ಕಡಬ: ಕುಂತೂರುಪದವು ಸಂತಜಾರ್ಜ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಎಂಆರ್‌ಪಿಎಲ್‌ನ ಸಿಎಸ್‌ಆರ್ ಫಂಡ್‌ನ 15 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣಗೊಂಡ ಬಾಲಕ ಹಾಗೂ ಬಾಲಕಿಯರ ಶೌಚಾಲಯದ ಉದ್ಘಾಟನೆ ಆ.22ರಂದು ನಡೆಯಿತು.

ಎಂಆರ್‌ಪಿಎಲ್‌ನ ಸಿಎಸ್‌ಆರ್ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರದೀಪ್‌ಕುಮಾರ್ ಅವರು ನಾಮಫಲಕ ಅನಾವರಣಗೊಳಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಪ್ರದೀಪ್‌ಕುಮಾರ್ ಅವರು, ಶಿಕ್ಷಣ, ಆರೋಗ್ಯ,ಬಹುಜನ, ಸಂಸ್ಕೃತಿ ಹಾಗೂ ಪ್ರಕೃತಿಗೆ ಎಂಆರ್‌ಪಿಎಲ್‌ನ ಸಿಎಸ್‌ಆರ್ ಫಂಡ್‌ನಿಂದ ಅನುದಾನ ನೀಡಲಾಗುತ್ತಿದೆ. ಸಂಸ್ಥೆಗೆ ಬರುವ ಲಾಭಾಂಶದಲ್ಲಿ ಒಂದಂಶವನ್ನು ಆದ್ಯತೆ ಇರುವಲ್ಲಿಗೆ ಆದ್ಯತೆ ಮೇಲೆ ಹಂಚಲಾಗುತ್ತಿದೆ. ಇದರಲ್ಲೂ ಜಿಲ್ಲೆಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದ್ದು ಹೊರ ಜಿಲ್ಲೆ, ಹೊರ ರಾಜ್ಯಗಳಿಗೂ ಅನುದಾನ ನೀಡಲಾಗುತ್ತಿದೆ.

ವಿದ್ಯಾರ್ಥಿಗಳು ತಮ್ಮ ಶುಚಿತ್ವದೊಂದಿಗೆ ಶೌಚಾಲಯದ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ ಅವರು, ಕಳೆದ ವರ್ಷ ಈ ಶಾಲೆಗೆ ಸಿಎಸ್‌ಆರ್ ಫಂಡ್‌ನ 40 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣಗೊಂಡಿರುವ ಮೂರು ತರಗತಿ ಕೊಠಡಿಗಳು ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬ್ಬಾಸ್ ಕೋಚಕಟ್ಟೆ ಸಂದರ್ಭೋಚಿತವಾಗಿ ಮಾತನಾಡಿದರು. ಶಾಲಾ ಸಂಚಾಲಕ ಕೆ.ಎಸ್.ತೋಮಸ್, ಕಾರ್ಯದರ್ಶಿ ಮೋನ್ಸಿ ಫ್ರಾನ್ಸಿಸ್, ಖಜಾಂಜಿ ಶಾಜಿ ಕೆ.ಜಾನ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುರಾಜ್ ರೈ ಕೇವಳ, ಇಂಜಿನಿಯರ್ ತೌಸೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಹರಿಶ್ಚಂದ್ರ ಕೆ.ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಭುವನೇಶ್ವರಿ ವಂದಿಸಿದರು. ಶಿಕ್ಷಕಿ ತ್ರೇಸಿಯಮ್ಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಸನ್ಮಾನ:
ಅನುದಾನ ಒದಗಿಸಿಕೊಟ್ಟ ಎಂಆರ್‌ಪಿಎಲ್‌ನ ಸಿಎಸ್‌ಆರ್ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರದೀಪ್‌ಕುಮಾರ್ ಹಾಗೂ ಇಂಜಿನಿಯರ್ ತೌಸಿಫ್‌ರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
