ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆ

0

ಕಂಪದಲ್ಲಿ ಅನಧಿಕೃತ ಮನೆ ನಿರ್ಮಾಣಕ್ಕೆ ಆಕ್ರೋಶ
ನೈತ್ತಾಡಿಯಲ್ಲಿ ನಾಲ್ಕು ಅನಧಿಕೃತ ಮನೆ ನಿರ್ಮಾಣ-ಚರ್ಚೆ

ಪುತ್ತೂರು: ಮುಂಡೂರು ಗ್ರಾ.ಪಂ ಸಾಮಾನ್ಯ ಸಭೆ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಅ.20ರಂದು ನಡೆಯಿತು.

ಹೆಚ್ಚಿನ ಅನುದಾನಕ್ಕೆ ಆಗ್ರಹ:
ಮುಂಡೂರು ಗ್ರಾಮದ 189 ಮತ್ತು 190 ವಾರ್ಡ್‌ಗೆ ಕಡಿಮೆ ಅನುದಾನ ಇಡಲಾಗಿದ್ದು ಅಭಿವೃದ್ಧಿಗೆ ತೊಡಕಾಗಿದೆ. ಹಾಗಾಗಿ ಈ ಎರಡು ವಾರ್ಡ್‌ಗೆ ಹೆಚ್ಚಿನ ಅನುದಾನ ನೀಡುವಂತೆ ಆ ಭಾಗದ ಸದಸ್ಯ ಉಮೇಶ್ ಗೌಡ ಅಂಬಟ ಆಗ್ರಹಿಸಿದರು.

ರಸ್ತೆಗೆ ಬೇಲಿ-ತೆರವಿಗೆ ಆಗ್ರಹ
ಅಮ್ಮುಂಜದಲ್ಲಿ ಮುಳಿಯ ಸಂಸ್ಥೆಯವರು ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿದ್ದು ಅದಿನ್ನೂ ತೆರವುಗೊಂಡಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಬಾಬು ಕಲ್ಲಗುಡ್ಡೆ ಅಸಮಾಧಾನ ವ್ಯಕ್ತಪಡಿಸಿದರು.

ಡೋರ್ ನಂಬರ್ ನೀಡಲು ಆಗ್ರಹ:
ಬಾಳಾಯದಲ್ಲಿ ಅಕ್ಕರಿ ಆಚಾರ್ಯ ಎಂಬವರಿಗೆ ಮನೆಗೆ ಡೋರ್ ನಂಬರ್ ನೀಡಿಲ್ಲ ಎಂದು ಸದಸ್ಯ ಮಹಮ್ಮದ್ ಆಲಿ ಹೇಳಿದರು.

ಕಂಪದಲ್ಲಿ ಅನಧಿಕೃತ ಮನೆ ನಿರ್ಮಾಣ:
ಕಂಪದಲ್ಲಿ ಸರಕಾರಿ ಜಾಗದಲ್ಲಿ ಅನಧಿಕೃತ ಮನೆ ನಿರ್ಮಾಣ ಆಗುತ್ತಿದ್ದು ಈ ಬಗ್ಗೆ ಎ.ಸಿ.ಯವರಿಗೆ ದೂರು ಹೋಗಿದ್ದು ಗ್ರಾಮ ಆಡಳಿತಾಧಿಕಾರಿಯವರು ವರದಿ ಕೂಡಾ ಮಾಡಿದ್ದಾರೆ. ಅಲ್ಲಿ ನಿರ್ಮಾಣ ಆಗುತ್ತಿರುವ ಕಟ್ಟಡವನ್ನು ನೆಲಸಮ ಮಾಡಲು ಆದೇಶ ಆಗಿದ್ದರೂ ಗ್ರಾಮ ಆಡಳಿತಾಧಿಕಾರಿಯವರು ಅಳತೆಗೆ ಹೋಗಿದ್ದಾರೆ. ಇದೆಲ್ಲಾ ಯಾಕೆ ಹೀಗಾಗುತ್ತಿದೆ, ಇದರ ಹಿಂದಿರುವ ಅಸಲಿ ವಿಚಾರವೇನು ಎಂದು ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ ಉತ್ತರಿಸಿ ನಾನು ತಪ್ಪು ಮಾಡಿದ್ದಲ್ಲಿ ನನ್ನ ವಿರುದ್ಧ ನೀವು ಕ್ರಮ ತೆಗೆದುಕೊಳ್ಳುವುದರಕ್ಕೆ ಅಭ್ಯಂತರವಿಲ್ಲ, ಅಲ್ಲಿನ ವಿಚಾರದ ಬಗ್ಗೆ ನಾನು ಮೊದಲೇ ವರದಿ ಮಾಡಿದ್ದೇನೆ ಎಂದರು.
ಕಮಲೇಶ್ ಸರ್ವೆದೋಳಗುತ್ತು ಮಾತನಾಡಿ ನೀವು ಸಮಾಧಾನಕ್ಕೆ ಬೇಕಾಗಿ ಉತ್ತರ ನೀಡಬೇಡಿ, ಕಾನೂನು ಪ್ರಕಾರ ಕಾರ್ಯನಿರ್ವಹಿಸಿ, ಅಲ್ಲಿ ಅನಧಿಕೃತ ಮನೆ ನಿರ್ಮಾಣ ಆಗುತ್ತಿದ್ದು ಅವರು ದೃಢೀಕರಣ ಕೇಳಿದ್ದಾರೆ. ಗ್ರಾ.ಪಂ ಬಗ್ಗೆ ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಹೇಳಿದರು.
ಸದಸ್ಯ ಬಾಬು ಕಲ್ಲಗುಡ್ಡೆ ಮಾತನಾಡಿ ಕಂಪದಲ್ಲಿ ಕೆಲವು ಸಮಯಗಳ ಹಿಂದೆ ಭಾರತಿ ಎಂಬವರಿಗೆ ಡೋರ್ ನಂಬರ್, ವಿದ್ಯುತ್ ಎಲ್ಲವನ್ನು ಗ್ರಾ.ಪಂ ನೀಡಿದ್ದು ಗ್ರಾ.ಪಂನದ್ದು ಕೂಡಾ ತಪ್ಪು ಇದೆ ಎಂದು ಹೇಳಿದರು.

