ಪುತ್ತೂರು ದಸರಾ ಮಹೋತ್ಸವದ ಸಮಾರೋಪ- ಸನ್ಮಾನ

0

ಪುತ್ತೂರಾಯರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು – ಗಣ್ಯರ ಮಾತು

ಪುತ್ತೂರು: ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿಯಿಂದ ಅ.15 ರಿಂದ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ, ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ 21 ನೇ ವರ್ಷದ ಪುತ್ತೂರು ದಸರಾ ಮಹೋತ್ಸವದ ಸಮಾರೋಪ ಸಮಾರಂಭ ಅ.25ರಂದು ನಡೆಯಿತು. ಈ ಸಂದರ್ಭ ಗಣ್ಯರು ತಮ್ಮ ಭಾಷಣದಲ್ಲಿ ಪುತ್ತೂರು ದಸರಾ ಮಹೋತ್ಸವದ ಸಂಚಾಲಕ ಕೆ.ಪ್ರೀತಂ ಪುತ್ತೂರಾಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪುತ್ತೂರಾಯರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು:
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಅವರು ಮಾತನಾಡಿ ಪುತ್ತೂರಿನವರು ಕೂಡಾ ದಸಾರ ವೈಭವ ನೋಡುವಂತಹ ಅವಕಾಶ ಕೊಟ್ಟದ್ದು ಪ್ರೀತಂ ಪುತ್ತೂರಾಯ ಅವರು. ಅವರ ಹಾಗೆ ಯಾರಿಗೂ ದೇವತಾ ಸಾಂಸ್ಕೃತಿಕ ಕಾರ್ಯ ಮಾಡುವುದು ಕಷ್ಟ ಸಾಧ್ಯ. ಅವರು ಮಾಡಿದ ಅನೇಕ ಕಾರ್ಯಗಳನ್ನು ಸರಿಯಾಗಿ ದಾಖಲಿಸಿ ಇಟ್ಟುಕೊಂಡಿದ್ದರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಬೇಕಾಗಿತ್ತು ಎಂದ ಅವರು ಪುತ್ತೂರಾಯರಿಗೆ ಇನ್ನಷ್ಟು ಧಾರ್ಮಿಕ ಸೇವೆ ಮಾಡುವ ಶಕ್ತಿ ಭಗವಂತ ಕೊಡಲಿ ಎಂದರು.

ಕ್ಷೇತ್ರದ ಸಾನಿಧ್ಯ ವೃದ್ದಿಯಾಗಿದೆ:
ನ್ಯಾಯವಾದಿ ಮಹೇಶ್ ಕಜೆ ಅವರು ಮಾತನಾಡಿ ದೈವಿಕ ಆರಾಧನೆ ಹೆಚ್ಚು ಹೆಚ್ಚು ಮಾಡಿದಂತೆ ಅಲ್ಲಿ ಸಾನಿಧ್ಯ ಹೆಚ್ಚುತ್ತದೆ. ಅದಕ್ಕೆ ಪ್ರತಿರೂಪವಾಗಿ ಉದಯಗಿರಿ ಕ್ಷೇತ್ರಕ್ಕೆ ಸಾನಿಧ್ಯವಿದೆ. ಸಾನಿಧ್ಯವನ್ನು ವೃದ್ಧಿಗಾಗಿ ಭಕ್ತರ ಸೇವೆಯೂ ಇದೆ. ದೂರ ಬೆಂಗಳೂರಿನಿಂದಲೂ ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿ ತಮ್ಮ ಇಷ್ಟಾರ್ಥ ಸಿದ್ಧಿಗೊಳಿಸಿ ಸೇವೆ ನೀಡುತ್ತಿರುವುದು ನಮಗೆ ತಿಳಿದಿದೆ. ಇದಕ್ಕೆಲ್ಲ ಕಾರಣರ್ತರಾದ ಕೆ.ಪ್ರೀತಂ ಪುತ್ತೂರಾಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಲೇ ಬೇಕು ಎಂದರು.

