ಪುತ್ತೂರು; ಗಾಂಧಿ ಚಿಂತನ ವೇದಿಕೆ ಸುಳ್ಯ ಇದರ ವತಿಯಿಂದ ಅ. 7 ರಂದು ಸವಣೂರು ‘ರಶ್ಮಿ ನಿಲಯ’ದಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ‘ಸಹಕಾರರತ್ನ’ ಸವಣೂರು ಕೆ. ಸೀತಾರಾಮ ರೈಯವರಿಗೆ ರಾಜ್ಯ ಮಟ್ಟದ ಗಾಂಧಿ ಸ್ಮೃತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಶಿಕ್ಷಣದ ಕಾಶಿಯಾಗಿ ಪರಿವರ್ತನೆ- ಅಣ್ಣಾ ವಿನಯ ಚಂದ್ರ:
ವಿಧಾನಪರಿಷತ್ ಮಾಜಿ ಸದಸ್ಯರಾದ ಹಿರಿಯ ಗಾಂಧಿ ಚಿಂತಕ ಅಣ್ಣಾ ವಿನಯಚಂದ್ರರವರು ಸವಣೂರು ಸೀತಾರಾಮ ರೈಯವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿ ಮಾತನಾಡಿ, ಭಾರತದ ಆತ್ಮ ಇರುವುದು ಗ್ರಾಮೀಣ ಪ್ರದೇಶದಲ್ಲಿ ಎಂಬ ಗಾಂಧಿಜಿಯವರ ಮಾತಿನಂತೆ ಸವಣೂರು ಸೀತಾರಾಮ ರೈಯವರು ಅಕ್ಷರಶ: ಗ್ರಾಮೀಣ ಪ್ರದೇಶವಾದ ಸವಣೂರಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ. ಸವಣೂರು ಎಂಬ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಜೊತೆಗೆ ವಾಣಿಜ್ಯ ಸಂಕೀರ್ಣಗಳನ್ನು ಪ್ರಾರಂಭಿಸಿ, ಗ್ರಾಮೀಣ ಅಭಿವೃದ್ಧಿಯನ್ನು ಮಾಡಿದ್ದಾರೆ. ಇಂದು ವಿದ್ಯಾರಶ್ಮಿ ಶೈಕ್ಷಣಿಕ ಸಂಸ್ಥೆಗಳ ಮೂಲಕ ಸವಣೂರಿನ ಹೆಸರನ್ನು ರಾಜ್ಯಕ್ಕೆ ಪರಿಚಯ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಸೀತಾರಾಮ ರೈಯವರು ಸುಳ್ಯ ಮತ್ತು ಪುತ್ತೂರಿನಲ್ಲಿ ಸಹಕಾರ, ಧಾರ್ಮಿಕ, ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಯನ್ನು ಸೀತಾರಾಮ ರೈ ನೀಡಿದ್ದಾರೆ ಎಂದರು. ಗ್ರಾಮೀಣ ಪ್ರದೇಶವನ್ನು ಅಭಿವೃದ್ದಿಗೈದ ಸವಣೂರು ಸೀತಾರಾಮ ರೈಯವರಿಗೆ ಅರ್ಹವಾಗಿ ರಾಜ್ಯ ಮಟ್ಟದ ಗಾಂಽ ಸ್ಮೃತಿ ಪ್ರಶಸ್ತಿ ಒಲಿದು ಬಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ರಾಜ್ಯ ಪ್ರಶಸ್ತಿಯನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ- ಸವಣೂರು ಸೀತಾರಾಮ ರೈ :
ಪ್ರಶಸ್ತಿ ಸ್ವೀಕರಿಸಿದ ಸವಣೂರು ಸೀತಾರಾಮ ರೈಯವರು ಮಾತನಾಡಿ ತಮ್ಮ ಶಿಕ್ಷಣ, ಸಹಕಾರ ಕ್ಷೇತ್ರದ ಬಗ್ಗೆ ಮಾತನಾಡಿ ಸವಣೂರು ಎಂಬ ಗ್ರಾಮೀಣ ಊರಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ ಬಗ್ಗೆ ಉಲ್ಲೇಖಿಸಿ, ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದೇನೆ, ಇದರಿಂದ ನನಗೆ ಏನೂ ಲಾಭ ಇಲ್ಲ, ಆದರೆ ಮನಸಿಗೆ ಒಂದು ರೀತಿಯಲ್ಲಿ ಅತ್ಮ ಸಂತೃಪ್ತಿ ಇದೆ. ನನ್ನ ವ್ಯವಹಾರದಲ್ಲಿ ಬರುವ ಲಾಭವನ್ನು ಶಿಕ್ಷಣ ಸಂಸ್ಥೆಗಳ ಕಾರ‍್ಯಕ್ಕೆ ವಿನಿಯೋಗಿಸುತ್ತಿದ್ದೇನೆ ಎಂದು ಹೇಳಿ, ಸುಳ್ಯದ ಗಾಂಧಿ ಚಿಂತನಾ ವೇದಿಕೆಯವರು ನೀಡಿದ ರಾಜ್ಯ ಪ್ರಶಸ್ತಿಯನ್ನು ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದರು.