ಬದಿಯಡ್ಕದಲ್ಲಿ ನೀರಿನ ಸಂಪರ್ಕ ಕಡಿತ:
ಸದಸ್ಯೆ ಸುನಂದ ಮಾತನಾಡಿ ಬದಿಯಡ್ಕದಲ್ಲಿ ಮನೆಯೊಂದಕ್ಕೆ ಸರಬರಾಜಾಗುವ ನೀರಿನ ಪೈಪ್‌ಗೆ ಎಂಡ್ ಕ್ಯಾಪ್ ಹಾಕಿದ್ದು ಆ ಮನೆಯವರಿಗೆ ನೀರು ಇಲ್ಲದಾಗಿದೆ, ಈ ರೀತಿ ಯಾಕೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೈತ್ತಾಡಿಯಲ್ಲಿ ನಾಲ್ಕು ಅನಧಿಕೃತ ಮನೆ ನಿರ್ಮಾಣ:
ನೈತ್ತಾಡಿಯಲ್ಲಿ ನಾಲ್ಕು ಅನಧಿಕೃತ ಮನೆ ನಿರ್ಮಾಣ ಆಗುತ್ತಿದ್ದು ಅಲ್ಲಿಗೆ ಜೆಜೆಎಂನಲ್ಲಿ ನೀರಿನ ಕನೆಕ್ಷನ್ ಕೂಡಾ ಆಗಿದೆ ಎಂದು ಕೆಮ್ಮಿಂಜೆ ಗ್ರಾಮ ಆಡಳಿತಾಧಿಕಾರಿ ಸುಜಾತ ಅವರು ಮಾಹಿತಿ ನೀಡಿದರು.
ಅನಧಿಕೃತ ಮನೆ ನಿರ್ಮಾಣ ಮಾಡುವವರಿಗೆ ಗ್ರಾ.ಪಂ ನೀರಿನ ಕನೆಕ್ಷನ್ ಆಗುವುದಾದರೆ ಅದಕ್ಕೆ ಅರ್ಥವಿಲ್ಲ, ಅವರ ವಿರುದ್ಧ ಕ್ರಮಕ್ಕೆ ಮುಂದಾಗುವಾಗ ನಮಗೆ ಗ್ರಾ.ಪಂ.ನವರೇ ನೀರಿನ ಸಂಪರ್ಕ ಕೊಟ್ಟಿದ್ದಾರೆ ಎಂದು ಹೇಳುವ ಸಾಧ್ಯತೆ ಇದೆ, ಇಂತಹ ಸಂದರ್ಭದಲ್ಲಿ ನಾವು ಇಕ್ಕಟ್ಟಿಗೆ ಸಿಲುಕುತ್ತೇವೆ. ಈ ರೀತಿ ಆಗದಂತೆ ಗ್ರಾಮ ಪಂಚಾಯತ್ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಅನುದಾನ ಕಡಿಮೆ ನೀಡಿದ್ದಕ್ಕೆ ಅಸಮಾಧಾನ:
ಕ್ರಿಯಾ ಯೋಜನೆಯಲ್ಲಿ ತಮ್ಮ ವಾರ್ಡ್ ವ್ಯಾಪ್ತಿಗೆ ಅನುದಾನ ಕಡಿಮೆ ಇಡಲಾಗಿದೆ ಎಂದು ಸದಸ್ಯ ಬಾಬು ಕಲ್ಲಗುಡ್ಡೆ ಆಕ್ರೋಶ ವ್ಯಕ್ತಪಡಿಸಿ ಹೆಚ್ಚಿನ ಅನುದಾನ ಒದಗಿಸುವಂತೆ ಕೇಳಿಕೊಂಡರು. ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಉತ್ತರಿಸಿ ಹಾಗೆಲ್ಲಾ ಆಗುವುದಿಲ್ಲ, ಎಲ್ಲಾ ಕಡೆಗಳಿಗೂ ಒಂದೇ ರೀತಿ ಅನುದಾನ ನೀಡಲು ಆಗುವುದಿಲ್ಲ, ನೀವೆಲ್ಲಾ ಸಹಕಾರ ನೀಡಬೇಕು ಎಂದು ಹೇಳಿದರು.

