ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ವಸ್ತ್ರ ವಿತರಣಾ ಕಾರ್ಯಕ್ರಮ ಕಳೆದ ವರ್ಷ ಕಿಲ್ಲೆ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಭಾರಿ ನ.13ರಂದು ಕೊಂಬೆಟ್ಟು ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದ್ದು, 50ಸಾವಿರ ಮಂದಿಗೆ ವಸ್ತ್ರವಿತರಣೆ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮಹಿಳೆಯರಿಗೆ ಸೀರೆ, ಪುರುಷರಿಗೆ ಮತ್ತು ಮಕ್ಕಳಿಗೆ ಬೆಡ್‌ಶೀಟ್ ವಿತರಣೆ ಮಾಡಲಾಗುವುದು. ಬೆಳಿಗ್ಗೆ ಗಂಟೆ 9.30ಕ್ಕೆ ವಸ್ತ್ರವಿತರಣೆ ಕಾರ್ಯಕ್ರಮ ಅರಂಭಗೊಳ್ಳಲಿದೆ. ದ.ಕ.ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗೂಂಡುರಾವ್, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಈ ಭಾಗದ ಪ್ರಮುಖರು, ಒಡಿಯೂರು ಶ್ರೀ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಕ್ರಿಶ್ಚಯನ್, ಮುಸ್ಲಿಂ ಸಮಾಜದ ಮುಖಂಡರು ಸಹಿತ ಹಲವಾರು ಮಂದಿ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಕಾಲೇಜಿನ ಮೈದಾನದಲ್ಲಿ ವಸ್ತ್ರವಿತರಣೆಗೆ ಪೂರಕ ಎಲ್ಲಾ ವ್ಯವಸ್ಥೆಗಳನ್ನು ಸಿದ್ದಪಡಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿ ಕಾರ್ಯಕ್ರಮ ನಡೆಯಲಿದೆ. ಆದರೆ ಹೊರಗಿನಿಂದ ಬಂದವರಿಗೂ ವಸ್ತ್ರವಿತರಣೆ ಮಾಡಲಿದ್ದೇವೆ. ಒಂದು ಮನೆಯಿಂದ ಎಷ್ಟು ಜನ ಬಂದರೂ ವಸ್ತ್ರವಿತರಣೆ ನೀಡಲಿದ್ದೇವೆ ಎಂದರು.
ಪಕ್ಷದ ವಿಚಾರವಿಲ್ಲದೆ ಬಡವರು ಭಾಗವಹಿಸಿ:
ಈ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ಹಮ್ಮಿಕೊಂಡಿದ್ದು,10 ವರ್ಷದ ಸಮಯದಲ್ಲಿ ಸುಮಾರು 22ಸಾವಿರ ಕುಟುಂಬಗಳಿಗೆ ಸಹಾಯ ಮಾಡಿದ್ದೆವು. ಅದರಲ್ಲಿ ಮನೆ ಕಟ್ಟಿಕೊಡುವುದು, ಮನೆ ದುರಸ್ಥಿ, ಮನೆಕಟ್ಟಲು ಸಾಮಾಗ್ರಿ ಕೊಟ್ಟಿರಬಹುದು. ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿರಬಹುದು ಹೀಗೆ ಅನೇಕ ಸೇವಾ ಕಾರ್ಯಕ್ರಮ ಮಾಡಲಾಗಿದೆ. ಅದರಲ್ಲೂ ಕಾರ್ಮಿಕರ ಕಾರ್ಡ್, ಪಾನ್‌ಕಾರ್ಡ್ ಸಹಿತ ಬೇರೆ ಬೇರೆ ಕಾರ್ಯಕ್ರಮ ಪ್ರತ್ಯೇಕ ಮಾಡಿಕೊಟ್ಟಿದ್ದೇವೆ. ಹೀಗೆ ನಮ್ಮ ಟ್ರಸ್ಟ್ ಮೂಲಕ ನೋಂದಾವಣೆ ಆದವರಿಗೆ ಕಾರ್ಡ್ ಮೂಲಕ ಆಮಂತ್ರಣ ತಲುಪಿಸಿದ್ದೇವೆ. ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಪಕ್ಷದ ವಿಚಾರವಿಲ್ಲ. ಬಡವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಸ್ತ್ರವಿತರಣೆ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ವಿನಂತಿಸಿದ ಅವರು ಈ ಕಾರ್ಯಕ್ರಮದಲ್ಲಿ ಬಡವರ ಜೊತೆ ವರ್ಷದಲ್ಲಿ ಒಂದು ಸಲ ಸಹಭೋಜನ ಮಾಡುವ ಅವಕಾಶವು ನನಗೆ ದೊರೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ನೇಮಕಾತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಆದ್ಯತೆಕೊಡುವಂತೆ ಮನವಿ:
ಕಾರ್ಯಕ್ರಮದಲ್ಲಿ ಟ್ರಸ್ಟ್‌ನಿಂದ ನಡೆಯುವ ಯೋಜನೆಗಳ ಕುರಿತು ಮಾಹಿತಿ ಜನರು ಪಡೆದುಕೊಳ್ಳಬೇಕು ಎಂದು ಹೇಳಿದ ಅಶೋಕ್ ಕುಮಾರ್ ರೈ ಅವರು ಮುಂದೆ ಪ್ರತಿ ಆರು ತಿಂಗಳಿಗೊಮ್ಮೆ ಉಚಿತ ವೈದ್ಯಕೀಯ ಶಿಬಿರ ಮಾಡುವ ಚಿಂತನೆ ಮಾಡಿದ್ದೇವೆ. ಉದ್ಯೋಗ ಸೃಷ್ಟಿ ಮಾಡುವ ಯೋಜನೆಯು ಇದೆ. ಅದಕ್ಕಾಗಿ ಪ್ರತಿ ವರ್ಷ ಉದ್ಯೋಗ ಮೇಳ ಮಾಡಲಿದ್ದೇವೆ. ಈಗಾಗಲೇ ಕೆ.ಎಸ್.ಅರ್.ಟಿ.ಸಿ ಯಲ್ಲಿ ಚಾಲಕರ ಹುದ್ದೆಗೆ ಸುಮಾರು 60 ಮಂದಿಗೆ ತರಬೇತಿ ನೀಡಿ ಕಳುಹಿಸಿದ್ದೇವೆ. ಮುಂದಿನ ದಿನ ಪೊಲೀಸ್ ಹುದ್ದೆಗೂ ಯುವಜನತೆಯನ್ನು ಸೇರಿಸುವ ಕೆಲಸ ಮಾಡಲಿದ್ದೇವೆ. ಬಸ್ ನಿರ್ವಾಹಕರಿಗೂ ತರಬೇತಿ ನೀಡಲಿದ್ದೇವೆ. ಯಾಕೆಂದರೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ಈ ಹುದ್ದೆಗೆ ಸೇರ್ಪಡೆಗೊಂಡು ಬಳಿಕ ನಮ್ಮಿಂದ ಇಂಪ್ಲುವೆನ್ಸ್ ಪಡೆದು ಅವರ ಸ್ವಸ್ಥಾನಕ್ಕೆ ಹೋಗುತ್ತಿದ್ದಾರೆ. ಇದು ಆಗಬಾರದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯವರೇ ಈ ಎಲ್ಲಾ ಹುದ್ದೆಗಳಿಗೆ ಸೇರ್ಪಡೆಯಾಗಬೇಕು. ಅದೇ ರೀತಿ ಯಾವುದೆ ಇಲಾಖೆಯಲ್ಲಿ ಹೊಸ ಹುದ್ದೆಗೆ ಸೇರ್ಪಡೆಯಾಗುವ ತನಕ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡದಂತೆ ನಾನು ನಿರ್ದೇಶನ ಕೊಟ್ಟಿದ್ದೇನೆ. ಹಾಗಾಗಿ ನೇಮಕಾತಿ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಆದ್ಯತೆ ಕೊಡುವಂತೆ ಸರಕಾರಕ್ಕೆ ಮನವಿ ಮಾಡುತ್ತಿದ್ದೇನೆ. ಅದೇ ರೀತಿ ಇಲ್ಲಿನ ಯುವಕರಿಗೆ ಉದ್ಯೋಗದ ಮಾಹಿತಿ ಮತ್ತು ತರಬೇತಿ ನೀಡುವ ಕೆಲಸ ಟ್ರಸ್ಟ್ ಮೂಲಕ ಮಾಡುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರೈ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥೆ ಸುಮಾ ಅಶೋಕ್ ಕುಮಾರ್ ರೈ, ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಮಾಧ್ಯಮ ಮುಖ್ಯಸ್ಥ ಕೃಷ್ಣಪ್ರಸಾದ್ ಭಟ್ ಉಪಸ್ಥಿತರಿದ್ದರು.
ಗೂಡುದೀಪ ಸ್ಪರ್ಧೆ
ಕಾರ್ಯಕ್ರಮದಲ್ಲಿ ಗೂಡುದೀಪ ಸ್ಪರ್ಧೆಯನ್ನು ಏರ್ಪಡಿಲಾಗಿದೆ. ಗೂಡು ದೀಪವನ್ನು ತಾವೆ ಸ್ವತಃ ಮನೆಯಲ್ಲಿ ತಯಾರಿಸಿ ತರಬೇಕು. ಅದನ್ನು ತೀರ್ಪುಗಾರರು ಪರಿಶೀಲಿಸಿ ಪ್ರಥಮ, ದ್ವಿತೀಯ, ತೃತೀಯ ಆಯ್ಕೆ ಮಾಡಲಿದ್ದಾರೆ. ಪ್ರಥಮ ಬಹುಮಾನವಾಗಿ ರೂ. 10ಸಾವಿರ, ದ್ವಿತೀಯ ಬಹುಮಾನವಾಗಿ ರೂ. 7,500, ತೃತೀಯ ಬಹುಮಾನವಾಗಿ ರೂ. 5ಸಾವಿರವನ್ನು ನೀಡಲಾಗುವುದು ಎಂದು ರೈ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥೆ ಸುಮಾ ಅಶೋಕ್ ಕುಮಾರ್ ರೈ ಹೇಳಿದರು.