ಸೀತಾರಾಮ ರೈಯವರಿಗೆ ಮಾನವೀಯತೆಯ ಪ್ರೀತಿ- ಹರೀಶ್ ಬಂಟ್ವಾಳ್:
ಅಧ್ಯಕ್ಷತೆ ವಹಿಸಿದ್ದ ಸುಳ್ಯ ಗಾಂಧಿ ಚಿಂತನಾ ವೇದಿಕೆಯ ಪ್ರಧಾನ ಸಂಚಾಲಕರಾದ ಸುಳ್ಯ ಸುದ್ದಿ ಬಿಡುಗಡೆ ವಾರಪತ್ರಿಕೆಯ ಸಂಪಾದಕ ಹರೀಶ್ ಬಂಟ್ವಾಳ್‌ರವರು ಮಾತನಾಡಿ ಸವಣೂರು ಸೀತಾರಾಮ ರೈಯವರು ಸಹಕಾರ, ಶಿಕ್ಷಣ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಯನ್ನು ಸಮಾಜ ಸದಾ ಗೌರವಿಸುತ್ತಿದೆ. ಸೀತಾರಾಮ ರೈಯವರಲ್ಲಿ ಮಾನವೀಯತೆಯ ಪ್ರೀತಿಯನ್ನು ಕಾಣಬಹುದು ಎಂದು ಹೇಳಿದರು.
ಸೀತಾರಾಮ ರೈ ಸಮಾಜದ ಆದರ್ಶ ವ್ಯಕ್ತಿ- ಅರಿಯಡ್ಕ ಕೃಷ್ಣ ರೈ:
ಮುಖ್ಯ ಅತಿಥಿ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಅರಿಯಡ್ಕ ಕೃಷ್ಣ ರೈ ಪನ್ನೆಗುತ್ತು ಪುಣ್ಚಪ್ಪಾಡಿರವರು ಮಾತನಾಡಿ ಸವಣೂರು ಸೀತಾರಾಮ ರೈ ಸಮಾಜದ ಆದರ್ಶ ವ್ಯಕ್ತಿಯಾಗಿದ್ದಾರೆ. ಅವರಿಗೆ ಅರ್ಹವಾಗಿ ಗಾಂಧಿ ಸ್ಮೃತಿ ಪ್ರಶಸ್ತಿ ಒಲಿದು ಬಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಸ್ವಾಗತಿಸಿ, ಗಾಂಧಿ ಚಿಂತನ ವೇದಿಕೆಯ ಸುಂದರ ಕೇನಾಜೆ ಅಭಿನಂದನಾ ಭಾಷಣಗೈದರು. ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಂಧಿ ಚಿಂತನಾ ವೇದಿಕೆಯ ದಿನೇಶ್ ಮೊಡಪ್ಪಾಡಿ ಕಾರ‍್ಯಕ್ರಮ ನಿರೂಪಿಸಿದರು. ಶಂಕರ್ ಪೆರಾಜೆ ವಂದಿಸಿದರು. ಚಂದ್ರಾವತಿ ಬಡ್ಡಡ್ಕ, ಕೆ.ಆರ್.