ್ಲಿದೆ ಇತ್ಯಾದಿ ವಿಶೇಷ ಕಾರಣಗಳನ್ನು ನೀಡಿದಾಗ ನನ್ನ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ ಎಂದು ಆರೋಪಿಗಳ ಪರ ವಾದ ಮಂಡಿಸಿರುವ ವಕೀಲ ಮಹೇಶ್ ಕಜೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here