ಸಂಘದ 20ರ ಸಂಭ್ರಮಕ್ಕೆ ವರ್ಷಪೂರ್ತಿ ಸಮಾಜಮುಖಿ ವಿಭಿನ್ನ ಕಾರ್ಯಕ್ರಮಗಳು : ರಫೀಕ್ ಅಲ್ರಾಯ
ಪುತ್ತೂರು: ಕುಂಬ್ರ ವರ್ತಕರ ಸಂಘವು 20ನೇ ವರ್ಷದ ಸಂಭ್ರಮದಲ್ಲಿದ್ದು ಈ ಹಿನ್ನೆಲೆಯಲ್ಲಿ ಒಂದು ವರ್ಷ ಕಾಲ ಪ್ರತಿ ತಿಂಗಳು ಸಮಾಜಮುಖಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇದರ ಮೊದಲ ಕಾರ್ಯಕ್ರಮವಾಗಿ ಆಧಾರ್ ನೋಂದಾವಣೆ ಹಾಗೂ ತಿದ್ದುಪಡಿ ಶಿಬಿರ ಆಗಿದೆ ಎಂದು ವರ್ತಕರ ಸಂಘದ ಅಧ್ಯಕ್ಷ, ಹೊಟೇಲ್ ಉದ್ಯಮಿ ರಫೀಕ್ ಅಲ್ರಾಯ ಹೇಳಿದರು.
ಅವರು ವರ್ತಕರ ಸಂಘ ಕುಂಬ್ರ ಇದರ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ ಸಹಯೋಗದೊಂದಿಗೆ ಅ.30 ಮತ್ತು 31 ರಂದು ಕುಂಬ್ರ ಅಕ್ಷಯ ಆರ್ಕೇಡ್ನ ನೆಲ ಅಂತಸ್ತಿನಲ್ಲಿ ಬೃಹತ್ ಆಧಾರ್ ನೋಂದಾವಣೆ ಹಾಗೂ ತಿದ್ದುಪಡಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರ್ತಕರ ಸಂಘವು ಸರ್ವರ ಸಹಕಾರದೊಂದಿಗೆ ಹತ್ತುಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದು ಮುಂದೆಯೂ ತಮ್ಮೆಲ್ಲರ ಸಹಕಾರದಿಂದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲಿದೆ ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದ ರಫೀಕ್ ಅಲ್ರಾಯ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಸುದ್ದಿ ಸೌಹಾರ್ದ ಸಹಕಾರಿಯ ನಿರ್ದೇಶಕ, ಪತ್ರಕರ್ತ ಸಿಶೇ ಕಜೆಮಾರ್ ವರ್ತಕರ ಸಂಘದ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಆಧಾರ್ ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಜವಾಜ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ ಆಧಾರ್ ಲಾಕ್ ಮಾಡಿಟ್ಟುಕೊಳ್ಳುವುದು ಬಹಳ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿದ್ದ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಎ.ಗಣಪತಿ ಮರಾಡಿ, ಅಂಚೆ ಇಲಾಖೆಯ ಜನಸಂಪರ್ಕ ಅಭಿಯಾನದ ಬಗ್ಗೆ ಹಾಗೂ ತಿದ್ದುಪಡಿ, ಅಪ್ಡೇಟ್ ಮಾಡಿಸಿಕೊಳ್ಳುವುದು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು. ಅಂಚೆ ಇಲಾಖೆಯ ಮಾರ್ಕೆಟಿಂಗ್ ಕಾರ್ಯನಿರ್ವಾಹಕ ಅಧಿಕಾರಿ ಗುರುಪ್ರಸಾದ್ ಅಂಚೆ ಇಲಾಖೆಯ ಜನಸಂಪರ್ಕ ಅಭಿಯಾನ ಹಾಗೂ ಇಲಾಖೆಯಿಂದ ಸಾರ್ವಜನಿಕರಿಗೆ ಸಿಗುವ ಸೇವೆಗಳು, ವಿಮೆ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.
ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ವರ್ತಕರ ಸಂಘದ ಸಮಾಜಮುಖಿ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಆಧಾರ್ ತಿದ್ದುಪಡಿಯಂತಹ ಒಂದು ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಒಳಮೊಗ್ರು ಗ್ರಾಪಂ ಮಾಜಿ ಉಪಾಧ್ಯಕ್ಷ ಇಸುಬು ಕೆ., ವರ್ತಕರ ಬಗ್ಗೆ ಮಾತನಾಡುತ್ತಾ, ವರ್ತಕರು ಕೇವಲ ಲಾಭ ಮಾಡುವವರು ಅಲ್ಲ ಅವರಿಗೆ ನಷ್ಟದ ಕಷ್ಟ ಗೊತ್ತಿದೆ. ತಮಗೆ ಬಂದಿರುವ ಲಾಭದಲ್ಲಿ ಒಂದಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ಸಂಘದ ಗೌರವ ಸಲಹೆಗಾರರುಗಳಾದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಒಳಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನ ಮಾತನಾಡಿ, ವರ್ತಕರ ಸಂಘ ನಡೆದು ಬಂದ ಹಾದಿ ಹಾಗೂ ಸಂಘದಿಂದ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ 20 ವರ್ಷಾಚರಣೆಯ ಹಿನ್ನೆಲೆಯಲ್ಲಿ 11 ತಿಂಗಳು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 12 ನೇ ತಿಂಗಳಿಗೆ ದೊಡ್ಡಮಟ್ಟದ ಕಾರ್ಯಕ್ರಮವನ್ನು ನಡೆಸಲಾಗುವುದು ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ಸಂಘದ ಪ್ರಧಾನ ಕಾರ್ಯದರ್ಶಿ ಭವ್ಯ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ಶಶಿಕಾಂತ್ ಮಿತ್ತೂರು ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ ವಂದಿಸಿದರು. ಹರೀಶ್ ರೈ ಮುಗೇರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಚರಿತ್ ಕುಮಾರ್, ರಮ್ಯಶ್ರೀ, ಬದ್ರುನ್ನೀಸಾ, ಉದಯ ಆಚಾರ್ಯ ಕೃಷ್ಣನಗರ, ಜಯರಾಮ ಆಚಾರ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದ್ದರು. ಮಾಜಿ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಮಾಜಿ ಉಪಾಧ್ಯಕ್ಷ ರಾಜೇಶ್ ರೈ ಪರ್ಪುಂಜ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ನೂರಾರು ಜನರಿಂದ ಆಧಾರ್ ತಿದ್ದುಪಡಿ, ನೋಂದಾವಣೆ:
ಬೆಳಿಗ್ಗೆಯಿಂದ ಸಂಜೆ ತನಕ ನಡೆಯುವ ಆಧಾರ್ ನೋಂದಾವಣೆ, ತಿದ್ದುಪಡಿ ಶಿಬಿರಕ್ಕೆ ನೂರಾರು ಮಂದಿ ಆಗಮಿಸಿ ತಮ್ಮ ಆಧಾರ್ ನೋಂದಣಿ, ತಿದ್ದುಪಡಿ ಇತ್ಯಾದಿಗಳನ್ನು ಮಾಡಿಸಿಕೊಂಡರು. ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಅಧಿಕಾರಿಗಳು ಸಾರ್ವಜನಿಕರಿಗೆ ಸೇವೆ ನೀಡಿದರು.
ಇಂದು ನಾಳೆ ಆಧಾರ್ ನೋಂದಾವಣೆ, ತಿದ್ದುಪಡಿ:
ಹೊಸ ನೋಂದಾವಣೆ, ಹೆಸರು ಬದಲಾವಣೆ, ವಿಳಾಸ ಬದಲಾವಣೆ, ಜನ್ಮ ದಿನಾಂಕ ತಿದ್ದುಪಡಿ, ಬಯೋಮೆಟ್ರಿಕ್ (ಬೆರಳಚ್ಚು) ಪರಿಷ್ಕರಣೆ, ಮೊಬೈಲ್ ನಂಬರ್ ಸೇರ್ಪಡೆ, ತಿದ್ದುಪಡಿ ಇತ್ಯಾದಿ ಸೇವೆಗಳು ಲಭ್ಯವಿದ್ದು ಅ.31 ರಂದು ಸಂಜೆ ಶಿಬಿರ ಸಮರೋಪ ನಡೆಯಲಿದೆ. ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಶಿಬಿರಕ್ಕೆ ಬಂದು ಪ್ರಯೋಜನ ಪಡೆದುಕೊಳ್ಳುವಂತೆ ವರ್ತಕರ ಸಂಘದ ಪ್ರಕಟಣೆ ತಿಳಿಸಿದೆ.