ರಾಮಾಯಣ, ಮಹಾಭಾರತಗಳಲ್ಲಿ ’ಕರ್ಣಾಟಕ’ ಪದ ಉಲ್ಲೇಖವಿದೆ : ಡಾ.ಶ್ರೀಧರ ಎಚ್.ಜಿ.
ಪುತ್ತೂರು: ರಾಮಾಯಣ, ಮಹಾಭಾರತದಲ್ಲಿಯೇ ’ಕರ್ಣಾಟಕ’ದ ಬಗೆಗೆ ಉಲ್ಲೇಖವಿದೆ. 1956ರಲ್ಲಿ ಉದಯವಾದ ಮೈಸೂರು ಸಂಸ್ಥಾನ ತದನಂತರ 1973ರಲ್ಲಿ ’ಕರ್ನಾಟಕ’ ಎಂದು ಮರು ನಾಮಕರಣಗೊಂಡಿರುವುದು ಆಧುನಿಕ ಇತಿಹಾಸ. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಕದಂಬ, ಚಾಲುಕ್ಯ, ರಾಷ್ಟ್ರಕೂಟ ಹಾಗೂ ಮೌರ್ಯ ಮನೆತನದ ಕೊಡುಗೆ ಅಪಾರ. ಇಂತಹ ಉತ್ಕೃಷ್ಟ ಭಾಷೆಯನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಹೆಚ್.ಜಿ.ಶ್ರೀಧರ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಲಾದ ಕನ್ನಡ ರಾಜ್ಯೋತ್ಯವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನಮ್ಮೆಲ್ಲರಲ್ಲೂ ಇಂಗ್ಲೀಷ್ ವ್ಯಾಮೋಹ ಬೆಳೆದಿದೆ. ಅದರಲ್ಲೂ ಇಂದು ಖಾಸಗಿ ಮಾಧ್ಯಮಗಳಲ್ಲಿ ಕನ್ನಡದ ಕೊಲೆಯಾಗುತ್ತಿದೆ. ನಾವು ಕನ್ನಡದ ಬಗ್ಗೆ ಸ್ವಾಭಿಮಾನವನ್ನು ಮೂಡಿಸಿಕೊಳ್ಳಬೇಕು. ಕನ್ನಡ ಅಭಿಮಾನವನ್ನು ಬೆಳೆಸಬೇಕು ಎಂದು ನುಡಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಅಂಬಿಕಾ ಸಿಬಿಎಸ್ಇ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ಜಸ್ವಿತ್ ಸ್ವಾಗತಿಸಿ, ವಿದ್ಯಾರ್ಥಿನಿ ಅನ್ಸಿಕಾ ವಂದಿಸಿದರು. ವಿದ್ಯಾರ್ಥಿನಿ ಚಂದನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ನಿಹಾರಿಕ ಎಂ ಹಾಗೂ ಮಂದಿರಾ ಕಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.