ಜೀವವಿಮಾ ನಿಗಮ ಭ್ರಷ್ಟಾಚಾರ ರಹಿತವಾದ ಒಂದು ಮಾದರಿ ಸಂಸ್ಥೆ : ಶಿವರಾಮಯ್ಯ
ಪುತ್ತೂರು: ಕಡಬ ಹಾಗೂ ಪುತ್ತೂರು ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ 2022-23ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಪುತ್ತೂರಿನ ಭಾರತೀಯ ಜೀವವಿಮಾ ನಿಗಮದ ವತಿಯಿಂದ ನಗರದ ರೋಟರಿ ಮನೀಷಾ ಸಭಾಂಗಣದಲ್ಲಿ ಶುಕ್ರವಾರ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ರಾಂತ ಶಿಕ್ಷಣ ಜಂಟಿ ನಿರ್ದೇಶಕ ವೈ ಶಿವರಾಮಯ್ಯ ಮಾತನಾಡಿ ಜೀವವಿಮಾ ನಿಗಮವು ಸಮಾಜಕ್ಕೊಂದು ಆದರ್ಶವಾಗಿದೆ. ಭ್ರಷ್ಟಾಚಾರ ಮುಕ್ತ ಹಾಗೂ ತ್ವರಿತಗತಿಯ ಸೇವೆಗೆ ಹೆಸರಾಗಿದೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ, ಲೇಖಕ ಟಿ.ನಾರಾಯಣ ಭಟ್ ರಾಮಕುಂಜ ಮಾತನಾಡಿ ಜೀವವಿಮಾ ನಿಗಮವು ಬದುಕಿಗೆ ಭದ್ರತೆ ಒದಗಿಸುವ ಕಾರ್ಯ ಮಾಡುತ್ತಿದೆ. ಇಲ್ಲಿ ನಾವು ತೊಡಗಿಸುವ ಹಣ ನಮಗಷ್ಟೇ ಅಲ್ಲದೆ ದೇಶಕ್ಕೂ ಆರ್ಥಿಕ ಭದ್ರತೆ ನೀಡುತ್ತದೆ. ರಾಷ್ಟ್ರದ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಪುತ್ತೂರಿನ ಜೀವವಿಮಾ ನಿಗಮದ ಮುಖ್ಯ ಪ್ರಬಂಧಕ ಬಾಲಕೃಷ್ಣ ಡಿ ಮಾತನಾಡಿ ಗುರುವೆಂದರೆ ಬ್ರಹ್ಮ ವಿಷ್ಣು ಮಹೇಶ್ವರರ ಸ್ವರೂಪ. ದೇಶದಲ್ಲಿ ಶಿಕ್ಷಕರ ಸಮೂಹ ಅತ್ಯಂತ ದೊಡ್ಡದು. ಇಂತಹ ಶಿಕ್ಷಕರೊಂದಿಗೆ ಜೀವವಿಮಾ ಘಟಕವು ಅತ್ಯಾಪ್ತ ಸಂಬಂಧವನ್ನು ಹೊಂದಿದೆ. ಸಮಾಜ ಸೇವೆಗೆ ಸಂಸ್ಥೆ ಸದಾ ಸನ್ನದ್ಧವಾಗಿದೆ ಎಂದು ಹೇಳಿದರು. ಪುತ್ತೂರಿನ ಜೀವವಿಮಾ ನಿಗಮದ ಆಡಳಿತ ಪ್ರಬಂಧಕ ಜಯರಾಮ ನೆಲ್ಲಿತ್ತಾಯ ಮಾತನಾಡಿ ಎಲ್‌ಐಸಿ ಪಾಲಿಸಿ ಮಾಡುವುದರಿಂದ ಆರ್ಥಿಕ ಭದ್ರತೆಯೊಂದಿಗೆ ಕರವಿನಾಯಿತಿಯಂತಹ ಪ್ರಯೋಜನಗಳು ಲಭ್ಯವಾಗುತ್ತವೆ ಎಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯಕ್ರಮದ ಸಹಪ್ರಾಯೋಜಕ ಬಾಲಕೃಷ್ಣ ಕೆ.ಆರ್. ಮಾತನಾಡಿ ಭಾರತೀಯ ಜೀವವಿಮಾ ನಿಗಮವು ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಅದರಲ್ಲಿ ವಿಶ್ರಾಂತ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವ ಕೆಲಸವೂ ಒಂದು. ಪೂಜನೀಯರಾದ ಗುರುವೃಂದವನ್ನು ನಿಗಮ ಸದಾ ಗೌರವಿಸುತ್ತದೆ ಎಂದು ನುಡಿದರು.
ವಿಶ್ರಾಂತ ಶಿಕ್ಷಕರುಗಳಾದ ನಾರಾಯಣ ನಾಯ್ಕ, ಪುಷ್ಪಾವತಿ ಕೆ.ಬಿ, ಸುಮತಿ ಪಿ, ಮಾಯಿಲಪ್ಪ ಗೌಡ, ಪ್ರಶಾಂತಕುಮಾರಿ, ನಿವೇದಿತಾ ಕೆ, ಸಾವಿತ್ರಿ ಕೆ, ವೇದಾವತಿ ಎ, ಸುರೇಶ್ ಕುಮಾರ್ ಪಿ.ಎಂ, ಪುಷ್ಪಾವತಿ ಬಿ, ಮೀನಾಕ್ಷಿ ಕೆ.ಎಸ್, ಸಂಧ್ಯಾ ಎಂ, ಜಯಶ್ರೀ, ಜಯರಾಮ ಗೌಡ ಹಾಗೂ ಶಾರದಾ ಕೆ. ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರೌಢಶಾಲಾ ಶಿಕ್ಷಕಿ ಜಯಶ್ರೀ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ ಸನ್ಮಾನಿತರ ಪರವಾಗಿ ಅನಿಸಿಕೆ ಹಂಚಿಕೊಂಡರು.
ಜೀವವಿಮಾ ನಿಗಮದ ಪ್ರತಿನಿಧಿಗಳಾದ ನಾರಾಯಣ ಗೌಡ ಸ್ವಾಗತಿಸಿ, ಆನಂದ ಗೌಡ ವಂದಿಸಿದರು. ಜೀವವಿಮಾ ಪ್ರತಿನಿಧಿ ಹಾಗೂ ಕಾರ್ಯಕ್ರಮದ ಪ್ರಾಯೋಜಕಿ ಯಶೋದಾ ಕೆ.ಎಸ್ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿಯರಾದ ಕಮಲಾ ಕೆ.ಎಸ್ ಮತ್ತು ದೇವಕಿ ಎಂ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿನಿಧಿಗಳಾದ ವಿದ್ಯಾ, ರಾಘವೇಂದ್ರ, ಪ್ರಶಾಂಶ್ ಭಂಡಾರಿ, ನವೀನ ಕುಮಾರಿ ಹಾಗೂ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ.ಆರ್ ಸಹಕರಿಸಿದರು.