ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ಸಾಧಕರ ಆಯ್ಕೆ

0

ಪುತ್ತೂರು:2023ನೇ ಸಾಲಿನ ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಿಂದ ಒಟ್ಟು 46 ಮಂದಿ ಸಾಧಕರನ್ನು ವೈಯಕ್ತಿಕ ವಿಭಾಗದಲ್ಲಿ ಆಯ್ಕೆ ಮಾಡಲಾಗಿದ್ದುಪುತ್ತೂರು,ಕಡಬದಿಂದಲೂ ಕೆಲವು ಸಾಧಕರು ಆಯ್ಕೆಯಾಗಿದ್ದಾರೆ.ಸಂಘ ಸಂಸ್ಥೆಗಳ ವಿಭಾಗದಲ್ಲಿ ಜಿಲ್ಲೆಯ 17 ಸಂಘ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವೈಯಕ್ತಿಕ ವಿಭಾಗದಲ್ಲಿ ಜಾನಪದ ಕ್ಷೇತ್ರದಲ್ಲಿ ಡಾ|ರವೀಶ್ ಪರವ ಪಡುಮಲೆ,ಪತ್ರಿಕೋದ್ಯಮ ಕ್ಷೇತ್ರದಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಹಿರಿಯ ಫೊಟೋ ಜರ್ನಲಿಸ್ಟ್ ಪೆರ್ಲಂಪಾಡಿ ಮೂಲದ ರವಿ ಪೊಸವಣಿಕೆ, ವಾರ್ತಾಭಾರತಿ ಹಿರಿಯ ವರದಿಗಾರ ಇಬ್ರಾಹಿಂ ಅಡ್ಕಸ್ಥಳ, ಸಮಾಜ ಸೇವೆ ಕ್ಷೇತ್ರದಿಂದ ಕೆ.ಪಿ.ಅಹಮ್ಮದ್ ಹಾಜಿ, ಚಾರ್ವಾಕ ಸಿಎ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಆರ್ಯಾಪು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು,ಕೃಷಿ ಕ್ಷೇತ್ರದಿಂದ ಪ್ರಗತಿಪರ ಕೃಷಿಕ ಮತ್ತು ಕಂಬಳ ಕ್ಷೇತ್ರದಲ್ಲಿಯೂ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಕೇಶವ ಭಂಡಾರಿ ಕೈಪ, ದೈವಾರಾಧನೆ ಮತ್ತು ಜಾನಪದ ಸಾಹಿತ್ಯ ಕ್ಷೇತ್ರದಿಂದ ದೈವದ ಮಧ್ಯಸ್ಥ ಮತ್ತು ಕರ‍್ಯಕ್ರಮ ನಿರೂಪಕ ಮನ್ಮಥ ಜೆ.ಶೆಟ್ಟಿ ಹಾಗೂ ಕಲಾ ಕ್ಷೇತ್ರದಿಂದ ನಾಟಕ ಕಲಾವಿದ ಎ.ಎಸ್.ದಯಾನಂದ ಕುಂತೂರು ಅವರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಕಲಾ ಕ್ಷೇತ್ರದಿಂದ ಕರೋಪಾಡಿಯ ರಮೇಶ ಪಳನೀರು,ಯಕ್ಷಗಾನ ಕಲೆ ಕ್ಷೇತ್ರದಿಂದ ವೀರಕಂಭ ಬೊನ್ಯಕುಕ್ಕು ಯಕ್ಷಜ್ಯೋತಿಯ ದಿನೇಶ್ ಶೆಟ್ಟಿಗಾರ್ ಅವರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಎನ್.ರವೀಂದ್ರ ಶೆಟ್ಟಿ ನುಳಿಯಾಲು: ನಿಡ್ಪಳ್ಳಿ ಗ್ರಾಮದ ನುಳಿಯಾಲು ಬಾರಿಕೆ ತರುವಾಡು ಮನೆತನದವರಾದ ಎನ್.ರವೀಂದ್ರ ಶೆಟ್ಟಿಯವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿದ್ದು, ಎಳೆತನದಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಸಾಧನಾ ರಂಗಕ್ಕೆ ಅಡಿಯಿಟ್ಟವರು.ತಂಬುತಡ್ಕದಲ್ಲಿ ಆದರ್ಶ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ ತನ್ನ ಉಸ್ತುವಾರಿಯಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿದರು.ಇರ್ದೆ-ಬೆಟ್ಟಂಪಾಡಿ ಮಂಡಲ ಪಂಚಾಯತ್ ಉಪ ಪ್ರಧಾನರಾಗಿ ತನ್ನ ಸಾಮಾಜಿಕ ಕೆಲಸ ಕಾರ್ಯಗಳಿಗೆ ಮುನ್ನುಡಿ ಬರೆದರು.ಇವರ ಅಧಿಕಾರಾವಧಿಯಲ್ಲಿ ನಿಡ್ಪಳ್ಳಿ-ಕರ್ನಪ್ಪಾಡಿ ಸೇತುವೆ ನಿರ್ಮಾಣ, ಸಂಪರ್ಕ ರಸ್ತೆ, ಕುಡಿಯುವ ನೀರು, 4 ವಿದ್ಯುತ್ ಟ್ರಾನ್ಸ್ಫಾರ್ಮ್ರ್ ಅಳವಡಿಕೆ, ಪ.ಜಾತಿ ಕಾಲೋನಿ ಅಭಿವೃದ್ಧಿ ಮುಂತಾದ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಮುಂಡೂರು-1 ಹಿ.ಪ್ರಾ.ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸುಮಾರು 15 ವರ್ಷಗಳ ಕಾಲ ದುಡಿದು ಇಲಾಖೆಯಿಂದ ಸಿಗುವ ವಿವಿಧ ಸವಲತ್ತುಗಳನ್ನು ದೊರಕಿಸಿಕೊಡುವುದರ ಮೂಲಕ 2 ಕೊಠಡಿ, ರಂಗಮಂದಿರ ನಿರ್ಮಿಸಿ ಕೆಲವೊಮ್ಮೆ ಸ್ವಂತ ಹಣ ಹಾಕಿ ಅಭಿವೃದ್ಧಿ ಕರ‍್ಯಗಳನ್ನು ಮಾಡಿದ್ದಾರೆ.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಉತ್ಸವ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಾಲಯ, ಕಿನ್ನಿಮಾಣಿ-ಪೂಮಾಣಿ, ರಾಜನ್ ದೈವಸ್ಥಾನದ ಪುನರ್ ನಿರ್ಮಾಣ ಕಾರ್ಯದಲ್ಲಿ ಅಪಾರ ಶ್ರಮ ವಹಿಸಿದ್ದರು.ಪಾಣಾಜೆ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶ್ರೀ ಜ್ಞಾನ ಮಂದಾರ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರು ಇದರ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ 5ನೇ ವಿಶ್ವ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ 2019 ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ನೀಡುವ ¾ಜ್ಞಾನ ಮಂದಾರ ಸೇವಾ ರತ್ನ¿ ರಾಷ್ಟ್ರೀಯ ಪುರಸ್ಕಾರಕ್ಕೆ ರವೀಂದ್ರ ಶೆಟ್ಟಿರವರು ಭಾಜನರಾಗಿದ್ದಾರೆ.ಕೊರೋನಾ ಸಮಯದಲ್ಲಿ ಸುಮಾರು ರೂ.3 ಲಕ್ಷ ವೆಚ್ಚದಲ್ಲಿ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸಿ ಮಾನವೀಯತೆ ಮೆರೆದಿದ್ದರು.ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಪುತ್ತೂರು ಮಹಾಲಿಂಗೇಶ್ವರ ದೇವಳ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.ಬಂಟ್ವಾಳ ತಾಲೂಕು ನಡ್ಕೇಲು ರಾಮಣ್ಣ ಶೆಟ್ಟಿ ಮತ್ತು ಯಮುನಾ ಆರ್.ಶೆಟ್ಟಿಯವರ ಪುತ್ರರಾದ ಇವರು ಪತ್ನಿ ಅಮಿತಾ ರವೀಂದ್ರ ಶೆಟ್ಟಿ ಮಠಂತಬೆಟ್ಟು, ಮಕ್ಕಳಾದ ಸೂರಜ್ ಕುಮಾರ್ ಶೆಟ್ಟಿ, ಸುಜೀರ್ ಕುಮಾರ್ ಶೆಟ್ಟಿ ಮತ್ತು ಸಜಿತ್ ಕುಮಾರ್ ಶೆಟ್ಟಿಯವರೊಂದಿಗೆ ಮುಕ್ರಂಪಾಡಿ ನುಳಿಯಾಲು ನಿವಾಸದಲ್ಲಿ ವಾಸ್ತವ್ಯವಿದ್ದಾರೆ.