ಸ್ಮಶಾನ ಕಟ್ಟಡ ವಿವಾದ-ಶಾಸಕರಿಗೆ ಅಭಿನಂದನೆ
ಮುಂಡೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಮಶಾನ ಕಟ್ಟಡಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯರು ಶಾಸಕರಿಗೆ ದೂರು ನೀಡಿರುವ ವಿಚಾರ ಪ್ರಸ್ತಾಪಗೊಂಡಿತು. ಸದಸ್ಯ ಕರುಣಾಕರ ಗೌಡ ಎಲಿಯ ಮಾತನಾಡಿ ದೂರು ನೀಡಿರುವ ವಿಚಾರದಲ್ಲಿ ಶಾಸಕರು ಅವರಿಗೆ ಮನವರಿಕೆ ಮಾಡುವ ಕಾರ್ಯ ಮಾಡಿದ್ದಾರೆ, ಹಾಗಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಸದಸ್ಯ ಉಮೇಶ್ ಗೌಡ ಅಂಬಟ ಮಾತನಾಡಿ ವರ್ಷದ ಹಿಂದೆಯಷ್ಟೇ ಇಲ್ಲಿಗೆ ಬಂದವರು ಸ್ಮಶಾನ ಕಟ್ಟಡಕ್ಕೆ ವಿರೋಧ ಮಾಡುತ್ತಿದ್ದು ಇದಕ್ಕೆ ಅರ್ಥವಿಲ್ಲ ಎಂದು ಹೇಳಿದರು.

ಶಾಲೆಯಲ್ಲಿ ಮಕ್ಕಳಿಗೆ ಹೊಡೆಯುತ್ತಾರೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ನಾಗರತ್ನ ಅವರು ತಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಕಮಲೇಶ್ ಸರ್ವೆದೋಳಗುತ್ತು ಮಾತನಾಡಿ ಕೆಲವು ಶಾಲೆಗಳಲ್ಲಿ ಶಿಕ್ಷಕ/ಶಿಕ್ಷಕಿಯವರು ಮಕ್ಕಳಿಗೆ ಹೊಡೆಯುವ ಪ್ರಕರಣ ನಡೆಯುತ್ತಿದೆ ಹಾಗಾಗಿ ನೀವು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಭೇಟಿ ನೀಡಬೇಕು ಮತ್ತು ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವ ಕಾರ್ಯ ಮಾಡಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ, ಉಪಾಧ್ಯಕ್ಷೆ ಯಶೋಧ ಅಜಲಾಡಿ, ಪಿಡಿಓ ಅಜಿತ್ ಜಿ.ಕೆ, ಕಾರ್ಯದರ್ಶಿ ಸೂರಪ್ಪ, ಮುಂಡೂರು-ಸರ್ವೆ ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ, ಕೆಮ್ಮಿಂಜೆ ಗ್ರಾಮ ಆಡಳಿತಾಧಿಕಾರಿ ಸುಜಾತ ಉಪಸ್ಥಿತರಿದ್ದರು.

ಸಭೆಯಲ್ಲಿ ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ದುಗ್ಗಪ್ಪ ಕಡ್ಯ, ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ಪುಷ್ಪಾ ಎನ್, ಅರುಣಾ ಎ.ಕೆ, ಕಾವ್ಯ ಕಡ್ಯ, ರಸಿಕಾ ರೈ ಮೇಗಿನಗುತ್ತು, ಕಮಲ, ವಿಜಯ ಕರ್ಮಿನಡ್ಕ, ದೀಪಿಕಾ ಸಿ.ಕೆ, ಪ್ರೇಮ ಎಸ್ ಹಾಗೂ ಪಜಿಮಣ್ಣು ಅಂಗನವಾಡಿ ಶಿಕ್ಷಕಿ ಧನ್ಯಶ್ರೀ ಉಪಸ್ಥಿತರಿದ್ದರು. ಗ್ರಾ.ಪಂ ಸಿಬ್ಬಂದಿಗಳಾದ ಕೊರಗಪ್ಪ ನಾಯ್ಕ, ಶಶಿಧರ ಕೆ ಮಾವಿನಕಟ್ಟೆ, ಸತೀಶ, ಕವಿತಾ, ಮೋಕ್ಷಾ,ಸತೀಶ ನರಿಮೊಗರು ಉಪಸ್ಥಿತರಿದ್ದರು. ಪಿಡಿಓ ಅಜಿತ್ ಜಿ.ಕೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here