





ಕಡಬ: ಕಡಬ ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿ, ಅಪಘಾತ ಹಾಗೂ ಆರೋಗ್ಯ ವಿಮಾ ಶಿಬಿರಕ್ಕೆ ನ.6ರಂದು ಚಾಲನೆ ನೀಡಲಾಯಿತು.


ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ಅವರು ಶಿಬಿರಕ್ಕೆ ಚಾಲನೆ ನೀಡಿ, ಕಡಬ ತಾಲೂಕು ಪತ್ರಕರ್ತರ ಸಂಘ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸಮಾಜಕ್ಕೆ ಹತ್ತಿರವಾಗಿದೆ, ಪತ್ರಕರ್ತರು ಅಂಚೆ ಇಲಾಖೆಯ ಸಹಯೋಗದೊಂದಿಗೆ ಆಧಾರ್ ಮೇಳ ಮಾಡುತ್ತಿರುವುದು ಉತ್ತಮ ಕಾರ್ಯ, ಅಂಚೆ ಇಲಾಖೆ ಮುಂಚಿನಿಂದಲೂ ಒಳ್ಳೆಯ ಕೆಲಸ ಮಾಡುತ್ತಾ ಬಂದಿದೆ, ಇದೀಗ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಆಧಾರ್ ನೋಂದಣಿ, ತಿದ್ದುಪಡಿ , ವಿಮಾ ಯೋಜನೆಗಳನ್ನು ಜನರಿಗೆ ನೀಡುತ್ತಾ ಜನಸ್ನೇಹಿ ಇಲಾಖೆಯಾಗಿದೆ ಎಂದರು.





ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಕಡಬ ತಾಲೂಕು ಪತ್ರಕರ್ತರ ಸಂಘ ಕೇವಲ ಸಂಘದೊಳಗಿನ ಸದಸ್ಯರಿಗೆ ಸೀಮಿತವಾಗದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಕೊಂಡು ಉತ್ತಮ ಕಾರ್ಯ ಮಾಡುತ್ತಾ ಜಿಲ್ಲೆಗೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಅಂಚೆ ಇಲಾಖೆಯ ಮಾರುಕಟ್ಟೆ ಪ್ರತಿನಿಧಿ ಗುರುಪ್ರಸಾದ್ ಅಂಚೆ ಇಲಾಖೆಯ ವಿಮಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಗಿರೀಶ್ ಎ.ಪಿ., ನಿರ್ದೇಶಕ ಸದಾನಂದ ಪಿ., ಕಡಬ ಪಟ್ಟಣ ಪಂಚಾಯಿತಿ ಸದಸ್ಯೆ ಅಕ್ಷತಾ ಬಾಲಕೃಷ್ಣ, ಅಂಚೆ ಇಲಾಖೆಯ ಸುಬ್ರಹ್ಮಣ್ಯ ಅಂಚೆ ಪಾಲಕ ನಾಗಾಚಾರಿ, ಮೇಲ್ವಿಚಾರಕ ರಮೇಶ್ , ಕಡಬ ಸಮುದಾಯ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿಗಳಾದ ಸೋನಿಯಾ, ಪೂರ್ಣಿಮಾ, ಕಡಬ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ವಿಜಯ ಕುಮರ್ ಪೆರ್ಲ ಉಪಸ್ಥಿತರಿದ್ದರು.
ಕಡಬ ತಾಲುಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್ ಕೆ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯ್ಲಾ ವಂದಿಸಿದರು. ಶಿಬಿರದ ಸಮಯದಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ಮಧುಮೇಹ ಪರೀಕ್ಷೆ ಹಾಗೂ ರಕ್ತದೊತ್ತಡ ಪರೀಕ್ಷೆ ಯನ್ನು ಸಾರ್ವಜನಿಕರಿಗೆ ಉಚಿತವಾಗಿ ನಡೆಸಲಾಯಿತು.









