- ದೇವಸ್ಥಾನದ ವತಿಯಿಂದ ಏಕಾರತಿ, ಗಂಟಾಮಣಿ, ತಟ್ಟೆ ಪ್ರಸಾದ ರೂಪದಲ್ಲಿ ಕೊಡುಗೆ
ರಾಮಕುಂಜ: ಕೊಯಿಲ ಗ್ರಾಮದ ಮನೆಗಳಲ್ಲಿ ತಮ್ಮ ಪುಸ್ತಕಗಳಿಗೆ ತಾವೇ ಆರತಿ ಎತ್ತಿ ಪೂಜೆ ಮಾಡುವ ಮೂಲಕ ಶಾರದಾ ಪೂಜೆಯನ್ನು ವಿದ್ಯಾರ್ಥಿಗಳೇ ಭಕ್ತಿಪೂರ್ವಕವಾಗಿ ಆಚರಿಸಿದ್ದಾರೆ. ಇದಕ್ಕೆ ಪೂರಕವಾಗಿ ಕೊಯಿಲ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಿಂದ ಗ್ರಾಮದ ಹಿಂದೂ ಬಾಂಧವರ ಪ್ರತಿ ಮನೆಗಳಿಗೂ ಏಕಾರತಿ, ಗಂಟಾಮಣಿ, ತಟ್ಟೆಯನ್ನು ಪ್ರಸಾದ ರೂಪವಾಗಿ ನೀಡಲಾಗಿತ್ತು.
ಮಹಾನವಮಿಯ ಪುಣ್ಯದಿನದಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ನಾನ ಮಾಡಿ, ಬಿಳಿ ಬಟ್ಟೆ ಉಟ್ಟು ಮನೆಯ ದೇವರ ಕೋಣೆಯಲ್ಲಿ ತಮ್ಮ ಪುಸ್ತಕಗಳನ್ನಿಟ್ಟು ಅದಕ್ಕೆ ಹೂ, ತುಳಸಿ, ಕುಂಕುಮ, ಅಕ್ಷತೆ ಇಟ್ಟು, ಆರತಿ ಎತ್ತಿ ಪೂಜೆ ಮಾಡಿರುವುದು ವಿಶೇಷವಾಗಿದೆ. ’ನಮ್ಮ ದೇವಸ್ಥಾನ-ನಮ್ಮ ವಿದ್ಯಾರ್ಥಿಗಳು’ ಎಂಬ ಧ್ಯೇಯವಾಕ್ಯದೊಂದಿಗೆ ಧರ್ಮ ಜಾಗೃತಿಯ ನೆಲೆಯಲ್ಲಿ ಮಕ್ಕಳಿಂದ ಮನೆಮನೆಗಳಲ್ಲಿ ಶಾರದಾ (ಪುಸ್ತಕ) ಪೂಜೆ ನಡೆದಿದೆ. ಈ ಮೂಲಕ ಮಕ್ಕಳಲ್ಲಿ ಹಾಗೂ ಅವರ ಪೋಷಕರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಯಶಸ್ವಿಯಾಗಿದೆ.
ಸಂತಸ ತಂದಿದೆ: ಯದುಶ್ರೀ
ನಮಗೆ ವಾಹನ ಹೇಗೆ ಮುಖ್ಯವೋ ಪುಸ್ತಕವೂ ದೇವರಿಗೆ ಸಮಾನ. ಈ ಉದ್ದೇಶದಿಂದಲೇ ಗ್ರಾಮದ ಮನೆ ಮನೆಗಳಲ್ಲಿ ಮಕ್ಕಳಿಂದ ಶಾರದಾ(ಪುಸ್ತಕ)ಪೂಜೆ ನಡೆದಿದೆ. ಈ ಮೂಲಕ ಮಕ್ಕಳಲ್ಲಿ ಹಾಗೂ ಅವರ ಪೋಷಕರಲ್ಲೂ ಧಾರ್ಮಿಕ ಪ್ರಜ್ಞೆ ಮೂಡಿಸಲಾಗಿದೆ. ಇದಕ್ಕಾಗಿಯೇ ದೇವಸ್ಥಾನದಿಂದ ಪ್ರತಿ ಮನೆಗೂ ಏಕಾರತಿ, ಗಂಟಾಮಣಿ, ತಟ್ಟೆಯನ್ನು ಪ್ರಸಾದ ರೂಪದಲ್ಲಿ ನೀಡಲಾಗಿದೆ. ಪುಸ್ತಕ ಪೂಜೆಗೆ ಇದರ ಬಳಕೆ ಮಾಡುವ ಮೂಲಕ ಮಕ್ಕಳು ಶ್ರೀ ಸದಾಶಿವ ಮಹಾಗಣಪತಿ ದೇವರ ಹಾಗೂ ಶಾರದಾ ಮಾತೆಯ ಆಶೀರ್ವಾದ ಪಡೆದುಕೊಂಡಿರುವುದು ಸಂತೋಷದ ವಿಷಯವಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಯದುಶ್ರೀ ಆನೆಗುಂಡಿಯವರು ಹೇಳಿದ್ದಾರೆ.