ರಾಜ್ಯ ಸರಕಾರದಿಂದ ದ್ವೇಷದ ರಾಜಕಾರಣ-ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಸುದ್ದಿಗೋಷ್ಠಿ

0

ಬೆಳ್ತಂಗಡಿಯಲ್ಲಿ ಶಾಸಕರ ವಿರುದ್ಧವೇ ಕೇಸು ದಾಖಲಿಸಿ ಹೋರಾಟ ದಮನಿಸುವ ಕೆಲಸ ಮಾಡಲಾಗಿದೆ. ಕೇಸು ಹಾಕುತ್ತಾ ಹೋದರೆ ಅವರೆಲ್ಲಾ ಜೈಲಲ್ಲಿರುತ್ತಿದ್ದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೇ ಸಿಎಂ ಎಂದು ಅಭಿಯಾನ ನಡೆಸಿದ್ದ ಕಾಂಗ್ರೆಸ್ ಆಗ ಬಿಜೆಪಿ ಸಿಎಂ ಹಾಗೂ ಸಚಿವರ ಬಗ್ಗೆ ಕೇವಲವಾಗಿ ಪೋಸ್ಟರ್ ಪ್ರದರ್ಶಿಸಿತ್ತು.ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನರಹಂತಕ ಪದ ಪ್ರಯೋಗ ಮಾಡಿದ್ದರು.ಹೀಗೆ ಕೇಸು ಹಾಕುತ್ತಾ ಹೋದರೆ ಈಗ ಅವರೆಲ್ಲರೂ ಜೈಲಿನಲ್ಲಿ ಇರುತ್ತಿದ್ದರು.ಬಿಜೆಪಿ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ.ಆದರೆ ಕಾಂಗ್ರೆಸ್ ಮಾತ್ರ ಅದನ್ನೇ ಮಾಡುತ್ತಿದೆ ಎಂದು ನಳಿನ್ ಹೇಳಿದರು.

ಮಂಗಳೂರು:ಪ್ರತಿಪಕ್ಷ ಬಿಜೆಪಿ ಹಾಗೂ ಹಿಂದುತ್ವ ಪರವಾದ ಸಂಘಟನೆಗಳ ವಿರುದ್ಧ ವಿನಾ ಕಾರಣ ಕೇಸು ದಾಖಲಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದ.ಕ.ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರುನಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಕ್ರಿಯಾಶೀಲ ಜನಪ್ರತಿನಿಧಿಗಳ ಮೇಲೂ ಕೇಸು ದಾಖಲಿಸಿ ಅವರ ಹಕ್ಕುಗಳಿಗೆ ದಿಗ್ಬಂಧನ ವಿಧಿಸಲಾಗುತ್ತಿದೆ.ಕೋಲಾರದಲ್ಲಿ ಉಸ್ತುವಾರಿ ಸಚಿವರ ಸಭೆಗೆ ತೆರಳುತ್ತಿದ್ದ ಸಂಸದರನ್ನು ಪೊಲೀಸ್ ವರಿಷ್ಠಾಧಿಕಾರಿ ಹೊರಗೆ ಕಳುಹಿಸಿದ ವಿದ್ಯಮಾನ ನಡೆದಿದೆ.ಬೆಳ್ತಂಗಡಿ ಶಾಸಕರು ಜನಸಾಮಾನ್ಯ ಹಾಗೂ ರೈತರ ಪರ ದನಿ ಎತ್ತಿದಾಗ ಅವರ ವಿರುದ್ಧವೇ ಕೇಸು ದಾಖಲಿಸಿ ಹೋರಾಟವನ್ನು ದಮನಿಸುವ ಕೆಲಸ ಮಾಡಲಾಗಿದೆ.ಸ್ಥಳದಲ್ಲಿದ್ದ ವಿಧಾನ ಪರಿಷತ್ ಸದಸ್ಯರನ್ನೂ ದೂಡಲಾಗಿದೆ ಎಂದು ಕಟೀಲ್ ಹೇಳಿದರು.

