ಮಂಗಳೂರು: ಇಂಡಿಯಾ ಕೂಟದ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯುವ ಸಂಚು ನಡೆಸುತ್ತಿದ್ದಾರೆ. ಆದರೆ ಯಾವ ದುಷ್ಟ ಶಕ್ತಿಗೂ ಮೋದಿ ಮತ್ತೆ ಅಧಿಕಾರಕ್ಕೆ ಬರುವುವನ್ನು ತಡೆಯಲು ಸಾಧ್ಯವಿಲ್ಲ. ಪ್ರಸಕ್ತ ಅಧಿಕಾರದ ಅಮಲಿನಲ್ಲಿ ಇರುವ ಸಿಎಂ, ಡಿಸಿಎಂ ಹಾಗೂ ಕಾಂಗ್ರೆಸ್‌ಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ಲಾ 28 ಸೀಟುಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಮೂಲಕ ಬಿಜೆಪಿಯು ಮೋದಿ ಅವರ ಕೈಬಲಪಡಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ ಅವರು ನಗರದ ಸಿ.ವಿ.ನಾಯಕ್ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ರಾಹುಕಾಲದಲ್ಲಿ ಯಾವುದೇ ಒಳ್ಳೆಯ ಕೆಲಸ ಮಾಡುವುದಿಲ್ಲ, ಹಾಗೆಯೇ ರಾಹುಲ್‌ಗಾಂಧಿ ನೇತೃತ್ವ ವಹಿಸಿದಂದಿನಿಂದ ಕಾಂಗ್ರೆಸ್‌ಗೆ ರಾಹುಕಾಲ ಶುರುವಾಗಿದೆ ಎಂದು, ಪ್ರಧಾನಿ ಮೋದಿ ವಿಶ್ವಕಪ್ ವೀಕ್ಷಿಸಿ ಭಾರತ ತಂಡ ಸೋತಿತು ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು. ಕಾಂಗ್ರೆಸ್ ನಾಯಕನ ಹೆಸರು ರಾಹುಲ್. ರಾಹುಲ್ ಗಾಂಧಿಗೂ ರಾಹು ಕಾಲಕ್ಕೂ ಏನೂ ವ್ಯತ್ಯಾಸ ಇಲ್ಲ.ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದ ಬಳಿಕ ಕಾಂಗ್ರೆಸ್‌ಗೆ ರಾಹು ಕಾಲ ಶುರುವಾಗಿದೆ. ಸ್ವಾತಂತ್ರ್ಯ ಬಂದ ನಂತರದ ಕಾಂಗ್ರೆಸ್ ಆಡಳಿತಕ್ಕೆ ಇತಿಶ್ರೀ ಹಾಡಿದ್ದೇ ರಾಹುಲ್ ಗಾಂಧಿ ಎಂದು ವಿಜಯೇಂದ್ರ ಹೇಳಿದರು.
ರೈತರ ಹಣ ಕಿತ್ತ ಕಾಂಗ್ರೆಸ್:
ಯಡಿಯೂರಪ್ಪ ಸಿಎಂ ಆಗಿದ್ದಾಗ ಕೇಂದ್ರದ ಪಿಎಂ ಕಿಸಾನ್ ಸನ್ಮಾನ್ 6 ಸಾವಿರ ರೂ.ಗೆ ರಾಜ್ಯದ ಮೊತ್ತ 4 ಸಾವಿರ ರೂ. ಸೇರಿಸಿ ನೀಡಲಾಗುತ್ತಿತ್ತು. ರಾಜ್ಯದ ಪಾಲಿನ ಈ ಮೊತ್ತವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಈಗ ಸ್ಥಗಿತಗೊಳಿಸಿದೆ ಎಂದು ಹೇಳಿದ ಬಿ.ವೈ.ವಿಜಯೇಂದ್ರ, ಬಿಜೆಪಿ ಎಂದೂ ಅಲ್ಪಸಂಖ್ಯಾತರ ವಿರೋಧಿ ಅಲ್ಲ, ಆದರೆ ದೇಶದ್ರೋಹಿಗಳನ್ನು ಮಾತ್ರ ಬಿಜೆಪಿ ಕ್ಷಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸುಳ್ಳು ಪ್ರಚಾರದಿಂದ ಬಿಜೆಪಿ ಸೋತಿದೆ. ಈಗ ಜನತೆಗೆ ಕಾಂಗ್ರೆಸ್‌ನ ಆರು ತಿಂಗಳ ಆಡಳಿತ ಏನು ಎಂಬುದು ಅರ್ಥವಾಗಿದೆ. ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ವಿಜಯೇಂದ್ರ ಹೇಳಿದರು.
