ಮುಡಿಪುನಡ್ಕದಲ್ಲಿ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಶ್ರೀಕೃಷ್ಣ ಟ್ರೋಫಿ-2023, ಉದ್ಘಾಟನೆ

0

ಎಲ್ಲರನ್ನೂ ಒಗ್ಗೂಡಿಸಲು ಕಬಡ್ಡಿಯಂತಹ ಪಂದ್ಯಾಟ ಅವಶ್ಯ- ಅರುಣ್‌ ಕುಮಾರ್‌ ಪುತ್ತಿಲ

 ನಿಡ್ಪಳ್ಳಿ; ಶ್ರೀಕೃಷ್ಣ ಭಜನಾ ಮಂಡಳಿ ಮುಡಿಪುನಡ್ಕ, ಎಸ್.ಕೆ.ಫ್ರೆಂಡ್ಸ್, ಮುಡಿಪುನಡ್ಕ ಹಾಗೂ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಪುತ್ತೂರು ಇದರ ಸಹಯೋಗದೊಂದಿಗೆ ದಸರಾ ಹಾಗೂ ದೀಪಾವಳಿ ಪ್ರಯುಕ್ತ 60 ಕೆ.ಜಿ ವಿಭಾಗದ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಶ್ರೀಕೃಷ್ಣ ಟ್ರೋಫಿ_2023 ಇದರ ಉದ್ಘಾಟನಾ ಸಮಾರಂಭ ನ.5 ರಂದು ಮುಡಿಪುನಡ್ಕ ಶ್ರೀಕೃಷ್ಣ ಭಜನಾ ಮಂದಿರದ ವಠಾರದಲ್ಲಿ‌ ನಡೆಯಿತು.

  ಹಿಂದೂ ಮುಖಂಡ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಕ್ರೀಡಾಂಗಣ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪವಿತ್ರವಾದ ಈ ಮಣ್ಣಿನ ಗೌರವ ಕಾಪಾಡಲು ಎಲ್ಲರನ್ನೂ ಒಗ್ಗೂಡಿಸಲು ಇಂತಹ ಕಬಡ್ಡಿ ಪಂದ್ಯಾಟವನ್ನು ಅಯೋಜಿಸುವ ಅವಶ್ಯಕತೆ ಇದೆ. ಹಿಂದು ಸಮಾಜ ನಂಬಿಕೆ ಆಧಾರದ ಮೇಲೆ ಬೆಳೆದು ಬಂದಿದ್ದು ಸನಾತನ ಧರ್ಮ, ನಮ್ಮ ಆಚಾರ ವಿಚಾರ ಸಂಸ್ಕ್ರತಿಯನ್ನು ಉಳಿಸಿ ಬೆಳೆಸಲು ಯಾವ ಅಡೆತಡೆ ಬಂದರೂ ಅದನ್ನು ಮೆಟ್ಟಿ ನಿಂತು ನಮ್ಮ ಸಾಮಾಜಿಕ ಬದ್ದತೆಯನ್ನು ತೋರಿಸಲು ನಾವೆಲ್ಲಾ ಒಂದಾಗಿ ಸೇರಿ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದ ಅವರು ಈ ಕಬಡ್ಡಿ ಪಂದ್ಯಾಟ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

  ಶ್ರೀಕೃಷ್ಣ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ ಮಾತನಾಡಿ ಮುಡಿಪುನಡ್ಕದಲ್ಲಿ ಕಬಡ್ಡಿ ಪಂದ್ಯಾಟ ನಡೆಯುತ್ತಿರುವ ಇತಿಹಾಸದ ಬಗ್ಗೆ ತಿಳಿಸಿ ಪಂದ್ಯಾಟಕ್ಕೆ ಶುಭ ಹಾರೈಸಿದರು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಪಟ್ಟೆ ಪ್ರತಿಭಾ ಪ್ರೌಢಶಾಲಾ ಸಂಚಾಲಕ ಪಿ.ನಾರಾಯಣ ಭಟ್ ಬಿರ್ನೋಡಿ,ಅತಿಥಿಗಳಾದ ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ, ಜಯಪ್ರಕಾಶ್ ಆಚಾರ್ಯ ಕುಡ್ಚಿಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಆಚಾರ್ಯ ಬಬ್ಲಿ, ಭಜನಾ ಮಂಡಳಿ ಕೋಶಾಧಿಕಾರಿ ನಾರಾಯಣ ಪೂಜಾರಿ , ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ರೈ ಬಬ್ಲಿ, ನಿವೃತ್ತ ಸೈನಿಕ ಬಾಲಕೃಷ್ಣ ಪಾಟಾಳಿ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

  ಗಣೇಶ ಆಚಾರ್ಯ ಬಬ್ಲಿ ಪ್ರಾರ್ಥಿಸಿ ಸುರೇಶ ಗೌಡ ಬರೆಂಬೊಟ್ಟು ಸ್ವಾಗತಿಸಿದರು. ಶರತ್ ಕುಮಾರ್ ಪುಳಿತ್ತಡಿ ವಂದಿಸಿ ಧನಂಜಯ ಚೂರಿಪದವು ಕಾರ್ಯಕ್ರಮ ನಿರೂಪಿಸಿದರು.ಎಸ್.ಕೆ.ಫ್ರೆಂಡ್ಸ್ ಸದಸ್ಯರು, ಭಜನಾ ಮಂಡಳಿ ಸದಸ್ಯರು ಸಹಕರಿಸಿದರು.

  ಗ್ರಾ.ಪಂ.ಅಧ್ಯಕ್ಷರಿಗೆ ಮನವಿ ಪತ್ರ ಹಸ್ತಾಂತರ;
ಗ್ರಾಮದ ಅಭಿವೃದ್ಧಿಯ ಬಗ್ಗೆ ಕಾಳಜಿ ಇರುವ ಎಸ್.ಕೆ.ಫ್ರೆಂಡ್ಸ್ ನ ಸದಸ್ಯರು ಮುಡಿಪುನಡ್ಕದಲ್ಲಿ ಸುಸಜ್ಜಿತವಾದ ಸಾರ್ವಜನಿಕ ಶೌಚಾಲಯ ನಿರ್ಮಾಣ, ಕೆಟ್ಟು ಹೋದ ದಾರಿ ದೀಪ ದುರಸ್ತಿ ಮತ್ತು ಅವಶ್ಯಕತೆ ಇರುವ ಕಡೆ ಹೊಸ ಸೋಲಾರ್ ದಾರಿ ದೀಪ ಅಳವಡಿಕೆ ಮತ್ತು ಕೆಟ್ಟು ಹೋದ ಮುಡಿಪುನಡ್ಕದಲ್ಲಿ ಅಳವಡಿಸಿದ ಸಿ.ಸಿ ಕ್ಯಾಮೆರಾದ ದುರಸ್ತಿ ಸೇರಿದಂತೆ ವಿವಿಧ ಬೇಡಿಕೆಯನ್ನೊಳ ಗೊಂಡ ಮನವಿಯನ್ನು ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾರವರಿಗೆ ಈ ಸಂದರ್ಭದಲ್ಲಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಧ್ಯಕ್ಷರು ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here