ರಾಜಕೀಯ ಕ್ಷೇತ್ರದಲ್ಲಿ ಸಂಚಲನ: ಕಾವು ಹೇಮನಾಥ ಶೆಟ್ಟಿಯವರ ಹೆಸರೂ ರೇಸ್ನಲ್ಲಿ
ಸಂಸ್ಥೆಗಳ ನಿರ್ದೇಶಕ ಸ್ಥಾನಗಳಿಗೆ ತಮ್ಮ ಹೆಸರು ಪರಿಗಣಿಸುವಂತೆ ಎಂ.ಬಿ. ವಿಶ್ವನಾಥ ರೈ,
ಡಾ. ರಾಜಾರಾಮ ಕೆ.ಬಿ, ನೂರುದ್ದೀನ್ ಸಾಲ್ಮರ ಹಕ್ಕೊತ್ತಾಯ ಮಂಡನೆ!
ಪುಡಾ ಅಧ್ಯಕ್ಷತೆಗೆ ಮಹಮ್ಮದಾಲಿ, ಭಾಸ್ಕರ ಕೋಡಿಂಬಾಳ ಹೆಸರು ಚಾಲ್ತಿಯಲ್ಲಿ!
ಪ್ರಭಾವಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ತನಗೆ ಕೊಡುವಂತೆ ಶಕುಂತಳಾ ಶೆಟ್ಟಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಮಾಡಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸಿದೆ. ತಾನು ಕಾಂಗ್ರೆಸ್ ಸೇರ್ಪಡೆಗೊಂಡು ಚುನಾವಣೆಗೆ ಸ್ಪರ್ಧಿಸಿದ ದಿನದಿಂದ ಇವತ್ತಿನವರೆಗೂ ತನ್ನ ಬೆಂಗಾವಲಾಗಿ ಬಲಿಷ್ಠವಾಗಿ ನಿಂತಿರುವ ಕಾವು ಹೇಮನಾಥ ಶೆಟ್ಟಿಯವರಿಗೆ ಒಳ್ಳೆಯ ಅವಕಾಶ ಒದಗಿಸಿಕೊಡಬೇಕು ಎಂದು ಪ್ರಯತ್ನಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಶಕುಂತಳಾ ಶೆಟ್ಟಿಯವರ ದಿಢೀರ್ ಎಂಟ್ರಿ ಅಚ್ಚರಿ ಮೂಡಿಸಿದೆ.
ಪುತ್ತೂರು: ರಾಜ್ಯ ಸರಕಾರದ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲು ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ಅಂತಿಮ ಸುತ್ತಿನ ಮಾತುಕತೆ ನಡೆದ ಕೂಡಲೇ ನಿಗಮ ಹಾಗೂ ಮಂಡಳಿಗಳಿಗೆ ಆಯ್ಕೆ ನಡೆಯಲಿದೆ. ಈಗಾಗಲೇ ಆಯ್ಕೆ ಪ್ರಕ್ರಿಯೆ ಆರಂಭಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಈ ತಿಂಗಳಾಂತ್ಯಕ್ಕೆ ಅಧ್ಯಕ್ಷರ ಹೆಸರು ಘೋಷಣೆಯಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ 70 ನಿಗಮ ಮತ್ತು ಮಂಡಳಿಗಳು ಇದೆ. ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಅಚ್ಚುಕಟ್ಟು ಪ್ರದೇಶಗಳ ಕಾಡಾಗಳಿಗೂ ಆಯ್ಕೆ ನಡೆಯಲಿದ್ದು ವಿವಿಧ ಸಂಸ್ಥೆಗಳ ನಿರ್ದೇಶಕ ಹುದ್ದೆಗಳಿಗೂ ನೇಮಕ ನಡೆಯಬೇಕಿದೆ. ರಾಜ್ಯ ಸರಕಾರದಲ್ಲಿ ಸಚಿವ ಸ್ಥಾನ ಸಿಗದ ಶಾಸಕರು, ಹಿರಿಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವುದಕ್ಕಾಗಿ ನಿಗಮ, ಮಂಡಳಿಗಳಿಗೆ ಆಯ್ಕೆ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಪೂರ್ಣಪ್ರಮಾಣದ ಸಂಪುಟ ರಚನೆಯಾಗಿದ್ದರೂ ಹಲವು ಜಿಲ್ಲೆ, ಜಾತಿಗಳಿಗೆ ಇನ್ನೂ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಕೂಗು ರಾಜ್ಯಾದ್ಯಂತ ಕೇಳಿ ಬರುತ್ತಿದೆ.