ರಾಜ್ಯದಲ್ಲಿ 80ಪರ್ಸೆಂಟ್‌ನ ಸರಕಾರ-ನಳಿನ್ ಕುಮಾರ್:
ನಿಕಟಪೂರ್ವ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, 80 ಪರ್ಸಂಟೇಜ್‌ನ ಸರ್ಕಾರವಾಗಿದೆ. ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿ-ಲವಾಗಿದೆ ಎಂದರು. ಟಿಪ್ಪು ಖಡ್ಗದ ಮೆರವಣಿಗೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ತೋರಿಸದ ಸರಕಾರ ಬಿಜೆಪಿಗರ ವಿರುದ್ಧ ಸೇಡು ತೀರಿಸಿಕೊಳ್ಳುಲು ಹೊರಟಿದೆ. ಆದರೆ, ಬಿಜೆಪಿಯ ಯಾವುದೇ ಕಾರ್ಯಕರ್ತರನ್ನು ಮುಟ್ಟಲು ಬಿಡುವುದಿಲ್ಲ ಎಂದು ಹೇಳಿದರು.
ಬಿಜೆಪಿ ಅಶ್ವಮೇಧ ಕುದುರೆ ಕಟ್ಟಿಹಾಕಲು ಸವಾಲ್:
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ವಿಜಯೇಂದ್ರ ಜತೆ ಸಾಥ್ ನೀಡಲಾಗುವುದು. ನರೇಂದ್ರ ಮೋದಿ ಅವರು ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಅಶ್ವಮೇಧ ಕುದುರೆ ಬಿಟ್ಟಿದ್ದಾರೆ, ಇದನ್ನು ತಾಕತ್ತಿದ್ದರೆ ಕಟ್ಟಿ ಹಾಕುವಂತೆ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್‌ಗೆ ಸವಾಲೆಸೆದರು.
ಶಾಸಕ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್,ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಮೇಯರ್ ಸುಧೀರ್ ಶೆಟ್ಟಿ, ಉಪ ಮೇಯರ್ ಸುನಿತಾ, ಮುಖಂಡ ತಮ್ಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಪ್ರಭಾರಿ ರಾಜೇಶ್ ಕಾವೇರಿ, ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಮತ್ತಿತರರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಸ್ವಾಗತಿಸಿ,ಕಾರ್ಯದರ್ಶಿ ಸತೀಶ್ ಕುಂಪಲ ವಂದಿಸಿದರು. ರಾಮ್‌ದಾಸ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರಿನಿಂದ ಪ್ರಮುಖರು ಭಾಗಿ:
ಪುತ್ತೂರು, ಕಡಬದ ಬಿಜೆಪಿ ಪ್ರಮುಖರೂ ಸಮಾವೇಶದಲ್ಲಿ ಭಾಗವಹಿಸಿದ್ದರು. ಬಿಜೆಪಿಯ ಹಿರಿಯರಾದ ಮಂಡಲದ ಮಾಜಿ ಅಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ಆರ್.ಸಿ.ನಾರಾಯಣ್, ಜಿಲ್ಲಾ ಸಮಿತಿ ಸದಸ್ಯರಾದ ಸುರೇಶ್ ಆಳ್ವ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಕಿಶೋರ್ ಬೊಟ್ಯಾಡಿ, ಪ್ರಮುಖರಾದ ದಯಾನಂದ ಉಜುರುಮಾರು, ಹರೀಶ್ ಬಿಜತ್ರೆ, ಯತೀಂದ್ರ ಕೊಚ್ಚಿ, ಸಂತೋಷ್ ರೈ ಕೈಕಾರ, ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷ ನವೀನ್ ಪಡ್ನೂರು, ವಿಟ್ಲಮುಡ್ನೂರು ಪುನೀತ್ ಮಾಡತ್ತಾರು ಸಹಿತ ಹಲವಾರು ಮಂದಿ ಸಮಾವೇಶದಲ್ಲಿ ಭಾಗವಹಿಸಿದ್ದರು.
