ಬಂಟ ಸಮಾಜದ ಅಭಿವೃದ್ಧಿಗಾಗಿ ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ-ವಿಶ್ವ ಬಂಟರ ಸಮ್ಮೇಳನ ಉದ್ಘಾಟಿಸಿ ಸಿಎಂ ಸಿದ್ಧರಾಮಯ್ಯ ಭರವಸೆ

0

  • ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ್ದೆವು ನಾವು ನುಡಿದಂತೆ ನಡೆಯುತ್ತೇವೆ
  • ಅಶೋಕ್ ರೈ, ಭಂಡಾರಿ ನೆನಪಿಸುತ್ತಲೇ ಇದ್ದರು
  • ಬಂಟ ಸಮಾಜದ ಅಭಿವೃದ್ಧಿಗೆ ಸರಕಾರ ಬದ್ಧ
  • ನಿಗಮದ ಘೋಷಣೆಗೆ ಸಭೆಯಲ್ಲಿ ಹರ್ಷೋದ್ಘಾರ
  • ಸಿಎಂ ಎದುರಲ್ಲೇ ಕುಣಿದು ಸಂತಸ ವ್ಯಕ್ತಪಡಿಸಿದ ಶಾಸಕ ರೈ1

ಬಂಟ ಸಮುದಾಯಕ್ಕೆ ಸಂತೋಷದ ದಿನ
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಲ್ಲಿಯ ತನಕ ಬಂಟ ಸಮುದಾಯವನ್ನು ಯಾವುದೇ ಪಕ್ಷ ಗುರುತಿಸಿಲ್ಲ.ಕರಾವಳಿ ಭಾಗದ ಬಲಿಷ್ಟ ಬಂಟ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್ ಸರಕಾರ ಮಾಡಿದೆ.ಬಂಟರ ನಿಗಮವನ್ನು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಂಟರ ನಿಗಮ ಸ್ಥಾಪನೆ ಮಾಡುವುದಾಗಿ ಹೇಳಿತ್ತು.ಈ ವಿಚಾರವನ್ನು ನಾನು ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ.ನಮ್ಮ ಸಮಿತಿ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು.ನಾನು ಮತ್ತು ಎಂಎಲ್‌ಸಿ ಮಂಜುನಾಥ ಭಂಡಾರಿಯವರು ಸಿ.ಎಂ ಅವರನ್ನು ಖುದ್ದಾಗಿ ಭೇಟಿಯಾಗಿ ಬಂಟರ ಅಭಿವೃದ್ಧಿ ನಿಗಮ ಘೋಷಣೆಯ ಬಗ್ಗೆ ಮಾತುಕತೆ ನಡೆಸಿದ್ದೆವು.

ಈ ಹಿಂದೆ ಸರಕಾರ ಎರಡು ನಿಗಮವನ್ನು ಘೋಷಣೆ ಮಾಡಿತ್ತಾದರೂ ಬಂಟರ ನಿಗಮದ ವಿಚಾರ ಮುನ್ನೆಲೆಗೆ ಬಂದಿರಲಿಲ್ಲ.ಸಿಎಂ ಅವರ ಜೊತೆ ಪರಿಪರಿಯಾಗಿ ನಾವಿಬ್ಬರೂ ಒತ್ತಾಯ ಮಾಡಿದ ಕಾರಣ ಇಂದು ಉಡುಪಿಯಲ್ಲಿ ವಿಶ್ವ ಬಂಟರ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳು, ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.ಈ ದಿನ ಬಂಟ ಸಮುದಾಯಕ್ಕೆ ಅತ್ಯಂತ ಸಂತೋಷದ ದಿನವಾಗಿದೆ.ನಿಗಮ ಸ್ಥಾಪನೆಯಾದರೆ ಸರಕಾರದಿಂದ ಸಿಗುವ ಅನುದಾನವನ್ನು ಬಡ ಬಂಟ ಸಮುದಾಯದ ಅಭಿವೃದ್ದಿಗೆ ಬಳಕೆ ಮಾಡಬಹುದಾಗಿದೆ.ಇದು ಬಂಟ ಸಮುದಾಯಕ್ಕೆ ಕಾಂಗ್ರೆಸ್ ಸರಕಾರ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ
ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು

ಪುತ್ತೂರು:ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಂಟರ ಅಭಿವೃದ್ದಿ ನಿಗಮವನ್ನು ಮಾಡುವುದಾಗಿ ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ್ದೆವು,ನಾವು ನುಡಿದಂತೆ ನಡೆಯುತ್ತೇವೆ ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ದಿ ನಿಗಮವನ್ನು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಬಂಟ ಸಮುದಾಯ ಇಂದು ಜಾಗತಿಕ ಮಟ್ಟದಲ್ಲಿ ಉದ್ಯಮವನ್ನು ನಡೆಸುವ ಮೂಲಕ ಎಲ್ಲಾ ಸಮುದಾಯದ ಪ್ರೀತಿಗೆ ಪಾತ್ರರಾಗಿದ್ದಾರೆ.ಬಂಟ ಸಮುದಾಯದಲ್ಲಿ ಉದ್ಯಮಿಗಳೂ ಇದ್ದಾರೆ ಅದೇ ರೀತಿ ಬಡವರೂ ಇದ್ದಾರೆ.ಬಂಟ ಸಮುದಾಯದ ಅಭಿವೃದ್ದಿಗೆ ಸರಕಾರ ಬದ್ದವಾಗಿದೆ,ಕೊಟ್ಟ ಮಾತಿನಂತೆ ನಾವು ನಿಗಮವನ್ನು ಸ್ಥಾಪನೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಅಶೋಕ್ ರೈ, ಭಂಡಾರಿ ನೆನಪಿಸುತ್ತಲೇ ಇದ್ದರು: ಪುತ್ತೂರು ಶಾಸಕರಾದ ಅಶೋಕ್ ರೈ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ಬಂಟರ ನಿಗಮ ಮಾಡುವಂತೆ ನನ್ನನ್ನು ಪದೇ ಪದೇ ಆಗ್ರಹವನ್ನು ಮಾಡುತ್ತಿದ್ದುದು ಮಾತ್ರವಲ್ಲದೆ ಪ್ರಣಾಳಿಕೆಯ ವಿಚಾರವನ್ನು ಆವಾಗಾವಾಗ ನೆನಪು ಮಾಡುತ್ತಿದ್ದರು.ಈದಿನ ವಾಲ್ಮೀಕಿ ಜಯಂತಿ ಸರಕಾರಿ ಕಾರ್ಯಕ್ರಮ ಇದ್ದರೂ ಅದನ್ನು ಬೇಗ ಮುಗಿಸಿ ನಾನು ಬಂಟರ ಸಮ್ಮೇಳನಕ್ಕೆ ಬಂದಿದ್ದೇನೆ.ಬಂಟರ ಸಮ್ಮೇಳನಕ್ಕೆ ಬರಲೇಬೇಕು ಎಂದು ತೀರ್ಮಾನವನ್ನು ಮಾಡಿದ್ದೆ.ಬಂಟ ಸಮುದಾಯದ ನಾಯಕರುಗಳ ಒತ್ತಾಯ ಮತ್ತು ಕಾರ್ಯಕ್ರಮಕ್ಕೆ ಬರಲೇಬೇಕು ಎಂಬ ಆಗ್ರಹಕ್ಕೆ ಮಣಿದು ನಾನು ಸರಕಾರಿ ಕಾರ್ಯಕ್ರಮವನ್ನು ಐದೇ ನಿಮಿಷದಲ್ಲಿ ಮುಗಿಸಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ ಸಿದ್ದರಾಮಯ್ಯ ಅವರು, ಶಾಸಕ ಅಶೋಕ್ ರೈ ಹಾಗೂ ಮಂಜುನಾಥ ಭಂಡಾರಿಯವರ ಅತ್ಯಾಗ್ರಹವನ್ನು ಈಡೇರಿಸುತ್ತೇನೆ.ಬಂಟರ ನಿಗಮವನ್ನು ಘೋಷಣೆ ಮಾಡಿಯೇ ಮಾಡುತ್ತೇನೆ ಎಂದು ಹೇಳಿದರು.

