ದರ್ಬೆ ಗೂಡ್ಸ್ ವಾಹನ ಪಾರ್ಕಿಂಗ್ ಸ್ಥಳದ ಮೇಲ್ಛಾವಣಿ, ಶೌಚಾಲಯ, ಸಂಘದ ಕಛೇರಿ ಉದ್ಘಾಟನೆ

0

ಹೊಸ ಪರಿಕಲ್ಪನೆಯಲ್ಲಿ ಮಾದರಿ ನಿಲ್ದಾಣ ನಿರ್ಮಾಣವಾಗಿದೆ- ನಳಿನ್ ಕುಮಾರ್

ಪುತ್ತೂರು: ದ.ಕ.ಸಂಸದ ನಳಿನ್ ಕುಮಾರ್ ಕಟೀಲ್‌ರವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ರೂ.10 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ದರ್ಬೆ ಗೂಡ್ಸ್ ವಾಹನ ಚಾಲಕ ಮಾಲಕರ ಸಂಘದ ಗೂಡ್ಸ್ ವಾಹನ ಪಾರ್ಕಿಂಗ್ ಸ್ಥಳದ ಮೇಲ್ಛಾವಣಿ, ಶೌಚಾಲಯ ಹಾಗೂ ಸಂಘದ ಕಛೇರಿ ಕಟ್ಟಡದ ಉದ್ಘಾಟನೆ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲ್‌ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನನ್ನ ಅನುದಾನದಲ್ಲಿ ನಿರ್ಮಾಣಗೊಂಡ ಮೊದಲ ಗೂಡ್ಸ್ ವಾಹನ ನಿಲ್ದಾಣವಾಗಿದೆ. ಹೊಸ ಪರಿಕಲ್ಪನೆಯಲ್ಲಿ ತಂಗುದಾಣ ಚೆನ್ನಾಗಿ ಮೂಡಿ ಬಂದಿದೆ. ಪ್ರಧಾನ ಮಂತ್ರಿಯವರ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಹಾಗೂ ಸ್ವಚ್ಚ ಭಾರತ್ ಯೋಜನೆಯನ್ನು ಜೋಡಿಸುವ ಪ್ರಕ್ರಿಯೆ ನಡೆದಿದೆ. ಈ ಮೂರು ಯೋಜನೆಯನ್ನು ಅಳವಡಿಸಿಕೊಂಡು ತಂಗುದಾಣ ನಿರ್ಮಿಸಲಾಗಿದೆ. ನಿಲ್ದಾಣದಲ್ಲಿ ಅಳವಡಿಸಲಾದ ಗ್ರಂಥಾಲಯ ಜ್ಞಾನದ ವಿಕಸನಕ್ಕೆ ಪೂರಕವಾಗುತ್ತದೆ. ಇದೊಂದು ಮಾದರಿ ನಿಲ್ದಾಣ ಆಗಿದೆ ಎಂದರು. ನರೇಂದ್ರ ಮೋದಿ ಪ್ರದಾನಿಯಾದ ಬಳಿಕ ದೇಶದಲ್ಲಿ ಪರಿವರ್ತನೆಯ ಕಾಲ ಬಂದಿದೆ. ನರೇಂದ್ರ ಮೋದಿಯವರು ದ.ಕ.ಜಿಲ್ಲೆಗೆ ಕಳೆದ ಹತ್ತು ವರ್ಷದಲ್ಲಿ ರೂ.52 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಇದರಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಾಗಿವೆ. ಪುತ್ತೂರಿನಲ್ಲಿಯೂ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ ಎಂದು ಹೇಳಿದ ಅವರು ಈ ತಂಗುದಾಣವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ ಮುಂದಿನ ದಿನಗಳಲ್ಲಿ ಯಾವುದೇ ಸಹಕಾರ ನೀಡಲು ಬದ್ಧ ಎಂದರು.