ವಾಹನ ಮೆರವಣಿಗೆ:
ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಮಂಗಳೂರುಗೆ ಆಗಮಿಸಿದ ಬಿ.ವೈ.ವಿಜಯೇಂದ್ರ ಅವರನ್ನು ವಿಮಾನ ನಿಲ್ದಾಣದಿಂದ ವಾಹನ ಮೆರವಣಿಗೆಯಲ್ಲಿ ನಗರದ ಸರ್ಕ್ಯೂಟ್ ಹೌಸ್‌ವರೆಗೆ ಕರೆತರಲಾಯಿತು. ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಮುಖ್ಯ ರಸ್ತೆ ಮೂಲಕ ಬಂಟ್ಸ್ ಹಾಸ್ಟೆಲ್ ಬಿಜೆಪಿ ಚುನಾವಣಾ ಕಚೇರಿಗೆ ಕರೆತರಲಾಯಿತು. ಸಮಾವೇಶ ಆವರಣದಲ್ಲಿ ವಿಜಯೇಂದ್ರ ಅಭಿಮಾನಿಗಳು ಸಮಾರು 250 ಕಿಲೋ ತೂಕದ ಸೇಬು ಹಣ್ಣಿನ ಹಾರವನ್ನು ಕ್ರೇನ್ ಮೂಲಕ ವಿಜಯೇಂದ್ರಗೆ ಅರ್ಪಿಸಿದರು.
ನಳಿನ್ ಕುಮಾರ್, ಯೋಗೀಶ್ ಭಟ್, ಬೂತ್ ಅಧ್ಯಕ್ಷರ ಮನೆ ಭೇಟಿ:
ಸಮಾವೇಶ ಬಳಿಕ ವಿಜಯೇಂದ್ರ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಮನೆಗೆ ತೆರಳಿ ಭೋಜನ ಸ್ವೀಕರಿಸಿದರು.ಅಲ್ಲಿಂದ ಮಾಜಿ ಶಾಸಕ ಯೋಗೀಶ್ ಭಟ್ ಅವರನ್ನು ಭೇಟಿ ಮಾಡಿ ಕುಶಲೋಪರಿ ನಡೆಸಿದರು. ಬೂತ್ ಸಮಿತಿ ಅಧ್ಯಕ್ಷ ಯಶವಂತ ಕುದ್ರೋಳಿ ಅವರ ಮನೆಗೂ ಭೇಟಿ ನೀಡಿ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದರು. ರಾತ್ರಿ ಅಡ್ಯಾರಿನಲ್ಲಿ ಖಾಸಗಿಕಾರ್ಯಕ್ರಮದಲ್ಲಿ ಭಾಗವಹಿಸಿದರು.
