ಶಾಂತಿನಗರ ಶಾಲೆಯಲ್ಲಿ ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಶಾಲಾ ರಂಗಮಂದಿರ ಉದ್ಘಾಟನೆ, ಹಳೆಯ ವಸ್ತುಗಳ ಸಂಗ್ರಹಾಲಯ ‘ ಕದಿಕೆ ‘ ಅನಾವರಣ

0

ಶಾಂತಿನಗರ ಸರಕಾರಿ ಶಾಲೆ ಮಾದರಿ ಶಾಲೆಯಾಗಿದೆ: ಭಾಗೀರಥಿ ಮುರುಳ್ಯ

ನೆಲ್ಯಾಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಬಜತ್ತೂರು ಹಾಗೂ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಶಾಂತಿನಗರ – ಗೋಳಿತ್ತಟ್ಟು ಇವುಗಳ ಸಹಯೋಗದಲ್ಲಿ ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ-2023 ನ.7 ರಂದು ಗೋಳಿತೊಟ್ಟು ಶಾಂತಿನಗರ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಇದೇ ವೇಳೆ ಶಾಲಾ ನೂತನ ರಂಗಮಂದಿರ ಉದ್ಘಾಟನೆ ಹಾಗೂ ಹಳೆಯ ವಸ್ತುಗಳ ಸಂಗ್ರಹಾಲಯ ಕದಿಕೆ ಇದರ ಅನಾವರಣ ಮಾಡಲಾಯಿತು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಾಂತಿನಗರ ಸರಕಾರಿ ಶಾಲೆಯು ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಗೆ ಬಂದಾಗ ಸರಕಾರಿ ಶಾಲೆ ಅಂತ ಅನ್ನಿಸುವುದಿಲ್ಲ. ಇದೊಂದು ಮಾದರಿ ಶಾಲೆಯಾಗಿದೆ ಎಂದು ಹೇಳಿದರು. ಶಿಕ್ಷಣದ ಜೊತೆಗೆ ಮಕ್ಕಳಿಗೆ ಪರಿಸರದ ಜ್ಞಾನವೂ ಸಿಗಬೇಕು. ಈ ನಿಟ್ಟಿನಲ್ಲಿ ಗೆದ್ದಲು ಹಿಡಿಯುವ ಹಳೆಯ ವಸ್ತುಗಳನ್ನು ಸಂಗ್ರಹಿಸಿ ಎಲ್ಲರಿಗೂ ನೋಡಲು ಅವಕಾಶ ಮಾಡಿಕೊಟ್ಟಿರುವುದು ಉತ್ತಮ ಕಾರ್ಯ. ಮಕ್ಕಳಲ್ಲಿನ ಕಲೆ, ಪ್ರತಿಭೆ ಬೆಳಕಿಗೆ ಬರಲು ಪ್ರತಿಭಾ ಕಾರಂಜಿ ಆಯೋಜಿಸಲಾಗುತ್ತಿದೆ. ಇದರಲ್ಲಿ ಎಲ್ಲಾ ಮಕ್ಕಳು ಭಾಗವಹಿಸಬೇಕೆಂಬ ನಿಟ್ಟಿನಲ್ಲಿ ಕ್ಲಸ್ಟರ್ ಮಟ್ಟದಲ್ಲಿ ನಡೆಸಲಾಗುತ್ತಿದೆ. ಇಲ್ಲಿ ಶಿಕ್ಷಕರ ಪ್ರತಿಭೆಯನ್ನು ಗುರುತಿಸಲು ಸಾಧ್ಯವಿದೆ ಎಂದು ಹೇಳಿದ ಶಾಸಕರು ಮುಂದಿನ ವರ್ಷ ಕಡಬ ತಾಲೂಕಿನ ಪ್ರತಿಭಾವಂತ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿಕಲಚೇತನರ ಶಿಕ್ಷಕಿಯರನ್ನು ಸನ್ಮಾನಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಗೋಳಿತೊಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಆಲಂತಾಯ ಮಾತನಾಡಿ, ತಂದೆ, ತಾಯಿ ಹಾಗೂ ಗುರುಗಳು ಮಕ್ಕಳಿಗೆ ಪ್ರೇರಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮಕ್ಕಳು ಮುನ್ನಡೆಯಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಕಡಬ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್ ಕುಮಾರ್ ನೆಲ್ಯಾಡಿ ಮಾತನಾಡಿ, ಶಾಂತಿನಗರ ಶಾಲೆಯು ಸರಕಾರಿ ಶಾಲೆಗಳ ಪ್ರಯೋಗಾಲಯದ ಮೆಟ್ಟಿಲು ಆಗಿದೆ. ಇಲ್ಲಿ ಯಕ್ಷಗಾನ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸರಕಾರಿ ಶಾಲೆ ಹೇಗೆ ಇರಬೇಕೆಂಬುದಕ್ಕೆ ಮಾದರಿಯಾಗಿದೆ ಎಂದರು.

