ಪುತ್ತೂರು: ಕುಂಬ್ರದಲ್ಲಿ ಚಿರತೆ ಬಂದಿದೆ ಜಾಗೃತೆ ವಹಿಸಿ, ಯಾರಾದರೂ ಇದ್ದಲ್ಲಿ ಅವರಿಗೆ ತಿಳಿಸಿ ಎಂಬ ಬರಹದೊಂದಿಗೆ ರಾತ್ರಿ ಹೊತ್ತಲ್ಲಿ ಚಿರತೆ ಅಡ್ಡಾಡುವ ಫೋಟೋವೊಂದನ್ನು ಹಾಕಿ ವಾಟ್ಸಪ್ ಗ್ರೂಪ್‌ಗಳಿಗೆ ಹರಿಬಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಬಹುತೇಕ ಜನರ ವಾಟ್ಸಪ್ ಸ್ಟೇಟಸ್‌ಗಳಲ್ಲಿಯೂ ಈ ಫೋಟೋವನ್ನು ಹಾಕಿಕೊಂಡಿದ್ದು ಆದರೆ ಎಲ್ಲಿಗೆ ಚಿರತೆ ಬಂದಿದೆ ಯಾರು ನೋಡಿದ್ದಾರೆ ಎಂಬ ಮಾಹಿತಿ ಯಾರಿಗೂ ಇಲ್ಲದಾಗಿದೆ. ಜನರನ್ನು ಭಯಪಡಿಸುವ ಸಲುವಾಗಿ ಕೆಲವು ಕಿಡಿಗೇಡಿಗಳು ಈ ತರದ ಫೋಟೋ ಎಡಿಟ್ ಮಾಡಿ ವಾಟ್ಸಪ್ ಗಳಲ್ಲಿ ಹರಿಬಿಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದಿನಗಳ ಹಿಂದೆಯಷ್ಟೇ ಪುತ್ತೂರಿನ ಬನ್ನೂರು ಪರಿಸರದಲ್ಲೂ ಚಿರತೆ ಇದೆ ಎಂಬ ಸುದ್ದಿಯೊಂದು ವಾಟ್ಸಪ್ ಗಳಲ್ಲಿ ಹರಿದಾಡುತ್ತಿತ್ತು ಅದರ ಮರುದಿನವೇ ಕುಂಬ್ರಕ್ಕೆ ಚಿರತೆ ಬಂದಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಯವರು ಬನ್ನೂರಿನ ಹಲವು ಮಂದಿಯಲ್ಲಿ ವಿಚಾರಿಸಿದ್ದು ಚಿರತೆಯನ್ನು ನೋಡಿರುವ ಬಗ್ಗೆ ಯಾರು ಕೂಡ ತಿಳಿಸಿಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಫೋಟೋ, ಮಂಗಳೂರಿನ ವಿಡಿಯೋ
ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಚಿರತೆ ಫೋಟೋ ಮತ್ತು ಪೊಲೀಸ್ ಅನೌನ್ಸ್ ಮಾಡುವ ವಿಡಿಯೋದ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ರಾತ್ರಿ ಹೊತ್ತಲ್ಲಿ ಚಿರತೆ ಅಡ್ಡಾಡುವ ಫೋಟೋ ಬೆಂಗಳೂರಿನದ್ದಾಗಿದೆ. ಅದೇ ರೀತಿ ಪೊಲೀಸ್‌ನವರು ಚಿರತೆ ಬಂದಿರುವ ಶಂಕೆ ಇದೆ ಜಾಗೃತವಾಗಿರಿ ಎಂದು ಅನೌನ್ಸ್ ಮಾಡುವ ವಿಡಿಯೋ ಮಂಗಳೂರು ವಲಯದ್ದು ಎನ್ನಲಾಗಿದೆ. ಅದೇ ವಿಡಿಯೋ ಮತ್ತು ಫೋಟೋವನ್ನು ಇಟ್ಟುಕೊಂಡು ಪುತ್ತೂರಿನ ಬನ್ನೂರಿಗೆ ಅಲ್ಲಿಂದ ಕುಂಬ್ರಕ್ಕೆ ಚಿರತೆ ಬಂದಿದೆ ಎಂಬ ಪೇಕ್ ಸುದ್ದಿಯನ್ನು ವಾಟ್ಸಪ್ ನಲ್ಲಿ ಹರಿಯಬಿಡಲಾಗಿದೆ ಎಂದು ತಿಳಿದು ಬಂದಿದೆ.
ಜನರು ಭಯಪಡುವ ಅಗತ್ಯವಿಲ್ಲ..
ಸದ್ಯದ ಮಟ್ಟಿಗೆ ಪುತ್ತೂರಿನ ಬನ್ನೂರಿಗಾಗಲಿ ಅಲ್ಲಿಂದ ಕುಂಬ್ರಕ್ಕಾಗಲಿ ಯಾವುದೇ ಜೀವಂತ ಚಿರತೆ ಬಂದಿಲ್ಲ ಚಿರತೆ ಬಂದಿದೆ ಎಂದು ವಾಟ್ಸಪ್ ನಲ್ಲಿ ಮಾತ್ರ ಹರಿದಾಡುತ್ತಿದ್ದು ಇದೊಂದು ವಾಟ್ಸಪ್ ಚಿರತೆಯಾಗಿದೆ. ಆದ್ದರಿಂದ ಯಾರೂ ಕೂಡ ಭಯಪಡುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.