‘ಬ್ಯಾಟಿಂಗ್ ಮಾಡಲು ನಾವು ಸಿದ್ಧ ಕ್ಷೇತ್ರ ರಕ್ಷಣೆಗೆ ನೀವು ಸಿದ್ಧರಾಗಿ’-ಪುತ್ತಿಲ ಪರಿವಾರದ ಸಂದೇಶ ವೈರಲ್:
ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ನಮ್ಮ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸುವ ಕೆಲಸವನ್ನು ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದೇ ತಡ ಇತ್ತ ಪುತ್ತಿಲ ಪರಿವಾರದಿಂದ, ‘ಬ್ಯಾಟಿಂಗ್ ಮಾಡಲು ನಾವು ಸಿದ್ಧ..ಕ್ಷೇತ್ರ ರಕ್ಷಣೆಗೆ ನೀವು ಸಿದ್ಧರಾಗಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನೆಯಾಗಲಾರಂಭಿಸಿದೆ. ವಾಟ್ಸಪ್ ಗ್ರೂಪ್‌ವೊಂದರಲ್ಲಿ ‘ಕರಾವಳಿಯ ಬಿ.ಜೆ.ಪಿ ಲೋಕಸಭಾ ಫಲಿತಾಂಶವನ್ನು ಎಲೆಕ್ಷನ್‌ನ ಮೊದಲೇ ನಿರ್ಧರಿಸಿದ ನೂತನ ರಾಜ್ಯಾಧ್ಯಕ್ಷರಿಗೆ ಅಭಿನಂದನೆಗಳು.. ಬ್ಯಾಟಿಂಗ್ ಮಾಡಲು ನಾವು ಸಿದ್ಧ-ಕ್ಷೇತ್ರ ರಕ್ಷಣೆಗೆ ನೀವು ಸಿದ್ದರಾಗಿ. ನಮ್ಮ ಆಯ್ಕೆ ತುಳುನಾಡಿಗೆ ಪುತ್ತಿಲ’ ಎಂದು ಪುತ್ತಿಲ ಪರಿವಾರದ ಸಂದೇಶ ವೈರಲ್ ಆಗುತ್ತಿದೆ.
ನಳಿನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕಿದೆ
ಮುಂದಿನ ಲೋಕಸಭಾ ಚುನಾವಣೆಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಗಂಭೀರವಾಗಿ ತೆಗೆದುಕೊಂಡು ನಮ್ಮ ಪಕ್ಷದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸುವ ಕೆಲಸವನ್ನು ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದರು. ನಮ್ಮ ಪಕ್ಷವನ್ನು, ಭಾರತೀಯ ಜನತಾ ಪಾರ್ಟಿಯ ಧ್ವಜವನ್ನು ಎತ್ತರಕ್ಕೆ ಹಾರಿಸಿದ ಕೀರ್ತಿ ನಮ್ಮ ದಕ್ಷಿಣ ಕನ್ನಡದ ಕಾರ್ಯಕರ್ತರಿಗೆ ಸಲ್ಲುತ್ತದೆ. ಅಂಥ ಕಾರ್ಯಕರ್ತರಲ್ಲಿ ನಾನು ಮನವಿ ಮಾಡುತ್ತಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡು ನಮ್ಮ ಪಕ್ಷದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಜೀ ಅವರನ್ನು ಗೆಲ್ಲಿಸುವ ಕೆಲಸವನ್ನು ನಾವು ನೀವು ಸೇರಿ ಮಾಡಬೇಕಾಗಿದೆ ಎಂದು ಹೇಳಿದರು. ಈ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ದ.ಕ.ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಅವರೇ ಸ್ಪಽಸಲಿರುವ ಕುರಿತು ಬಿ.ವೈ.ವಿಜಯೇಂದ್ರ ಸುಳಿವು ನೀಡಿದ್ದಾರೆ. ಬೂತ್ ಮಟ್ಟದಿಂದ ಪಕ್ಷವನ್ನು ಕಟ್ಟೋಣ.ಮುಂಬರುವ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಅತ್ಯಧಿಕ ಸಂಖ್ಯೆಯ ಬಹುಮತ ಸಿಗಬೇಕು ಎಂದು ಬಿ.ವೈ.ವಿಜಯೇಂದ್ರ ಕರೆ ನೀಡಿದರು.