ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಗಾಂಧೀಜಿವರ ಗ್ರಾಮ ಸ್ವರಾಜ್ಯದ ಕನಸು ಸಾಕಾರವಾಗಲಿ- ಡಾ| ಎ.ಪಿ ರಾಧಾಕೃಷ್ಣ

0

ಪುತ್ತೂರು: “ಭಾರತವು ಹಳ್ಳಿಗಳ ದೇಶ. ಹಳ್ಳಿಗಳು ಅಭಿವೃದ್ಧಿಹೊಂದಿದಾಗ ದೇಶವು ಬಲಿಷ್ಠವಾಗುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು ಹಳ್ಳಿಗಳ ಅಭಿವೃದ್ಧಿಯ ಬಗ್ಗೆ ಕಟಿಬದ್ಧರಾಗಬೇಕು. ಈ ಮೂಲಕ ಎನ್‌ ಎಸ್‌ ಎಸ್‌ ಸ್ವಯಂಸೇವಕರು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಬೇಕು” ಎಂದು ಸಂತ ಫಿಲೋಮಿನಾ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಎ ಪಿ ರಾಧಾಕೃಷ್ಣರವರು ಇತ್ತೀಚೆಗೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸುವ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.  ಎನ್‌ ಎಸ್‌ ಎಸ್‌ ಘಟಕಗಳು ಉತ್ತಮ ಧ್ಯೇಯವನ್ನು ಹೊಂದಿರಬೇಕು. ಹಳ್ಳಿ ಪ್ರದೇಶದ ಜನರಲ್ಲಿ ಸ್ವಚ್ಛತೆ, ಜಲಸಂರಕ್ಷಣೆ, ಆರೋಗ್ಯ, ಪರಿಸರ ಸಂರಕ್ಷಣೆ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಗ್ರಾಮದ ಹಾಗೂ ದೇಶದ ಅಭಿವೃದ್ಧಿಯ ಹರಿಕಾರರಾಗಬೇಕು ಎಂದು ಅವರು ಹೇಳಿದರು. ಕಾಲೇಜಿನ ಎನ್‌ ಎಸ್‌ ಎಸ್‌ ಘಟಕಗಳು ಸದಾ ಕ್ರಿಯಾಶೀಲವಾಗಿದ್ದು ಉತ್ತಮ ಕಾರ್ಯಕ್ರಮಗಳನ್ನು ಸಂಘಟಿಸಬೇಕು ಹಾಗೂ ಎನ್‌ ಎಸ್‌ ಎಸ್‌ನ ಸ್ವಯಂಸೇವಕರು ಘಟಕಗಳ ಎಲ್ಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ವಂ|ಡಾ.ಆಂಟೊನಿ ಪ್ರಕಾಶ್‌ ಮೊಂತೆರೋರವರು “ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಸಮಾಜದಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆದಿರುತ್ತಾರೆ. ಸಮಾಜದ ಈ ಋಣವನ್ನು ತೀರಿಸುವ ಸಲುವಾಗಿ ನಾವೆಲ್ಲರೂ ಈ ಸಮಾಜಕ್ಕೆ ನಮ್ಮ ಕೈಲಾದ ಸಹಾಯವನ್ನು ಮಾಡುವ ಅಗತ್ಯವಿದೆ. ಕಾಲೇಜಿನ ಎನ್‌ ಎಸ್‌ ಎಸ್‌ ಘಟಕಗಳು ಈ ಮಹತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು” ಎಂದು ಹೇಳಿದರು.

ದಿಶಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಎನ್‌ ಎಸ್‌ ಎಸ್‌ ಅಧಿಕಾರಿ ವಾಸುದೇವ ಎನ್‌ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಎನ್‌ ಎಸ್‌ ಎಸ್‌ ನನಗಾಗಿ ಅಲ್ಲ ನಿನಗಾಗಿ ಎಂಬ ಧ್ಯೇಯವಾಕ್ಯವನ್ನು ಹೊಂದಿದೆ. ಎನ್‌ ಎಸ್‌ ಎಸ್‌ ಸ್ವಯಂ ಸೇವಕರು ಸಮಾಜಸೇವೆ ಮಾಡುವುದರ ಮೂಲಕ ತಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಬೇಕು ತಾವು ಮಾಡುವ ಸೇವೆಯು ಭಗವಂತನ ಸೇವೆ ಎಂಬ ಉದಾತ್ತ ಮನೋಭಾವವನ್ನು ಹೊಂದಿರಬೇಕು” ಎಂದು ಹೇಳಿದರು. ಎನ್‌ ಎಸ್‌ ಎಸ್‌ ಅಧಿಕಾರಿ ಪುಷ್ಪಾ ಎನ್‌ ವಂದಿಸಿದರು. ಬಿಂದುಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎನ್‌ ಎಸ್‌ ಎಸ್‌ ಘಟಕಗಳ ನಾಯಕರಾದ ಮನೋಜ್‌, ಉಮಾ ಆಳ್ವ, ಸಿಂಚನ್‌ ಹಾಗೂ ಕೀರ್ತಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here