ಗೋಪಾಲಕೃಷ್ಣ ಸಹಕರಿಸಿದರು. ಸೀತಾರಾಮ ರೈಯವರ ಪತ್ನಿ ಕಸ್ತೂರಿಕಲಾ ಎಸ್ ರೈ, ಅಳಿಯ ಅಶ್ವಿನ್ ಎಲ್.ಶೆಟ್ಟಿ, ಪುತ್ರಿ ರಶ್ಮಿ ಆಶ್ವಿನ್ ಎಲ್.ಶೆಟ್ಟಿ, ಪ್ರಮುಖರಾದ ಸವಣೂರು ಎನ್. ಸುಂದರ ರೈ, ಶಿವಣ್ಣ ಗೌಡ ಇಡ್ಯಾಡಿ, ದಿನೇಶ್ ಮೆದು, ರಾಕೇಶ್ ರೈ ಕೆಡೆಂಜಿ, ತಾರಾನಾಥ ಕಾಯರ್ಗ, ಸತೀಶ್ ಕುಮಾರ್ ಕೆಡೆಂಜಿ, ಕೃಷ್ಣ ಕುಮಾರ್ ರೈ ಪುಣ್ಚಪ್ಪಾಡಿ ದೇವಸ್ಯ, ಎ.ಆರ್.ಚಂದ್ರ ಎಡಪತ್ಯ, ಕೃಷ್ಣ ಭಟ್ ಕುಕ್ಕುಜೆ, ಸುರೇಶ್ ರೈ ಸೂಡಿಮುಳ್ಳು, ಜೈರಾಜ್ ಭಂಡಾರಿ ಡಿಂಬ್ರಿ, ಬಾಪೂ ಸಾಹೇಬ್, ಮಹದೇವಪ್ಪ, ಕುಸುಮ ಪಿ.ಶೆಟ್ಟಿ ಕೆರೆಕ್ಕೋಡಿ, ವಸಂತ್ ಜಾಲಾಡಿ, ಸುನಾದ್‌ರಾಜ್ ಶೆಟ್ಟಿ, ಶಶಿಕಲಾ ಎಸ್ ಆಳ್ವ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು. ಕೆ.ಆರ್.ಗೋಪಾಲಕೃಷ್ಣ ಸುಳ್ಯರವರ ಆಶಯ ಗೀತೆ ಮನರಂಜಿಸಿತು.
ಗಾಂಧಿಜಿಯ ಚಿಂತನೆಯ ಪಥದಲ್ಲಿ
ಕೆವಿಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಕುರುಂಜಿ ವೆಂಕಟರಮಣ ಗೌಡರು ಗಾಂಧಿ ಚಿಂತನೆಯ ಪಥದಲ್ಲಿ ಸಾಗಿದವರು ಅದೇ ರೀತಿ ಸುದ್ದಿ ಸಮೂಹ ಸಂಸ್ಥೆಗಳ ಸ್ಥಾಪಕರಾದ ಡಾ.ಯು.ಪಿ.ಶಿವಾನಂದರು ಮತ್ತು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಸೀತಾರಾಮ ರೈಯವರು ಗಾಂಧಿಜಿಯ ಚಿಂತನೆಯ ಪಥದಲ್ಲಿ ಸಾಗುತ್ತಿರುವವರು. ಅವರು ಸಾಗುತ್ತಿರುವ ಪಥದಲ್ಲಿ ನಾವು ಸಾಗುತ್ತಿದ್ದೇವೆ
-ಹರೀಶ್ ಬಂಟ್ವಾಳ್ ಪ್ರಧಾನ ಸಂಚಾಲಕರು, ಸುಳ್ಯ ಗಾಂಧಿ ಚಿಂತನಾ ವೇದಿಕೆ