ಜನಪ್ರತಿನಿಧಿಗಳೆದುರು ಅರಣ್ಯಾಧಿಕಾರಿ ಗೂಂಡಾಗಿರಿ: ಬೆಳ್ತಂಗಡಿಯ ಕಳಂಜ ಗ್ರಾಮದಲ್ಲಿ ದೇವಣ್ಣ ಗೌಡರ ಮನೆಯನ್ನು ಅರಣ್ಯಾಧಿಕಾರಿಗಳು ಧ್ವಂಸಗೊಳಿಸಿದ್ದಲ್ಲದೆ, ರಬ್ಬರ್ ಕೃಷಿಯನ್ನು ನಾಶ ಮಾಡಿದ್ದರು.ಮರುದಿನ ಅಲ್ಲಿಗೆ ತೆರಳಿದ ಶಾಸಕ ಹರೀಶ್ ಪೂಂಜರವರ ವಿರುದ್ಧವೇ ಅಧಿಕಾರಿಗಳು ಮಾತನಾಡಿದ್ದಾರೆ.ಬಡ ದೇವಣ್ಣ ಗೌಡರಿಗೆ ತಾತ್ಕಾಲಿಕ ಮನೆ ನಿರ್ಮಿಸಲು ಶಾಸಕರು ಸೂಚನೆ ನೀಡಿದ್ದು,ಬಳಿಕ ಜಂಟಿ ಸರ್ವೆ ನಡೆಸಿ ಜಾಗದ ಗಡಿ ಗುರುತಿಸುವಂತೆ ಸೂಚಿಸಿದ್ದರು.ಯಥಾಸ್ಥಿತಿ ಕಾಪಾಡುವಂತೆ ಸ್ವತಃ ಅರಣ್ಯ ಸಚಿವರು ಸೂಚಿಸಿದ್ದರೂ ಅಧಿಕಾರಿಯು ಜನಪ್ರತಿನಿಧಿಗಳ ಎದುರು ಗೂಂಡಾಗಿರಿ ತೋರಿಸಿದ್ದಾರೆ.ಆಗ ದುರ್ವರ್ತನೆ ತೋರಿದ ಅರಣ್ಯಾಧಿಕಾರಿ ವಿರುದ್ಧ ಶಾಸಕರು ಹರಿಹಾಯ್ದಿದ್ದರು.ಅರಣ್ಯಾಧಿಕಾರಿಯ ರೈತ ವಿರೋಧಿ ನೀತಿ ಇದಾಗಿದ್ದು, ಎರಡು ದಿನಗಳ ನಂತರ ಶಾಸಕರ ವಿರುದ್ಧವೇ ಅಧಿಕಾರಿ ದೂರು ದಾಖಲಿಸಿದ್ದಾರೆ ಎಂದು ನಳಿನ್ ಕುಮಾರ್ ಆರೋಪಿಸಿದರು.

ಶಾಸಕರ ವಿರುದ್ಧವೇ ಕೇಸಾದರೆ ಸಾಮಾನ್ಯರ ಪಾಡೇನು?: ಯಾರೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಾತ್ರಕ್ಕೆ ಬೆಳ್ತಂಗಡಿ ಶಾಸಕರ ವಿರುದ್ಧವೇ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.ಶಾಸಕರಿಗೇ ಈ ಗತಿಯಾದರೆ,ಸಾಮಾನ್ಯರ ಪಾಡು ಏನು ಎಂದು ಪ್ರಶ್ನಿಸಿದ ನಳಿನ್ ಕುಮಾರ್, ಇದು ಕಾಂಗ್ರೆಸ್ ಹಾಗೂ ಸರ್ಕಾರದ ಸರ್ವಾಧಿಕಾರಿ ಹಾಗೂ ಹಿಟ್ಲರ್ ಧೋರಣೆಯಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಸರ್ಕಾರ ರೈತರ,ಕೃಷಿ ಪರರ ವಿರುದ್ಧ ಕೇಸು ದಾಖಲಿಸುತ್ತಿದೆಯೇ ವಿನಃ ರಾಷ್ಟ್ರ ವಿರೋಧಿಗಳ ಮೇಲಲ್ಲ.ಇದು ರೈತರ ಪರ ಅಲ್ಲ,ರಾಷ್ಟ್ರ ವಿರೋಧಿ ಸರ್ಕಾರ ಎಂದು ನಳಿನ್ ಕುಮಾರ್ ಟೀಕಿಸಿದರು.