ಇನ್ನೋರ್ವ ಅತಿಥಿ ಶಿಕ್ಷಣ ಸಮನ್ವಯಾಧಿಕಾರಿ ನವೀನ್ ವೇಗಸ್ ಅವರು ಮಾತನಾಡಿ, ಮಗು ಉತ್ತಮ ಪರಿಸರದಲ್ಲಿ ಬೆಳೆದಾಗ ಅವರಿಂದ ಉತ್ತಮ ವಾದುದ್ದನ್ನೇ ನಿರೀಕ್ಷಿಸಬಹುದಾಗಿದೆ. ಸ್ಪರ್ಧೆ ಯಲ್ಲಿ ಭಾಗವಹಿಸುವ ಮಕ್ಕಳಲ್ಲಿ ಗೆಲುವೇ ಉದ್ದೇಶವಾಗಿರಬೇಕು. ಸೋತಲ್ಲಿ ಇನ್ನೊಮ್ಮೆ ಪ್ರಯತ್ನ ಪಡಬೇಕು ಎಂದರು.

ಗೋಳಿತೊಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕರವರು ಮಾತನಾಡಿ, ಶಾಂತಿನಗರ ಶಾಲೆಯ ರಜತ ಮಹೋತ್ಸವವು ಹಬ್ಬದ ರೀತಿಯಲ್ಲಿ ನಡೆದಿತ್ತು. ಇದೀಗ ಪ್ರತಿಭಾ ಕಾರಂಜಿಯನ್ನು ಹಬ್ಬದ ಮಾದರಿಯಲ್ಲಿಯೇ ಮಾಡಲಾಗಿದೆ. ಖಾಸಗಿ ಶಾಲೆಗಳು ಶೇ.100 ಅಂಕ ಗಳಿಸುವ ಉದ್ದೇಶವಿಟ್ಟು ಕೊಂಡಿರುತ್ತವೆ. ಆದರೆ ಸರಕಾರಿ ಶಾಲೆಗಳು ಸಾಂಸ್ಕೃತಿಕ ಹಾಗೂ ನೀತಿ ಪಾಠಗಳನ್ನು ಕಲಿಸಿಕೊಡುತ್ತವೆ. ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿಯ ಅಗತ್ಯವಿದೆ ಎಂದರು.

ಬಜತ್ತೂರು ಕ್ಲಸ್ಟರ್ ಸಿಆರ್ ಪಿ ಮಂಜುನಾಥ್ ಕೆ.ವಿ., ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪಠ್ಯಕ್ಕೆ ಪೂರಕವಾದ ಚಟುವಟಿಕೆಯನ್ನು ಆಧಾರವಾಗಿಟ್ಟುಕೊಂಡು ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರತರುವ ಕೆಲಸ ಆಗಬೇಕು. ಇದಕ್ಕಾಗಿ ಪ್ರತಿಭಾ ಕಾರಂಜಿ ಮಾಡಲಾಗುತ್ತಿದೆ. ಮಕ್ಕಳ ಹೋಲಿಕೆ ಮಾಡಬಾರದು ಎಂದು ಹೇಳಿದರು.

ಶಾಸಕರಿಗೆ ಮನವಿ:
ಶಾಲೆಯ ಕಟ್ಟಡ ದುರಸ್ತಿ ಹಾಗೂ ಹೆಚ್ಚುವರಿ ಕೊಠಡಿ ನಿರ್ಮಾಣ, ಪೆಲ೯ ದೇವಸ್ಥಾನದಿಂದ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಾಂಕ್ರೀಟೀಕರಣ, ತಡೆಗೋಡೆ ನಿರ್ಮಾಣಕ್ಕೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಶಾಸಕರು, 5 ವರ್ಷದ ಅವಧಿ ಮುಗಿಯುವುದರೊಳಗೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಶಾಸಕರಿಗೆ ಸನ್ಮಾನ:
ಶಾಲೆಯ ವತಿಯಿಂದ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು.

ಗೋಳಿತೊಟ್ಟು ಗ್ರಾಮ ಪಂಚಾಯಿತಿ ಸದಸ್ಯರಾದ ಹೇಮಲತಾ, ಬಾಲಕೃಷ್ಣ ಅಲೆಕ್ಕಿ, ಎಸ್ ಡಿ ಎಂ ಸಿ ಅಧ್ಯಕ್ಷ ಪುರುಷೋತ್ತಮ ಗುರುಂಪು, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಭಟ್ ಕಾಂಚನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಪ್ರದೀಪ್ ಬಾಕಿಲ ಸ್ವಾಗತಿಸಿ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಶಾಲಪ್ಪ ನಾಯ್ಕ ವಂದಿಸಿದರು. ಶಿಕ್ಷಕ ಮಂಜುನಾಥ ಮಣಕವಾಡ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.

ಗಮನ ಸೆಳೆದ ಕದಿಕೆ:
ಹಳೆಯ ವಸ್ತುಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದ್ದು, ಬೇರೆ ಬೇರೆ ಶಾಲೆಯಿಂದ ಆಗಮಿಸಿದ ಶಿಕ್ಷಕರ, ವಿದ್ಯಾರ್ಥಿಗಳ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here