ಪುತ್ತೂರು: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನ.3 ರಂದು ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ತಾಲೂಕು ಪದವಿ ಪೂರ್ವ ಕಾಲೇಜು ವಿಭಾಗದ ಬಾಲಕ-ಬಾಲಕಿಯರ ಕ್ರೀಡಾಕೂಟದ ಉದ್ಘಾಟನೆ ನೆರವೇರಿತು.
ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಯಾರು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೋ ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ದೃಢತೆಯನ್ನು ಹೊಂದುತ್ತಾರೆ. ಸೋಲು-ಗೆಲುವು ಇವುಗಳನ್ನು ಕ್ರೀಡಾಪಟುಗಳು ಸಮಾನವಾಗಿ ಸ್ವೀಕರಿಸಿ ಮುನ್ನೆಡೆಯಬೇಕು ಎಂದು ಹೇಳಿ ಶುಭ ಹಾರೈಸಿದರು.
ಮುಖ್ಯ ಅತಿಥಿ, ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ರಾಜ್ಯಮಟ್ಟದ ಕ್ರೀಡಾ ಸಮಿತಿಯ ಸಂಚಾಲಕ ಪ್ರೇಮ್‌ನಾಥ್ ಶೆಟ್ಟಿ ಮಾತನಾಡಿ, ಇಂದಿನ ಕ್ರೀಡಾಕೂಟ ಬೇರೆ ಕಾಲೇಜಿನ ಆಶ್ರಯದಲ್ಲಿ ನಡೆಯಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಫಿಲೋಮಿನಾದಲ್ಲಿ ನಡೆಸಬೇಕಾಯಿತು. ತಾಲೂಕಿನ ಕ್ರೀಡಾಪಟುಗಳಿಗೆ ಅನ್ಯಾಯವಾದಾಗ ಫಿಲೋಮಿನಾ ವಿದ್ಯಾಸಂಸ್ಥೆ ಮುಂಚೂಣಿಯಲ್ಲಿ ನಿಂತು ಕ್ರೀಡಾಪಟುಗಳಿಗೆ ಆಧಾರವಾಗುತ್ತಿದೆ. ಫಿಲೋಮಿನಾ ಕ್ರೀಡಾಂಗಣದಲ್ಲಿ ಆಭ್ಯಸಿಸಿದ ಅದೆಷ್ಟೋ ಮಂದಿ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸಿದ್ದಾರೆ ಎಂದರು.
ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ ಮಾತನಾಡಿ, ಕ್ರೀಡೆ ಎಂಬುವುದು ಮನುಷ್ಯನ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳು ವಿದ್ಯಾರ್ಥಿದಿಸೆಯಲ್ಲಿ ಇದ್ದಾಗಲೇ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಸ್ಫೂರ್ತಿಯ ಸೆಲೆಯಾಗಿ ಕ್ರೀಡಾಪಟುಗಳು ಮುನ್ನೆಡೆಯಿರಿ ಎಂದರು.
ವೇದಿಕೆಯಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯರವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಗೀತಾ ಕುಮಾರಿ ವಂದಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಉಷಾ ಯಶ್ವಂತ್ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಜ್ಯೋತಿಯೊಂದಿಗೆ ಚಾಲನೆ….
ಕ್ರೀಡಾಕೂಟದ ಪ್ರಯುಕ್ತ ಆರಂಭದಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ, ಕ್ರೀಡೆಯಲ್ಲಿ ದಕ್ಷಿಣ ವಲಯ ಮಟ್ಟವನ್ನು ಪ್ರತಿನಿಧಿಸಿದ ಆದರ್ಶ್ ಶೆಟ್ಟಿರವರು ಉರಿಸಿದ ಕ್ರೀಡಾಜ್ಯೋತಿಯೊಂದಿಗೆ ಕಾಲೇಜಿನ ರಾಜ್ಯ ಮಟ್ಟದ ಕ್ರೀಡಾಪಟುಗಳಾದ ಯಶ್ವಿನ್, ಪ್ರಥ್ವಿ, ತೃಪ್ತಿ, ನೀತಿ ರೈ, ಶ್ರೀವರ್ಧನ್, ಇಶಿಕಾ, ಮನ್ವಿತ್ ಕಣಜಾಲು, ಜ್ಯೋತ್ಸ್ನಾ, ಅದ್ವಿತ್, ನಂದನರವರೊಂದಿಗೆ ಕ್ರೀಡಾಂಗಣವನ್ನು ಪ್ರವೇಶಿಸಿ, ಕ್ರೀಡಾಂಗಣಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಕ್ರೀಡಾಜ್ಯೋತಿಯನ್ನು ಆದರ್ಶ್ ಶೆಟ್ಟಿಯವರು ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರಿಗೆ ಹಸ್ತಾಂತರಿಸಿ ನಂತರ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಕ್ರೀಡಾಜ್ಯೋತಿಯನ್ನು ಮೇಲಕ್ಕೆತ್ತಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಕ್ರೀಡಾಜ್ಯೋತಿಯನ್ನು ಕಾಲೇಜ್‌ನ ಸಿಲ್ವರ್ ಜ್ಯುಬಿಲಿ ಸಭಾಂಗಣದ ಮೇಲಿನ ಪೀಠದಲ್ಲಿ ಇರಿಸಿ ಉರಿಸಲಾಯಿತು.
ಆಕರ್ಷಕ ಪಥಸಂಚಲನ…
ಈ ಸಂದರ್ಭದಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರೋವರ‍್ಸ್ ರೇಂಜರ‍್ಸ್‌ನಿಂದ ಬ್ಯಾಂಡ್, ವಾದ್ಯ, ಕಾಲೇಜಿನ ಕ್ರೀಡಾಪಟುಗಳು, ಅಂಬಿಕಾ ಪದವಿ ಪೂರ್ವ ಕಾಲೇಜು, ನರೇಂದ್ರ ಪದವಿ ಪೂರ್ವ ಕಾಲೇಜು, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳು ಆಕರ್ಷಕ ಪಥಸಂಚಲನದಲ್ಲಿ ಶಿಸ್ತುಬದ್ಧವಾಗಿ ಪಾಲ್ಗೊಂಡರು. ರಾಜ್ಯಮಟ್ಟದ ಅಂಡರ್ 19 ವಯೋಮಿತಿಯೊಳಗಿನ ಮಹಿಳಾ ಕ್ರಿಕೆಟ್ ಪಟು ಅನಘರವರು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.