ಸನ್ಮಾನ:
ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಪೂರ್ಣ ಸಹಕಾರ ನೀಡುತ್ತಿರುವ ಉದಯಗಿರಿ ನಿವಾಸಿ ಶಿಕ್ಷಕ ಉದಯ ಕುಮಾರ್ ರೈ ಅವರಿಗೆ ಇತ್ತೀಚೆಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಈ ನಿಟ್ಟಿನಲ್ಲಿ ಅವರನ್ನು ಪುತ್ತೂರು ದಸರಾ ಮಹೋತ್ಸವ ಸಮಿತಿ ಮತ್ತೂ ಊರವರು ಸೇರಿ ಸನ್ಮಾನಿಸಿದರು. ಈ ಸಂದರ್ಭ ಉದಯ ಕುಮಾರ್ ರೈ ಅವರ ಪತ್ನಿ ದಿವ್ಯಾ ಅವರನ್ನೂ ಜೊತೆಯಲ್ಲೇ ಸನ್ಮಾನಿಸಲಾಯಿತು. ಸನ್ಮಾನಿತ ಶಿಕ್ಷಕ ಉದಯ ಕುಮಾರ್ ರೈ ಅವರು ಮಾತನಾಡಿ ಒಂದೇ ವಿಷಯಕ್ಕೆ ಜಡ್ಡು ಬೀಡಾದೆ, ಪ್ರತಿ ಕ್ಷಣಕ್ಕೂ ಬೇರೆ ಬೇರೆ ವಿಷಯಗಳನ್ನು ಆನಂದಿಸುವ ಮೂಲಕ ನವಭಾರತ ನಿರ್ಮಾಣ ಮಾಡಲು ಏನು ಕಷ್ಟವಿಲ್ಲ ಎಂಬ ವಿಚಾರ ಸ್ಪಷ್ಟವಾಗಿ ನಮ್ಮ ತಂತ್ರಿಗಳಾದ ಪ್ರೀತಂ ಪುತ್ತೂರಾಯ ಅವರಲ್ಲಿ ಕಾಣುತ್ತಿದ್ದೇವೆ. ಹಾಗಾಗಿ ಅವರನ್ನು ಧಾರ್ಮಿಕ ಕ್ಷೇತ್ರದಲ್ಲಿ ನಿಜವಾದ ಸರ್ವಶ್ರೇಷ್ಟ ಸಾಧಕರಲ್ಲಿ ತಂತ್ರಿಗಳನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಬೇಕೆಂದು ಅವರು ಹೇಳಿದರು.

ಸಮಾಜದಿಂದ ಸಿಕ್ಕಿರುವುದು ಸಮಾಜಕ್ಕೆ ಕೊಡಬೇಕು:
ಪುತ್ತೂರು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಪ್ರೀತಂ ಪುತ್ತೂರಾಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಆರಂಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆಸರು ಗದ್ದೆಯಲ್ಲಿ ದಸರಾ ಆರಂಭಿಸಿದ ಅನ್ನದಾನ ನೀಡಿದ ಶ್ರಮದ ನೆನಪಿದೆ. ಸಮಾಜಕ್ಕೆ ಸಿಕ್ಕಿರುವುದನ್ನು ಸಮಾಜಕ್ಕೆ ಕೊಡದೆ ಇಟ್ಟುಕೊಂಡರೆ ಅದು ಒಳ್ಳೆದಾಗುವುದಿಲ್ಲ ಎಂಬ ಚಿಂತನೆಯಂತೆ ದಶಾಮಾನೋತ್ಸವ ಸಂದರ್ಭ ದೇವಳದಲ್ಲಿ ಶಿವನ ಮೂರ್ತಿ ಸಮರ್ಪಣೆ ಮಾಡುವ ಹಂತಕ್ಕೆ ಬಂದಿದ್ದೆವು. ಅದೇ ಬಹಳಷ್ಟು ವಿಚಿತ್ರ ಘಟನೆ ಪುತ್ತೂರು ದಸರಾ ಕಂಡಿದೆ ಎಂದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ಕ್ಷೇತ್ರದ ಹಿರಿಯರಾದ ಮಂಜಪ್ಪ ರೈ ಬಾರಿಕೆ, ಹರಿಣಿ ಪುತ್ತೂರಾಯ, ಸಮಿತಿ ಸಾಂಸ್ಕೃತಿಕ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ರೈ ಕುಕ್ಕಾಡಿ, ಟಿ.ರಂಗನಾಥ ರಾವ್ ಉಪಸ್ಥಿತರಿದ್ದರು. ಶರಣ್ಯ ಪ್ರಾರ್ಥಿಸಿದರು. ಪುತ್ತೂರು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಸ್ವಾಗತಿಸಿ, ಕಾರ್ಯದರ್ಶಿ ಉಮೇಶ್ ಎಸ್.ಕೆ. ವಂದಿಸಿದರು. ದಸರಾ ಮಹೋತ್ಸವ ಸಮಿತಿ ಗೌರವ ಸಲಹೆಗಾರ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here