ಅಶೋಕ್ ಗೌಡ ಚಾರ್ವಾಕ: ಚಾರ್ವಾಕ ಪ್ರಾ.ಕೃ.ಪ.ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಅವರು ಈ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಇನ್ನೋರ್ವ ಸಾಧಕ.
ಕಡಬ ತಾಲೂಕಿನ ಬರೆಪ್ಪಾಡಿಯ ಅಶೋಕ್ ಗೌಡ ಅವರ ಸಮಾಜ ಸೇವೆಯನ್ನು ಗುರುತಿಸಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಅಶೋಕ್‌ರವರು ಮೈಸೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣದ ಮೂಲಕ ಅರ್ಥಶಾಸ್ತ್ರ ಅಧ್ಯಯನ ಮಾಡಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪೂರೈಸಿರುತ್ತಾರೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಶೋಕ್‌ರವರು ತಾನು ವಿದ್ಯಾಭ್ಯಾಸ ಮಾಡಿರುವ ಉಪ್ಪಿನಂಗಡಿ ಪುಳಿತ್ತಡಿ ಸ.ಹಿ.ಪ್ರಾ.ಶಾಲೆಯಲ್ಲಿ ನಾಮ ನಿರ್ದೇಶಿತ ಶಿಕ್ಷಣ ತಜ್ಞನಾಗಿ ಹಾಗೂ ಶಾಲಾ ಸುವರ್ಣ ಮಹೋತ್ಸವ ಸಮಿತಿಯಲ್ಲಿ ಜತೆ ಕಾರ್ಯದರ್ಶಿಯಾಗಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯರಾಗಿರುತ್ತಾರೆ.ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರಾಗಿ, ಪುಳಿತ್ತಡಿ ಮಯೂರ ಮಿತ್ರ ವೃಂದದ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು ತುಳು ನಾಟಕಗಳಲ್ಲಿ ಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.ಅಶೋಕ ಗೌಡರು ಈಗಾಗಲೇ ಸ್ವಾಮಿ ವಿವೇಕಾನಂದ ಭಾವೈಕ್ಯ ರತ್ನ ಪ್ರಶಸ್ತಿ, ಸಹಕಾರ ಸುದ್ದಿ ಮೈಸೂರು ಇದರ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಗೀತಾಜಯಂತಿ ಪ್ರಯುಕ್ತ ಬಂಟ್ವಾಳದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಇದರ ಆಯೋಜನೆಯ ಚಿಂತನಗಾಥಾ ಸ್ಪರ್ಧೆಯಲ್ಲಿ ಪ್ರೋತ್ಸಾಹಕ ಬಹುಮಾನ,ಸುದ್ದಿ ಜನಾಂದೋಲನ ವೇದಿಕೆಯ ವತಿಯಿಂದ ಲಂಚ ರಹಿತವಾಗಿ ಉತ್ತಮ ಸೇವೆ ನೀಡುವ ಅಧಿಕಾರಿಯಾಗಿ ಜನರಿಂದ ಆಯ್ಕೆಯಾಗಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕಾರ, ಸಮಾಜ ಸೇವೆಯನ್ನು ಗುರುತಿಸಿ ಸಿದ್ದಗಂಗಾ ಶ್ರೀ ಸಧ್ಭಾವನಾ ರಾಷ್ಟ್ರೀಯ ಪ್ರಶಸ್ತಿ,ರಂಗ ಕಲಾ ವೇದಿಕೆ ಬೆಂಗಳೂರು ಇದರ ವತಿಯಿಂದ ಪುನೀತ್ ರಾಜ್ ಕುಮಾರ್ ಇವರ ಸ್ಮರಣಾರ್ಥ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಇವರು ಇತ್ತೀಚೆಗೆ 2022-23ನೇ ಸಾಲಿನಲ್ಲಿ ದೇಶದ ಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿ.ಇ.ಓ ಗಳಿಗೆ ನಡೆಸಿದ ಸರ್ಟಿಫೈಡ್ ಪ್ಯಾಕ್ಸ್ ಸೆಕ್ರೆಟರಿ ಪರೀಕ್ಷೆಗೆ ಕರ್ನಾಟಕದಿಂದ ಪರೀಕ್ಷೆ ಬರೆದ 3 ಜನರಲ್ಲಿ ಇವರು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಕೆ.ಪಿ.ಅಹಮ್ಮದ್ ಹಾಜಿ: ಶಿಕ್ಷಣ ಸಂಸ್ಥೆಗಳ ರೂವಾರಿ, ಖ್ಯಾತ ಉದ್ಯಮಿಗಳೂ ಆಗಿರುವ ಕೆ.ಪಿ.ಅಹಮ್ಮದ್ ಹಾಜಿ ಅವರು ದಿ|ಎಸ್.ಮೊಯ್ದಿನ್ ಹಾಗೂ ಕೆ.ರುಕ್ಯರವರ ಪುತ್ರ.ಪುತ್ತೂರಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.ಅನ್ಸಾರುದ್ದೀನ್ ಎಜುಕೇಶನ್ ಟ್ರಸ್ಟ್ ಪುತ್ತೂರು ಮತ್ತು ಮೌಂಟನ್ ವ್ಯೂ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್ ಇದರ ಸ್ಥಾಪಕರು ಮತ್ತು ಮ್ಯಾನೇಜಿಂಗ್ ಟ್ರಸ್ಟಿಗಳೂ ಆಗಿರುವ ಇವರು ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕುಂಬ್ರ ಮತ್ತು ಅಲ್ ಕೌಸರ್ ಶರೀಯತ್ ಕಾಲೇಜು ಪುತ್ತೂರು ಇದರ ಮ್ಯಾನೇಜಿಂಗ್ ಟ್ರಸ್ಟಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.ಖಿದ್ಮತ್ತುದ್ದೀನ್ ಯಂಗ್ ಮೆನ್ಸ್ ಎಸೋಸಿಯೇಶನ್ ಕುಂಬ್ರ, ಜಮೀಯ್ಯತ್ತುಲ್ ಫಲಾಹ್ ದ.ಕ.ಜಿಲ್ಲೆ, ಪುತ್ತೂರು ಘಟಕ ಮತ್ತು ಪುತ್ತೂರು ತಾಲೂಕು ಅಡಿಕೆ ವರ್ತಕರ ಸಂಘದ ಸ್ಥಾಪಕಾಧ್ಯಕ್ಷರೂ ಆಗಿದ್ದಾರೆ.