ಪುತ್ತೂರು: ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ, ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆಯ ಮೂಲಕ, ದ.ಕ,ಜಿಲ್ಲೆಯಲ್ಲಿ ಹೆಸರನ್ನು ಗಳಿಸಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ಈಗಾಗಲೇ ದ.ಕ, ಜಿಲ್ಲೆಯಲ್ಲಿ 13 ಶಾಖೆಗಳನ್ನು ಹೊಂದಿದ್ದು, ಸಂಸ್ಥೆಯ 14ನೇ ಬಿ.ಸಿ.ರೋಡ್ ಶಾಖೆಯ ಉದ್ಘಾಟನೆಯು ನ.20ರಂದು ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ಗುಡಿಯ ಹತ್ತಿರ, ಪಾರ್ಕ್ ಸ್ಕ್ವೇರ್‌ನ ಪ್ರಥಮ ಮಹಡಿಯಲ್ಲಿ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರು ತಿಳಿಸಿದ್ದಾರೆ.
14ನೇ ಬಿ.ಸಿ. ರೋಡ್ ಶಾಖೆಯ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಕ್‌ರವರು ನೇರವೇರಿಸಲಿದ್ದು, ಅಧ್ಯಕ್ಷತೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈರವರು ವಹಿಸಲಿದ್ದಾರೆ. ರೋಟರಿ 3181ರ ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್‌ರವರು ಭದ್ರತಾ ಕೊಠಡಿಯನ್ನು ಉದ್ಘಾಟನೆಗೈಯಲಿದ್ದಾರೆ. ಮೊಡಂಕಾಪು ಇನ್ಫೆಂಟ್ ಜೀಸಸ್‌ನ ಧರ್ಮಗುರು ರೆ. ಫಾ. ವಲೇರಿಯನ್ ಎಸ್.ಡಿಸೋಜಾರವರು ಕಂಪ್ಯೂಟರ್ ಉದ್ಘಾಟನೆ ಮಾಡಲಿದ್ದಾರೆ. ಪೊಳಲಿ ಸೇವಾ ಸಹಕಾರ ಸಂಘದ ನಿರ್ದೇಶಕ ಅಬೂಬಕ್ಕರ್ ಅಮ್ಮುಂಜೆರವರು ಪ್ರಥಮ ಠೇವಣಿ ಪತ್ರವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಸವಣೂರು ಸೀತಾರಾಮ ರೈಯವರು ತಿಳಿಸಿದ್ದಾರೆ.
ಆದರ್ಶ ಸಹಕಾರ ಸಂಸ್ಥೆಯು 21 ವರ್ಷಗಳನ್ನು ಪೂರೈಸಿದ್ದು, ಈಗಾಗಲೇ ದ.ಕ.ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ 13 ಶಾಖೆಗಳು ಕಾರ‍್ಯನಿರ್ವಹಿಸುತ್ತಿದೆ. 605 ಕೋಟಿ 34 ಲಕ್ಷ ವಾರ್ಷಿಕ ವ್ಯವಹಾರವನ್ನು ಹೊಂದಿರುವ ಸಂಸ್ಥೆಯು 1 ಕೋಟಿ 51 ಲಕ್ಷಕ್ಕೂ ಮೇಲಿನ ಲಾಭಾಂಶವನ್ನು ಗಳಿಸಿದೆ. 120 ಕೋಟಿ ರೂ, ಠೇವಣಾತಿ ಹಾಗೂ 100 ಕೋಟಿಗಳಷ್ಟು ವಿವಿಧ ರೀತಿಯ ಸಾಲವನ್ನು ವಿತರಿಸಲಾಗಿದ್ದು, ದ.ಕ ಹಾಗೂ ಉಡುಪಿ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘವೆಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಸೀತಾರಾಮ ರೈಯವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ನಿರ್ದೇಶಕರುಗಳಾದ ಬಿ.ಮಹಾಬಲ ರೈ ಬೊಳಂತೂರು, ಅಶ್ವಿನ್ ಎಲ್ ಶೆಟ್ಟಿ ಸವಣೂರು, ಮಹಾ ಪ್ರಬಂಧಕ ವಸಂತ್ ಜಾಲಾಡಿ, ಕೇಂದ್ರ ಕಚೇರಿಯ ವ್ಯವಸ್ಥಾಪಕ ಸುನಾದ್‌ರಾಜ್ ಶೆಟ್ಟಿ, ಬಿ.ಸಿ,ರೋಡ್ ಶಾಖಾ ವ್ಯವಸ್ಥಾಪಕ ವಿನೋದ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಗತಿಯ ಹಾದಿಯಲ್ಲಿ ಆದರ್ಶ ಸಹಕಾರ ಸಂಸ್ಥೆ
ಆದರ್ಶ ಸಹಕಾರ ಸಂಸ್ಥೆಯು ತನ್ನ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಯಲ್ಲಿ ಕಲಿಯುವ ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾನಿಧಿಯ ಮೂಲಕ ಧನಸಹಾಯವನ್ನು ನೀಡುತ್ತಿದ್ದು, ಈ ತನಕ 1067 ಮಕ್ಕಳಿಗೆ 21 ಲಕ್ಷ 73 ಸಾವಿರ ರೂ ವಿತರಣೆ ಮಾಡಿದೆ. ಸಂಘದ ಕೇಂದ್ರ ಕಚೇರಿಗೆ ಸವಣೂರಿನಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಶಿಲಾನ್ಯಾಸವನ್ನು ನೇರವೇರಿಸಲಾಗಿದ್ದು, ಸಂಘವು ೨೦೨೩-೨೪ ನೇ ಸಾಲಿನಲ್ಲಿ ೬೫೦ ಕೋಟಿ ರೂ, ವ್ಯವಹಾರವನ್ನು ನಡೆಸಿ, 1.95 ಕೋಟಿ ರೂ ಲಾಭಗಳಿಸುವ ಗುರಿಯನ್ನು ಹೊಂದಲಾಗಿದೆ.
ಕೆ.ಸೀತಾರಾಮ ರೈ ಸವಣೂರು
ಅಧ್ಯಕ್ಷರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