ಪುತ್ತೂರು: ಇಲ್ಲಿನ ಪರ್ಲಡ್ಕ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ನ.5ರಂದು ದೈವಸ್ಥಾನದ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ದೈವಸ್ಥಾನದ ಅಧ್ಯಕ್ಷ ತಾರಾನಾಥ ರೈ ಮಾತನಾಡಿ, ಪ್ರಾರಂಭದಲ್ಲಿ 46 ಸೆಂಟ್ಸ್ ಜಾಗ ಹೊಂದಿತ್ತು. ವಾರ್ಷಿಕ ನೇಮೋತ್ಸವದ ಸಂದರ್ಭದಲ್ಲಿ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ 38 ಸೆಂಟ್ಸ್ ಜಾಗ ಖರೀದಿಸಲಾಗಿದೆ. ಈ ಪೈಕಿ 30 ಸೆಂಟ್ಸ್ ಜಾಗದ ಮೊತ್ತ ಪಾವತಿಸಲಾಗಿದೆ. 8 ಸೆಂಟ್ಸ್ ಜಾಗದ ಮೊತ್ತ ಪಾವತಿಸಲು ಬಾಕಿಯಿದೆ. ಪೇಟೆಯ ಮಧ್ಯೆ ಭಾಗದಲ್ಲಿರುವ ದೈವಸ್ಥಾನವು ಈಗ ಒಟ್ಟು 84 ಸೆಂಟ್ಸ್ ಜಾಗ ಹೊಂದಿದೆ. ಊರ, ಪರವೂರ ದಾನಿಗಳು ಸಹಕಾರದೊಂದಿಗೆ ಜಾಗ ಖರೀದಿಸಲಾಗಿದ್ದು ಇದಕ್ಕೆಲ್ಲಾ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ದೈವಸ್ಥಾನದ ಮುಂದಿನ ಅಭಿವೃದ್ಧಿ ಕಾರ್ಯಗಳನ್ನು ನೀಲ ನಕಾಶೆ ತಯಾರಿಸಿ ಮುಂದಿನ ಯೋಜನೆ ಹಾಕಿಕೊಳ್ಳಲಾಗುವುದು. ದೈವಸ್ಥಾನದ ಈ ವರ್ಷದ ವಾರ್ಷಿಕ ನೇಮೋತ್ಸವವು ಮುಂದಿನ ಜ.6ರಂದು ಸಂಪ್ರದಾಯದಂತೆ ನಡೆಸುವುದಾಗಿ ತೀರ್ಮಾನಿಸಲಾಯಿತು.
ಕೋಶಾಧಿಕಾರಿ ಸರೋಜಿನಿ ಅಬಿಕಾರ್ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಉಮಾಶಂಕರ್ ನಾಕ್ ಪಾಂಗಳಾಯಿ, ಕಾರ್ಯದರ್ಶಿ ಪುರುಷೋತ್ತಮ ನಾಕ್ ಪಾಂಗಳಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರು, ಮಾಜಿ ಪದಾಧಿಕಾರಿಗಳು, ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸೂರಪ್ಪ ಗೌಡ ಸ್ವಾಗತಿಸಿ, ವಂದಿಸಿದರು.