ಆಕರ್ಷಣ್ ಗ್ರೂಪ್ ಸಂಸ್ಥೆಗಳ ಚೇರ್ಮೆನ್ ಆಗಿ ಆಕರ್ಷಣ್ ಇನ್‌ಫ್ರಾಸ್ಟ್ರಕ್ಚರ್ ಇದರ ಮ್ಯಾನೇಜಿಂಗ್ ಪಾರ್ಟ್ನರ್ ಆಗಿ ಆಕರ್ಷಣ್ ಡೆವಲಪ್ಪರ್ಸ್ ಇದರ ಮ್ಯಾನೇಜಿಂಗ್ ಪಾರ್ಟ್ನರ್ ಆಗಿ, ಆಕರ್ಷಣ್ ಗ್ರಾನೈಟ್ ಸ್‌ಇದರ ಮ್ಯಾನೇಜಿಂಗ್ ಪಾರ್ಟ್ನರ್ ಆಕರ್ಷಣ್ ಇಂಡಸ್ಟ್ರೀಸಿನ ಪಾಲುದಾರರಾಗಿ ಸಿಟಿಗೋಲ್ಡ್ ಪುತ್ತೂರು ಇದರ ಪಾಲುದಾರರಾಗಿದ್ದಾರೆ.ಅನ್ಸಾರುದ್ದೀನ್ ಓರ್ಫನೇಜ್ ಪುತ್ತೂರು ಇದರ ಅಧ್ಯಕ್ಷರಾಗಿ, ಕುಂಬ್ರ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಪುತ್ತೂರು ತಾಲೂಕು ಸೀರತ್ ಕಮಿಟಿಯ ಅಧ್ಯಕ್ಷರಾಗಿ, ಸಿಡ್ಕೊ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.ಪ್ರಸ್ತುತ ಸೌತ್ ಕೆನರಾ ಮುಸ್ಲಿಂ ಎಜುಕೇಶನಲ್ ಟ್ರಸ್ಟ್ ಮಂಗಳೂರು,ಹಝ್ರತ್ ಸಯ್ಯದ್ ಮದನಿ ರೆಸಿಡೆನ್ಶಿಯಲ್ ಸ್ಕೂಲ್ ಕೋಟೆಕಾರ್ ಇದರ ಮಾಜಿ ಉಪಾಧ್ಯಕ್ಷರಾಗಿರುವ ಇವರ ಕರ್ನಾಕಟ ರಾಜ್ಯ ವಕ್ಫ್ ಕೌನ್ಸಿಲ್‌ನ ಮಾಜಿ ಸದಸ್ಯ.ಜಿಲ್ಲಾ ಕಾಂಗ್ರೆಸ್ ಮತ್ತು ಮುಸ್ಲಿಂ ಸೆಂಟ್ರಲ್ ಕಮಿಟಿ ದಕ..,ಉಡುಪಿ ಇದರ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.ಬ್ಯಾರೀಸ್ ವೆಲ್ಫೇರ್ ಎಸೋಸಿಯೇಶನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು.‌

ಎ.ಎಸ್.ದಯಾನಂದ ಕುಂತೂರು: ತುಳು ರಂಗಭೂಮಿ, ಚಲನಚಿತ್ರ ರಂಗದ ಸಾಧನೆಗಾಗಿ ಸ್ತ್ರೀ ಪಾತ್ರಧಾರಿ,ಪೆರಾಬೆ ಗ್ರಾಮದ ಅಗತ್ತಾಡಿ ದೋಲ ಬಾರಿಕೆ ಎ.ಎಸ್.ದಯಾನಂದ ಕುಂತೂರು ಅವರನ್ನು ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸುಳ್ಯದ ಅಲೆಕ್ಕಾಡಿ ಶೀನಪ್ಪ ಪೂಜಾರಿ ಮತ್ತು ಕುಂತೂರು ಅಗತ್ತಾಡಿ ದೋಲ ಹೇಮಾವತಿ ದಂಪತಿಯ ಏಳನೇ ಮಗ ದಯಾನಂದ ಅವರು, ಶಾಲಾ ದಿನಗಳಲ್ಲಿಯೇ ಬಣ್ಣ ಹಚ್ಚಿ ರಂಗಭೂಮಿಯನ್ನು ವೃತ್ತಿಯನ್ನಾಗಿಸಿಕೊಂಡಿದ್ದರು.ತನ್ನ 8ನೇ ವಯಸ್ಸಿನಲ್ಲಿಯೇ ನೆತ್ತರ್ದಕಾಣಿಕೆ ನಾಟಕದಲ್ಲಿ ಅಭಿನಯಿಸುವ ಮೂಲಕ ರಂಗಭೂಮಿ ಪ್ರವೇಶ ಮಾಡಿದ್ದ ಇವರು ಕಳೆದ ನಾಲ್ಕು ದಶಕಗಳಲ್ಲಿ ರಂಗಭೂಮಿಯಲ್ಲಿ ಚಾಲ್ತಿಯಲ್ಲಿರುವ ಕಲಾವಿದನಾಗಿದ್ದು ಈವರೆಗೆ ಸುಮಾರು 3500ಕ್ಕೂ ಮಿಕ್ಕಿ ನಾಟಕಗಳಲ್ಲಿ ಸ್ತ್ರೀವೇಷಧಾರಿಯಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ.ನಾಟಕದ ಜೊತೆಗೆ ಯಕ್ಷಗಾನದಲ್ಲಿಯೂ ಇವರು ತನ್ನ ಛಾಪು ಮೂಡಿಸಿದವರು.ಜಮ್ಮುಕಾಶ್ಮೀರದಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಹಿರಿವೆ ಇವರದು.ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ,ದುಬೈ,ಅಬುಧಾಬಿ, ಒಮಾನ್ ದೇಶಗಳಲ್ಲಿಯೂ ಇವರು ನಾಟ್ಯ,ನಾಟಕ ಕಾರ್ಯಕ್ರಮ ನೀಡಿದ್ದರು.ಲಕ್ಷ್ಮಣ ಕನ್ನಡ ಸಿನಿಮಾದಲ್ಲಿಯೂ ಇವರು ನಟಿಸಿದ್ದರು.ಇವರ ಕಲಾಸೇವೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ.ಹಲವು ಪ್ರಶಸ್ತಿಗಳೂ ಇವರನ್ನು ಅರಸಿಕೊಂಡು ಬಂದಿವೆ.

ಕೇಶವ ಭಂಡಾರಿ ಕೈಪ: ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿಯವರು ಪ್ರಗತಿಪರ ಕೃಷಿಕರಾಗಿದ್ದು ಜೊತೆಗೆ ಕಂಬಳ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದಾರೆ.ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿಯಲ್ಲಿ ಪದಾಧಿಕಾರಿಯೂ ಆಗಿರುವ ಇವರು ಕಂಬಳದ ಕೋಣಗಳ ಯಜಮಾನರಾಗಿದ್ದು ಹಲವು ಕೂಟಗಳಲ್ಲಿ ಇವರ ಕೋಣಗಳು ಬಹುಮಾನವನ್ನು ಪಡೆದುಕೊಂಡಿವೆ.ಜೊತೆಗೆ ಸಮಾಜದ ಇತರ ಸಂಘ ಸಂಸ್ಥೆಗಳಲ್ಲೂ ಇವರು ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ.

ಡಾ|ರವೀಶ್ ಪಡುಮಲೆ: ಉಜಿರೆ ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಎಸೋಸಿಯೇಟ್ ಪ್ರೊಫೆಸ್ಸರ್ ಆಗಿರುವ ಡಾ|ರವೀಶ್ ಪಡುಮಲೆ ಅವರು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪುರಸ್ಕರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಸಂದರ್ಭ ಡಾ|ರವೀಶ್ ಪಡುಮಲೆ ಅವರಿಗೆ ಗುರು ಪುರಸ್ಕಾರ-2023 ನೀಡಿ ಗೌರವಿಸಲಾಗಿತ್ತು.

LEAVE A REPLY

Please enter your comment!
Please enter your name here