ಆಂತರಿಕ ಜಗಳದಿಂದ ಸರ್ಕಾರ ಪತನ: ರಾಜ್ಯ ಕಾಂಗ್ರೆಸ್‌ನಲ್ಲಿ ಮೂರು ತಂಡ ಇದ್ದು ಸಿದ್ದು, ಡಿಕೆಶಿ ಹಾಗೂ ಸತೀಶ್ ಜಾರಕಿಹೊಳಿ ತಂಡ ಸದ್ಯದಲ್ಲೇ ಪ್ರತ್ಯೇಕವಾಗಿ ಹೊರಗೆ ಬರಲಿದೆ.ಅವರೇ ಡಿನ್ನರ್ ಪಾರ್ಟಿ ಇರಿಸಿಕೊಂಡಿದ್ದು, ಸದ್ಯದಲ್ಲೇ ರೆಸಾರ್ಟ್ ರಾಜಕಾರಣ ನಡೆಸಿದರೂ ಅಚ್ಚರಿ ಇಲ್ಲ.ಕಾಂಗ್ರೆಸ್ ಆಡಳಿತ ಆಂತರಿಕ ಜಗಳದಿಂದಲೇ ಬಿದ್ದುಹೋಗುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಟಿಕೆಟ್ ಹಂಚಿಕೆಯಲ್ಲಿ ಹಣದ ವಿಚಾರ ದೂರು ನೀಡಲು ಹೇಳಿದ್ದೇನೆ: ಟಿಕೆಟ್ ಹಂಚಿಕೆಯಲ್ಲಿ ಹಣದ ವಿಚಾರಕ್ಕೆ ಸಂಬಂಧಿಸಿ ನನ್ನ ವಿರುದ್ಧ ವ್ಯಕ್ತವಾದ ಆರೋಪದ ವಿರುದ್ಧ ದೂರು ನೀಡುವಂತೆ ಆಗಲೇ ಸೂಚಿಸಿದ್ದೇನೆ.ಆರೋಪಕ್ಕೆ ಒಳಗಾದವರೇ ಇದರಲ್ಲಿ ನನ್ನ ಪಾತ್ರ ಇಲ್ಲ ಎಂದಿದ್ದಾರೆ.ಬೇಕಾದರೆ ತನಿಖೆ ನಡೆಸಲಿ ಎಂದು ಕಟೀಲ್ ಸ್ಪಷ್ಟಪಡಿಸಿದರು.
ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಒಂದು ರು.ಕೂಡ ಬಿಡುಗಡೆ ಮಾಡಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್, ಬರಪರಿಹಾರ ಮೊತ್ತ ಬಿಡುಗಡೆಗೆ ಅದರದ್ದೇ ಆದ ಮಾನದಂಡ ಇದೆ.ಎನ್‌ಡಿಆರ್‌ಎಫ್ ನಿಯಮಾವಳಿಯಂತೆ ಪರಿಹಾರ ಮೊತ್ತ ನೀಡಲಾಗುತ್ತದೆ.ರಾಜ್ಯದಿಂದ ಕೇಂದ್ರಕ್ಕೆ ವರದಿ ಸಲ್ಲಿಕೆಯಾದ ಬಳಿಕ ಅಲ್ಲಿ ಪರಿಹಾರ ಬಿಡುಗಡೆ ಬಗ್ಗೆ ತೀರ್ಮಾನಿಸಲಾಗುತ್ತದೆ.ಬಿಜೆಪಿ ಆಡಳಿತ ಇರುವಾಗಲೇ ಕೇಂದ್ರ ಸರ್ಕಾರ ತಕ್ಷಣ ನೆರವು ಬಿಡುಗಡೆ ಮಾಡಿರಲಿಲ್ಲ,ಕೇಂದ್ರ ತಂಡ ಭೇಟಿ ನೀಡಿ ಅಧ್ಯಯನ ನಡೆಸಿದ ಬಳಿಕವಷ್ಟೆ ನೀಡಿದೆ.ಸಿಎಂ ಆಗಿ ಸಿದ್ದರಾಮಯ್ಯಗೆ ಈ ವಿಚಾರ ಗೊತ್ತಿಲ್ಲವೇ, ಅನುಭವ ಕೊರತೆಯೇ ಅಥವಾ ಜಾಣ ಮರೆವೇ ಎಂದು ಪ್ರಶ್ನಿಸಿದರು.

ಬರ ಅಧ್ಯಯನಕ್ಕೆ ಬಿಜೆಪಿಯ 17 ತಂಡ ಪ್ರವಾಸ: ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ರಾಜ್ಯದಲ್ಲಿ 250 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರು ಹಿಂದಿನ ಅವಧಿಯಲ್ಲಿ ಸಿಎಂ ಆಗಿದ್ದಾಗ 4 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.ಒಂದು ಕಡೆ ಬರ, ಇನ್ನೊಂದು ಕಡೆ ರೈತರ ಆತ್ಮಹತ್ಯೆ ನಡೆಯುತ್ತಿದೆ.ಈ ಹಿನ್ನೆಲೆಯಲ್ಲಿ ಬರಪೀಡಿತ ಜಿಲ್ಲೆಗಳಲ್ಲಿ ಬಿಜೆಪಿಯ 17 ತಂಡ ಪ್ರವಾಸ ನಡೆಸಲಿದೆ.ಈ ಪೈಕಿ ಮಂಗಳೂರು, ಕೊಡಗಿಗೆ ಆರ್.ಅಶೋಕ್, ಮಂಡ್ಯ, ಹಾಸನಕ್ಕೆ ಡಿ.ವಿ.ಸದಾನಂದ ಗೌಡ, ಬೆಂಗಳೂರು ಗ್ರಾಮಾಂತರ,ರಾಮನಗರಕ್ಕೆ ಕೋಟ ಶ್ರೀನಿವಾಸ ಪೂಜಾರಿ ತಂಡ ಪ್ರವಾಸ ನಡೆಸಲಿದೆ.ಈ ತಂಡಗಳು ನ.10ರೊಳಗೆ ರಾಜ್ಯ ಬಿಜೆಪಿ ಘಟಕಕ್ಕೆ ವರದಿ ಸಲ್ಲಿಸಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಶಾಸಕರಾದ ಡಾ.ಭರತ್ ಶೆಟ್ಟಿ, ಹರೀಶ್ ಪೂಂಜಾ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್‌ಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ., ಮುಖಂಡ ಜಗದೀಶ್ ಶೇಣವ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here