ಲೋಕಸಭಾ ಚುನಾವಣೆಯೂ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗುವಂತೆ ನಿಗಮ ಹಾಗೂ ಮಂಡಳಿಗಳಿಗೆ ನೇಮಕ ಮಾಡಲು ಸರಕಾರ ಇದೀಗ ಮುಂದಾಗಿದೆ. ಆಯ್ಕೆ ಪ್ರಕ್ರಿಯೆ ಇನ್ನೇನು ನಡೆಯಲಿದೆ ಎಂಬ ಮಾಹಿತಿ ದೊರೆಯುತ್ತಿರುವಂತೆಯೇ ಹಲವು ನಾಯಕರು ಪಕ್ಷದ ಪ್ರಮುಖರಿಗೆ ಒತ್ತಡ ಹಾಕಲಾರಂಭಿಸಿದ್ದಾರೆ. ಈ ಮಧ್ಯೆ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಮತ್ತು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಪ್ರಭಾವಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ತನಗೆ ಕೊಡುವಂತೆ ಶಕುಂತಳಾ ಶೆಟ್ಟಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಮಾಡಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸಿದೆ. ತಾನು ಕಾಂಗ್ರೆಸ್ ಸೇರ್ಪಡೆಗೊಂಡು ಚುನಾವಣೆಗೆ ಸ್ಪರ್ಧಿಸಿದ ದಿನದಿಂದ ಇವತ್ತಿನವರೆಗೂ ತನ್ನ ಬೆಂಗಾವಲಾಗಿ ಬಲಿಷ್ಠವಾಗಿ ನಿಂತಿರುವ ಕಾವು ಹೇಮನಾಥ ಶೆಟ್ಟಿಯವರಿಗೆ ಒಳ್ಳೆಯ ಅವಕಾಶ ಒದಗಿಸಿಕೊಡಬೇಕು ಎಂದು ಪ್ರಯತ್ನಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಶಕುಂತಳಾ ಶೆಟ್ಟಿಯವರ ದಿಢೀರ್ ಎಂಟ್ರಿ ಅಚ್ಚರಿ ಮೂಡಿಸಿದೆ. ತನಗೆ ಆಶೀರ್ವಾದ ಮಾಡಿರುವ ಶಕುಂತಳಾ ಶೆಟ್ಟಿಯವರನ್ನು ಬಿಡುವಂತೆಯೂ ಇಲ್ಲ, ತನ್ನ ಗೆಲುವಿಗಾಗಿ ಕಠಿಣ ಶ್ರಮ ಹಾಕಿರುವ ಹೇಮನಾಥ ಶೆಟ್ಟಿಯವರನ್ನು ಕಡೆಗಣಿಸುವಂತೆಯೂ ಇಲ್ಲ ಎಂಬ ಇಕ್ಕಟ್ಟಿಗೆ ಸಿಲುಕಿರುವ ಅಶೋಕ್ ರೈಯವರು ಅದಕ್ಕೊಂದು ರಾಜೀ ಸಂಧಾನದ ಸೂತ್ರ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಹಲವು ಸಂಸ್ಥೆಗಳ ನಿರ್ದೇಶಕ ಸ್ಥಾನಗಳಿಗೆ ಆಯ್ಕೆ ನಡೆಯುವ ವೇಳೆ ತಮ್ಮ ಹೆಸರನ್ನೂ ಪರಿಗಣಿಸುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ. ಅವರು ಕಾಂಗ್ರೆಸ್ ಹೈಕಮಾಂಡ್ ಕದ ತಟ್ಟಿದ್ದಾರೆ. ವಕ್ಫ್ನಲ್ಲಿ ಅವಕಾಶ ನೀಡುವಂತೆ ನೋಟರಿ ವಕೀಲ ನೂರುದ್ದೀನ್ ಸಾಲ್ಮರ ಅವರು ಹಕ್ಕೊತ್ತಾಯ ಮಂಡಿಸಿದ್ದಾರೆ. ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷತೆಗೆ ನಗರಸಭೆಯ ಮಾಜಿ ಸದಸ್ಯ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹೆಚ್. ಮಹಮ್ಮದ್ ಆಲಿಯವರು ಪ್ರಯತ್ನ ನಡೆಸುತ್ತಿದ್ದಾರೆ. ವಕೀಲರು ಮತ್ತು ನೋಟರಿಯೂ ಆಗಿರುವ ಭಾಸ್ಕರ ಗೌಡ ಕೋಡಿಂಬಾಳ ಅವರ ಹೆಸರೂ ಪುಡಾ ಅಧ್ಯಕ್ಷ ಹುದ್ದೆಗೆ ಕೇಳಿ ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಿಂದ ಯಾರಿಗಾದರೂ ಓರ್ವರಿಗೆ ನಿಗಮ, ಮಂಡಳಿಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಇದರಲ್ಲಿ ಯಾರು ಅದೃಷ್ಟಶಾಲಿಯಾಗುತ್ತಾರೆ ಎಂದು ಕಾದು ನೋಡಬೇಕಿದೆ.
ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳಿಗೂ ಇನ್ನು ಕೆಲವೇ ಸಮಯದಲ್ಲಿ ಅರ್ಜಿ ಸ್ವೀಕಾರ ನಡೆದು ಆಯ್ಕೆ ನಡೆಯಲಿದ್ದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ, ಈ ಹಿಂದೆ ದೇವಳದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದ ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್.ಕೆ. ಜಗನ್ನಿವಾಸ ರಾವ್, ಕಾವು ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರೂ ಆಗಿರುವ ಕಾವು ಹೇಮನಾಥ ಶೆಟ್ಟಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಆದರೆ ಇದೇನಿದ್ದರೂ ಅರ್ಜಿ ಸಲ್ಲಿಸಿದ ಬಳಿಕ ನಡೆಯುವ ಪ್ರಕ್ರಿಯೇಯಾಗಿದೆ.