ಪುತ್ತೂರು ಕಸಾಪ ಅಧ್ಯಕ್ಷ ಉಮೇಶ್ ನಾಯಕ್ ಪ್ರಾಸ್ತಾವಿಕ ಮಾತನಾಡಿ ಕಳೆದ 40 ವರ್ಷಗಳಿಂದ ಅಸ್ತಿತ್ವದಲ್ಲಿರುವ ಗೂಡ್ಸ್ ವಾಹನ ಚಾಲಕ ಮಾಲಕರ ಸಂಘದಲ್ಲಿ 54 ವಾಹನಗಳು ಕಾರ್ಯಾಚರಿಸುತ್ತಿದೆ. ಈಗ ಅಧಿಕೃತವಾಗಿ ವ್ಯವಸ್ಥಿತವಾದ ಗೂಡ್ಸ್ ವಾಹನ ಪಾರ್ಕಿಂಗ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸಂಸದ ನಳಿನ ಕುಮಾರ್ ಕಟೀಲ್‌ರವರಿಗೆ ಮನವಿ ಮಾಡಿದ ಮೇರೆಗೆ ಸಂಸದರು ತಮ್ಮ ನಿಧಿಯಿಂದ ಅನುದಾನ ಒದಗಿಸಿ ಸೂರನ್ನು ಕಲ್ಪಿಸಿ ಕೊಟ್ಟಿದ್ದಾರೆ ಎಂದು ಹೇಳಿ ಸಂಸದರಿಗೆ ದನ್ಯವಾದ ಸಲ್ಲಿಸಿದರು.

ಗೌರವಾರ್ಪಣೆ: ಸಂಸದರ ನಿಧಿಯಿಂದ ಅನುದಾನ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್, ತಂಗುದಾಣ, ಸಂಘದ ಕಚೇರಿ ಹಾಗೂ ಶೌಚಾಲಯದ ಕಾಮಗಾರಿ ನಿರ್ವಹಿಸಿದ ಮಾಧವ ಮಾವೆಯವರನ್ನು ಸಂಘದ ವತಿಯಿಂದ ಶಲ್ಯ, ಪೇಟ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮಾಜಿ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಳ್ಯೊಟ್ಟು, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ನಗರಸಭಾ ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಹಿಂದೂ ಜಾಗರಣ ವೇದಿಕೆಯ ಅಜಿತ್ ರೈ ಹೊಸಮನೆ, ಸಚಿನ್ ಟ್ರೇಡಿಂಗ್ ಕಂಪೆನಿಯ ಮಂಜುನಾಥ ನಾಯಕ್, ಗೂಡ್ಸ್ ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷ ದಿನೇಶ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಂಗುದಾಣದಲ್ಲಿ ಬೆಳಿಗ್ಗೆ ಗಣಪತಿ ಹವನ ನಡೆಯಿತು. ಸಂಘದ ಅದ್ಯಕ್ಷ ದಿನೇಶ್ ನಾಯಕ್, ಕೋಶಾಧಿಕಾರಿ ಮೋಹನ್ ನಾಯಕ್, ಮಾಜಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಪದಾಧಿಕಾರಿಗಳಾದ ಪುರುಷೋತ್ತಮ ಗೌಡ, ರಘುರಾಮ ಪಾಟಾಳಿ, ಸುರೇಶ್ ಗೌಡ, ಹರೀಶ್ ನಾಯಕ್, ರಾಜೇಶ್ ಪರ್ಲಡ್ಕ, ಸದಸ್ಯ ಖಲಂದರ್ ಶಾಫಿರವರು ಅತಿಥಿಗಳನ್ನು ಗೌರವಿಸಿದರು. ಸಂಘದ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು. ಸಾಗರಿಕಾ ಪ್ರಾರ್ಥಿಸಿದರು. ವೈಷ್ಣವಿ ಸ್ವಾಗತಿಸಿ ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ತಂಗುದಾಣದಲ್ಲಿ ಗ್ರಂಥಾಲಯ
ನೂತನ ತಂಗುದಾಣದಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ ಪರಿಷತ್ ವತಿಯಿಂದ ಗ್ರಂಥಾಲಯದ ವ್ಯವಸ್ಥೆ ಮಾಡಲಾಗಿದ್ದು ಮಿತ್ರಂಪಾಡಿ ಜಯರಾಮ ರೈರವರು ಈ ಗ್ರಂಥಾಲಯಕ್ಕೆ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದರು. ಈ ಗ್ರಂಥಾಲಯವನ್ನು ಸಾಂಕೇತಿಕವಾಗಿ ಉದ್ಘಾಟಿಸಲಾಯಿತು.

ತಂಪು ಕುಡಿಯುವ ನೀರಿನ ಫ್ರಿಡ್ಜ್ ಕೊಡುಗೆ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ನೂತನ ತಂಗುದಾಣದಲ್ಲಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೊಡುಗೆ ನೀಡುವುದಾಗಿ ಘೋಷಿಸಿದರು.

LEAVE A REPLY

Please enter your comment!
Please enter your name here