ಬಂಟರು ಜಾತ್ಯಾತೀತರು, ಉದ್ಯಮ ಶೀಲರು: ಬಂಟ ಸಮುದಾಯದ ಸಂಸ್ಕೃತಿ, ಸಂಸ್ಕಾರ ಇಂದು ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದೆ.ಅವರು ಎಲ್ಲೇ ಇರಲಿ ಅವರು ಸಂಸ್ಕೃತಿಯನ್ನು ಬಿಟ್ಟು ಕೊಟ್ಟವರಲ್ಲ.ಜಾತ್ಯಾತೀತ ಮನೋಭಾವದ ಕಾರಣಕ್ಕೆ ಅವರನ್ನು ಇಂದು ಎಲ್ಲಾ ಸಮುದಾಯ ಸ್ವೀಕರಿಸಿದೆ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಉದ್ಯಮವನ್ನು ಬೆಳೆಸಲು ಸಹಕಾರಿಯಾಗಿದೆ.ನಾವು ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವ ಮನುಷ್ಯರಾಗಬೇಕು.ಮಾನವೀಯತೆ ಇಲ್ಲದೇ ಹೋದಲ್ಲಿ ನಾವು ಮನುಷ್ಯರಾಗಲು ಸಾಧ್ಯವೇ ಇಲ್ಲ.ವಿಶ್ವ ಮಾನವ ಗುಣಗಳು ಬಂಟರಲ್ಲಿ ನೆಲಯೂರಿದೆ ಎಂದು ಸಿದ್ದರಾಮಯ್ಯರವರು ಹೇಳಿದರು.

ನಿಗಮದ ಘೋಷಣೆಗೆ ಹರ್ಷೋದ್ಗಾರ: ಸಿಎಂ ಸಿದ್ದರಾಮಯ್ಯರವರು ಮುಂದಿನ ಬಜೆಟ್‌ನಲ್ಲಿ ಬಂಟರ ನಿಗಮವನ್ನು ಘೋಷಣೆ ಮಾಡುವುದಾಗಿ ಹೇಳಿದಾಗ ಸಭೆಯಲ್ಲಿದ್ದವರು ಹರ್ಷೋದ್ಘಾರ ಘೋಷಣೆ ಕೂಗಿದರು.ಚಪ್ಪಾಳೆ ತಟ್ಟುವ ಮೂಲಕ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರಿಗೂ ಜೈಕಾರ ಕೂಗಿದರು.ಸಭೆಯಲ್ಲಿದ್ದ ಶಾಸಕರು ಎದ್ದು ನಿಂತು ಸಿಎಂ ಎದುರಲ್ಲೇ ಚಪ್ಪಾಳೆ ಹೊಡೆಯುವ ಮೂಲಕ ಕುಣಿದಾಡಿ ಸಂತಸ ವ್ಯಕ್ತಪಡಿಸಿದರು.ವೇದಿಕೆಯಲ್ಲಿದ್ದ ಇತರೆ ಬಂಟ ಸಮುದಯದ ನಾಯಕರು ಸಿಎಂ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು.

  1. ↩︎

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎಂ.ಆರ್.ಜಿ ಗ್ರೂಪ್‌ನ ಕೆ.ಪ್ರಕಾಶ್ ಶೆಟ್ಟಿ, ಮಾಜಿ ಸಚಿವರಾದ ಬಿ.ರಮಾನಾಥ ರೈ,ಅಭಯಚಂದ್ರ ಜೈನ್, ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಶಾಸಕರುಗಳಾದ ಅಶೋಕ್ ಕುಮಾರ್ ರೈ, ಯಶಪಾಲ್ ಸುವರ್ಣ, ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಡಾ|ಪಿ.ವಿ.ಶೆಟ್ಟಿ, ಸಂತೋಷ್ ಗುರೂಜಿ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಜಿ.ಎ.ಭಾವ,ಮಿಥುನ್ ರೈ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

LEAVE A REPLY

Please enter your comment!
Please enter your name here