ಪುತ್ತೂರು: ದೇಶದಾದ್ಯಂತ ರಸ್ತೆ, ಸಾರ್ವಜನಿಕ ಸ್ಥಳಗಳೆಲ್ಲಾ ಸ್ವಚ್ಛತೆಗೊಳ್ಳುತ್ತಿರುವ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದ್ದರೂ, ಅದ್ಯಾಕೋ ಪುತ್ತೂರು ನಗರಸಭೆ ವ್ಯಾಪ್ತಿಯ ಬನ್ನೂರು ಪರಿಸರದಲ್ಲಿ ನೈರ್ಮಲ್ಯ ಭಾಗ್ಯ ಅನ್ವಯಿಸದಂತಾಗಿದೆ. ಬನ್ನೂರಿನಿಂದ ಪಡೀಲ್ ರಸ್ತೆ ಸೇರುವ ಮಧ್ಯಭಾಗದಲ್ಲಿ ಕಟ್ಟಡವೊಂದರಿಂದ ಮಲೀನ ನೀರು ರಸ್ತೆಗೆ ಹರಿಯುತ್ತಿದ್ದು, ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಈ ಭಾಗದಲ್ಲಿ ಒಂದು ಕಡೆ ಘನ ವಾಹನಗಳ ನಿಲುಗಡೆಯಾದರೆ ಮತ್ತೊಂದು ಕಡೆ ರಸ್ತೆಯಲ್ಲೇ ಮಲೀನ ನೀರು ಹರಿಯುತ್ತಿದ್ದು, ಶಾಲಾ ಮಕ್ಕಳಿಗೆ ನಡೆದಾಡಲು ಕಷ್ಟವಾಗುತ್ತಿದ್ದು, ರೋಗರುಜಿನ ಹರಡುವ ಭೀತಿಯಲ್ಲೇ ಮಕ್ಕಳು ಶಾಲೆಗೆ ಹೋಗಬೇಕಾಗಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಡ್ರೈನೇಜ್ ನೀರು ರಸ್ತೆಗೆ ಬಂದು ಹರಿಯುತ್ತಿದ್ದು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ನೀರಿನ ಮೇಲಿಂದಲೇ ವೇಗವಾಗಿ ಚಲಿಸುವ ಕಾರುಗಳ ಟಯರುಗಳಿಂದ ಸಿಡಿಯುವ ದುರ್ನಾತದ ನೀರಿನಿಂದ ನಡೆದುಕೊಂಡು ಹೋಗುವ ಶಾಲಾ ಮಕ್ಕಳು, ಮಹಿಳೆಯರು, ಪಾದಚಾರಿಗಳ ಪಾಡು ಹೇಳತೀರದು. ಮಲೀನ ನೀರು ರಸ್ತೆಯಲ್ಲೆಲ್ಲ ಹರಿದು ಹೋಗುತ್ತಿರುವುದರಿಂದ ಸುತ್ತಮುತ್ತಲು ದುರ್ನಾತ ಬೀರುತ್ತಿದ್ದು ವ್ಯಾಪಾರಕ್ಕೂ ತೊಂದರೆ ಆಗಿದೆ. ಅನೇಕ ಅಧಿಕಾರಿ ಜನಪ್ರತಿನಿಧಿಗಳು ಈ ರಸ್ತೆಯಲ್ಲೇ ನಿತ್ಯ ಓಡಾಡುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸೋಜಿಗವೇ ಸರಿ.