*ರಾಮ ನಾಮ ಜಪ ಆರಂಭಿಸಿದ ರಾಜ್ಯದ ಪ್ರಪ್ರಥಮ ವಿದ್ಯಾ ಸಂಸ್ಥೆ
*ಲೋಕಕಲ್ಯಾಣಕ್ಕಾಗಿ ರಾಮ ನಾಮ ಅಗತ್ಯ : ಕಶೆಕೋಡಿ ಸೂರ್ಯನಾರಾಯಣ ಭಟ್
ಪುತ್ತೂರು: ಸಮಸ್ಯೆಗಳ ಕೂಪದಿಂದ ಪಾರುಮಾಡಲು ರಾಮಮಂತ್ರ ಸಹಕಾರಿಯಾಗಿದೆ. ರಾಮಮಂತ್ರವನ್ನು ಪಠಿಸಿದರೆ ಜೀವನದ ಸಮಸ್ಯೆಗಳು ದೂರವಾಗಿ, ಅಭಿವೃದ್ಧಿ ಹೊಂದುವ ಮೂಲಕ ಯಶಸ್ಸು ಪಡೆಯಲು ಸಾಧ್ಯ. ರಾಮ ತಾರಕ ನಾಮ ಜಪ ಕೇವಲ ಮಂತ್ರವಾಗಿ ಪಠಿಸುವ ಬದಲು, ಅದನ್ನು ಜ್ಞಾನ ಯಜ್ಞವಾಗಿ ಪರಿವರ್ತಿಸಿದಾಗ ಅದು ಕೇವಲ ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ ದೇಶದ ಬೆಳವಣಿಗೆಗೂ ಸಹಾಯ ಮಾಡುತ್ತದೆ ಎಂದು ವಿದ್ವಾಂಸ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ ದಶಾಂಬಿಕೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಹಯೋಗದೊಂದಿಗೆ ಸಂಸ್ಥೆಯಲ್ಲಿ ಆರಂಭಿಸಲಾದ ರಾಮ ತಾರಕ ನಾಮ ಜಪ ಮಹಾಯಜ್ಞಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
2024ರ ಜನವರಿ ತಿಂಗಳಲ್ಲಿ ಅಯೋಧ್ಯೆಯ ಶ್ರೀರಾಮಮಂದಿರ ಲೋಕಾರ್ಪಣೆಯಾಗಲಿರುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ರಾಜ್ಯದಲ್ಲಿ 100 ಕೋಟಿ ರಾಮ ನಾಮ ಜಪ ಮಾಡುವ ಮಹಾಯಜ್ಞಕ್ಕೆ ಸಂಕಲ್ಪ ಮಾಡಲಾಗಿದೆ. ಎಲ್ಲಾ ಊರಿನ ನಾಗರಿಕರು, ಶಾಲಾ ಮಕ್ಕಳು ಸೇರಿಕೊಂಡಲ್ಲಿ ಯಾವುದೂ ಅಸಾಧ್ಯವಲ್ಲ. ದೃಢ ನಿಶ್ಚಯದೊಂದಿಗೆ ಮುಂದುವರಿದಲ್ಲಿ ಮತ್ತೆ ರಾಮ ರಾಜ್ಯದ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನ ಫಲಿಸಲಿದೆ. ರಾಮ ಮಂತ್ರ ಪಠಣೆಯಿಂದ ವಿದ್ಯಾವಂತ, ವಿನಯವಂತ ಹಾಗೂ ಹೃದಯವಂತರಾಗಲು ಸಾಧ್ಯವಿದೆ ಎಂದು ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯ ಹರಿಪ್ರಸಾದ್ ಪೆರಿಯಾಪು ಮಾತನಾಡಿ, ರಾಮಮಂದಿರದ ಪ್ರತಿಷ್ಠೆಯ ಶುಭ ಸಂದರ್ಭದಲ್ಲಿ ರಾಮ ತಾರಕ ನಾಮ ಜಪ ಮಹಾಯಜ್ಞವೆಂಬ ಕಲ್ಯಾಣ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕಾರ್ಯಕ್ಕೆ ಶಿಕ್ಷಣ ಸಂಸ್ಥೆ ಕೈಜೋಡಿಸಿದೆ. ಹಾಗಾಗಿ ಪುತ್ತೂರಿನ ಅಂಬಿಕಾ ವಿದ್ಯಾಲಯ ರಾಮ ತಾರಕ ಮಂತ್ರ ಪಠಣೆ ಮಾಡುತ್ತಿರುವ ರಾಜ್ಯದ ಪ್ರಥಮ ಸಂಸ್ಥೆಯಾಗಿದೆ. ಅಂಬಿಕಾ ಸಂಸ್ಥೆಯಲ್ಲಿ 50 ಲಕ್ಷಕ್ಕೂ ಹೆಚ್ಚು ರಾಮ ನಾಮ ಮಂತ್ರ ಪಠಣೆ ನಡೆಯುವ ನಿರೀಕ್ಷೆ ಇದೆ ಎಂದು ಹೇಳಿದರು.
ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ, ರಾಮ ಎಂಬ ಪದವೇ ಒಂದು ಶಕ್ತಿ. ಸೀತಾಪಹರಣದ ಸಂದರ್ಭ ಶ್ರೀರಾಮ ಕಪಿಗಳನ್ನು ಪರಿವರ್ತಿಸಿ ಸೈನ್ಯವಾಗಿ ಸಂಘಟಿಸಿದ ರೀತಿ ಅದ್ಭುತವಾದುದು. ಹನುಮಂತನಿಗೆ ಆತನ ಶಕ್ತಿ ಹೊರಹೊಮ್ಮುವಂತೆ ಮಾಡಿಸಿದ್ದು ಇದೇ ಶ್ರೀ ರಾಮ. ರಾಮ ನಾಮ ಮಂತ್ರ ಪಠಣೆಯ ಉದ್ದೇಶ ದುಷ್ಟರ ದಮನ ಹಾಗೂ ಜಗತ್ತಿನ ಕಲ್ಯಾಣ. ಉತ್ತಮ ವಿಚಾರಗಳ ಅಭಿವೃದ್ಧಿ, ದುಷ್ಟ ಶಕ್ತಿಗಳ ನಿರ್ನಾಮವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ದೇಶ ಕಟ್ಟುವಲ್ಲಿ ಮುಂದಾಳತ್ವ ವಹಿಸಬಲ್ಲ ಆದರ್ಶ ವಿದ್ಯಾರ್ಥಿಗಳ ನಿರ್ಮಾಣದತ್ತ ಅಂಬಿಕಾ ಸದಾ ಯೋಚನೆ ಯೋಜನೆ ರೂಪಿಸುತ್ತಿದೆ. ದೇಶದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾದ ಜವಾಬ್ದಾರಿಯೂ ಇಂದಿನ ಕಾಲಘಟ್ಟದಲ್ಲಿ ಅಗತ್ಯವಾಗಿದೆ. ಈ ಸಂದರ್ಭದಲ್ಲಿ 2024ರ ಜನವರಿ 22ರಂದು ನಡೆಯಲಿರುವ ರಾಮಮಂದಿರ ಕುಂಭಾಭಿಷೇಕ ಅಂಗವಾಗಿ ನಾಮ ಸ್ಮರಣೆ ಮಾಡಲು ಅವಕಾಶ ಲಭಿಸಿರುವುದು ಪುಣ್ಯದ ವಿಚಾರವಾಗಿದೆ ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸೀಮಾ ನಾಗರಾಜ್, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಪ್ರಾಂಶುಪಾಲೆ ಮಾಲತಿ ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸಹಿತವಾಗಿ ಬೋಧಕ ಬೋಧಕೇತರ ವೃಂದ, ವಿದ್ಯಾರ್ಥಿಗಳು ರಾಮ ತಾರಕ ನಾಮ ಜಪವನ್ನು ಮಾಡಿದರು. ಶಿಕ್ಷಕಿ ಗೌರಿ ಬಿ.ವಿ. ಕಾರ್ಯಕ್ರಮ ನಿರ್ವಹಿಸಿದರು.