





ಪುತ್ತೂರು: ಪಡ್ನೂರು ಶ್ರೀ ಜನಾರ್ಧನ ಯುವಕ ಮಂಡಲದ ಸುವರ್ಣ ಮಹೋತ್ಸವ ‘ಪಡ್ನೂರು ಉತ್ಸವ’ದ ಎರಡನೇ ದಿನವಾದ ನ.5ರಂದು 58 ಕೆ.ಜಿ. ವಿಭಾಗದ ಮ್ಯಾಟ್ ಅಂಕಣ ಕಬಡ್ಡಿ ಪಂದ್ಯಾಟದವು ಪಡ್ನೂರು ಶಾಲಾ ವಠಾರದ ಶ್ರೀ ಜನಾರ್ಧನ ವೇದಿಕೆಯಲ್ಲಿ ನಡೆಯಿತು.



ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ಕ್ರೀಡಾಧಿಕಾರಿ ಮಾಧವ ಬಿ.ಕೆ. ಮಾತನಾಡಿ, ಯುವಜನ ಮೇಳಗಳ ಮೂಲಕ ಸಂಸ್ಕೃತಿ, ಸಂಸ್ಕಾರ ಉಳಿಸುವ ಕಾರ್ಯ ನಡೆಯುತ್ತಿತ್ತು. ಆದರೆ ಇದೀಗ ತಾಲೂಕು ಮಟ್ಟದ ಯುವಜನ ಮೇಳವನ್ನು ರದ್ದುಗೊಳಿಸಿದ ಪರಿಣಾಮ ಯುವಕರಿಗೆ ಅವಕಾಶ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಹೆಸರುವಾಸಿಯಾದ ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಲವು ಕಬಡ್ಡಿ ಪಂದ್ಯಾಟವನ್ನು ಆಯೋಜಿಸುವ ಮೂಲಕ ಮಣ್ಣಿನ ಕ್ರೀಡೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮವಾಗುತ್ತಿದೆ ಎಂದರು.





ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಬಡ್ಡಿ ಆಟಗಾರ ಕಿಶೋರ್ ಬೊಟ್ಯಾಡಿ ಮಾತನಾಡಿ, ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿಕೊಂಡಿರುವ ಪಡ್ನೂರು ಜನಾರ್ದನ ಯುವಕ ಮಂಡಲವು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ಕಾರ್ಯವನ್ನು ಈ ವೇದಿಕೆಯಲ್ಲಿ ಮಾಡಿದೆ. ಅಲ್ಲದೆ ಸದ್ವಿಚಾರಗಳನ್ನು ಅಳವಡಿಸಿಕೊಂಡು ಮಣ್ಣಿನ ಕ್ರೀಡೆ ಕಬಡ್ಡಿ ಪಂದ್ಯಾಟ ಏರ್ಪಡಿಸುವ ಮೂಲಕ ಯುವಕ ಮಂಡಲದವು ಮಾದರಿಯಾಗಿದೆ ಎಂದರು.
ಬನ್ನೂರು ಗ್ರಾಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್, ಸದಸ್ಯರಾದ ಅಧ್ಯಕ್ಷೆ ರಮಣಿ ಡಿ. ಗಾಣಿಗ, ಗಿರಿಧರ ಪಂಜಿಗುಡ್ಡೆ, ವಿಮಲ, ಶ್ರೀನಿವಾಸ ಪೆರ್ವೋಡಿ, ಗಣೇಶ್ ಪಳ್ಳ, ತಿಮ್ಮಪ್ಪ ಪೂಜಾರಿ, ಯುವಕ ಮಂಡಲ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಮೂವಪ್ಪು, ಹಿರಿಯ ಕಬಡ್ಡಿ ಆಟಗಾರರಾದ ಮಾಂಕು ಮುಂಡಾಜೆ, ಗಿರಿಯಪ್ಪ ರೆಂಜಾಳ ಶುಭ ಹಾರೈಸಿದರು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ದೇಂತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜಗದೀಶ್ ಆಟಿಕ್ಕು ವಂದಿಸಿದರು. ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಿಕ್ಕು ಕಾರ್ಯಕ್ರಮ ನಿರೂಪಿಸಿದರು.


 
            