ಪರಿಶುದ್ಧ, ಋತುಗಳಿಗೆ ಸರಿಯಾದ ಆಹಾರ ಸೇವನೆಯಿಂದ ಆರೋಗ್ಯಪೂರ್ಣ ಬದುಕು ಸಾಧ್ಯ – ಒಡಿಯೂರು ಶ್ರೀ
ವಿಟ್ಲ: ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಸರಿಯಾಗಿದ್ದರೆ ಬದುಕಿನಲ್ಲಿ ಆರೋಗ್ಯ ಸರಿಯಾಗಿರುತ್ತದೆ. ಪುರಾಣಗಳಲ್ಲಿ ತಿಳಿಸಿದಂತೆ ಧನ್ವಂತರೀ ದೇವರ ಆರಾಧನೆಯಿಂದ ನಮಗೆ ಆರೋಗ್ಯ ಲಾಭವಾಗುತ್ತದೆ. ನಾವು ಸೇವಿಸುವ ಆಹಾರವನ್ನೆ ಔಷಧಿಯ ರೀತಿ ಸೇವಿಸಿದಾಗ ಆಹಾರವೇ ಔಷಧಿಯಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಸಂಸ್ಥಾನದಲ್ಲಿ ನ.10ರಂದು ಶ್ರೀ ಧನ್ವಂತರೀ ಜಯಂತಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಜರಗಿದ ಶ್ರೀ ಧನ್ವಂತರೀ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನ ನೀಡಿದರು.
ನಮ್ಮ ಶರೀರವು ಆರೋಗ್ಯಪೂರ್ಣವಾಗಿರುತ್ತದೆ. ಇದಕ್ಕೆಲ್ಲ ಪೂರಕವಾಗಿ ಪ್ರಕೃತಿಯು ಉಳಿಯಬೇಕು. ಪ್ರಕೃತಿಯ ಉಳಿವಿನಿಂದ ನಮ್ಮ ಉಳಿವು ಸಾಧ್ಯ. ಇಂತಹ ಹವನಗಳಿಂದ ವಾತಾವರಣವು ಪರಿಶುದ್ಧವಾಗುತ್ತದೆ, ಆ ಮೂಲಕ ಪ್ರದೇಶಕ್ಕೆ ಅನುಕೂಲಕರವಾಗುತ್ತದೆ. ಪರಿಶುದ್ಧ ಮತ್ತು ಋತುಗಳಿಗೆ ಸರಿಯಾದ ಆಹಾರ ಸೇವನೆಯಿಂದ ಆರೋಗ್ಯಪೂರ್ಣ ಬದುಕು ನಮ್ಮದಾಗಬಹುದು ಎಂದರು.
ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಧನ್ವಂತರೀ ಹವನ ಸಂಪನ್ನಗೊಂಡಿತು. ಈ ಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ ಹಾಗೂ ಗುರುಬಂಧುಗಳು ಉಪಸ್ಥಿತರಿದ್ದರು.