ಪುಸ್ತಕಗಳನ್ನು ಓದಿ ಜ್ಞಾನ ವಿಸ್ತರಿಸಿ-ವಂ|ಡಾ|ಆಂಟನಿ ಪ್ರಕಾಶ್
ಪುತ್ತೂರು: ಪುಸ್ತಕಗಳು ಮತ್ತು ಓದು ಜೀವನದ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕೆಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆಂಟನಿ ಪ್ರಕಾಶ್ ಮೊಂತೇರ ಅವರು ಹೇಳಿದರು.
ನ.14 ರಿಂದ ನ.20 ರವರೆಗೆ ಭಾರತದಲ್ಲಿ ಆಚರಿಸಲ್ಪಡುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಕಾಲೇಜು ಗ್ರಂಥಾಲಯದಲ್ಲಿ ಆಯೋಜಿಸಿದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಂಥಾಲಯದಲ್ಲಿ ನಮ್ಮ ಜೀವನದ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವ ಪುಸ್ತಕಗಳ ಆಸ್ತಿಯೇ ಇದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕೊರೋನಾ ನಂತರ ವಿದ್ಯಾರ್ಥಿಗಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಕ್ಷೀಣಿಸುತ್ತಿದ್ದು ಅವರಲ್ಲಿ ಓದುವ, ಬರೆಯುವ ಕ್ರಿಯಾಶೀಲತೆಯನ್ನು ಬೆಳೆಸುವ ಸದುದ್ದೇಶದಿಂದ ಕಾಲೇಜಿನಲ್ಲಿ ನವೆಂಬರ್ ತಿಂಗಳನ್ನು ಗ್ರಂಥಾಲಯ ತಿಂಗಳಾಗಿ ಘೋಷಿಸಿದ್ದೇವೆ. ಈ ಪ್ರಯುಕ್ತ ಕಾಲೇಜಿನ ರಕ್ಷಕ ಶಿಕ್ಷಕ ಮಹಾಸಭೆಯ ದಿವಸ ಒಂದು ದಿವಸದ ಹೊಸ ’ಪುಸ್ತಕಗಳ ಪ್ರದರ್ಶನವನ್ನು’ ಕಾಲೇಜು ಗ್ರಂಥಾಲಯವು ಜ್ಞಾನಗಂಗಾ ಪುಸ್ತಕ ಮಳಿಗೆ ಪುತ್ತೂರು ಇದರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿ ಹೇಳಿದರು.
ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲ ಅಬ್ದುಲ್ ರಹ್ಮಾನ್ ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಗ್ರಂಥಪಾಲಕ ಮನೋಹರ್ ಎಸ್.ಜಿ. ವಂದಿಸಿದರು. ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರು ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೇಮಲತಾ ಕೆ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ(ಐಕ್ಯೂಎಸಿ) ನಿರ್ದೇಶಕಿ ಡಾ. ಮಾಲಿನಿ ಕೆ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಾಜೇಶ್ವರಿ ಎಂ, ವಿದ್ಯಾರ್ಥಿ ಸಂಘದ ಸದಸ್ಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.