ಕಂಬಳ ಕೂಟದ ಸ್ಟಾರ್‌ಗಳಿವರು..!!

0

ಕಾಡಬೆಟ್ಟು ರಾಜ:

80ರ ದಶಕದಲ್ಲಿ ಕಂಬಳ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ಕೋಣ ಎಂದರೆ ಅದು ಕಾಡಬೆಟ್ಟುವಿನ ರಾಜ. ತಲೆಯನ್ನು ಒಂಚೂರು ಅಲುಗಾಡಿಸದೆ ಕಿರೀಟ ಹೊತ್ತಂತೆ ಓಡುವ ಮೂಲಕ ತನ್ನ ಓಟದ ವಿಭಿನ್ನ ಶೈಲಿಗಾಗಿ ಪ್ರಸಿದ್ಧಿ ಪಡೆದಿತ್ತು. 1980-84ರ ಸಮಯದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಹಲವಾರು ಪ್ರಶಸ್ತಿ ಗೆದ್ದುಕೊಂಡಿತ್ತು ಕಾಡಬೆಟ್ಟು ರಾಜ ಕೋಣ.

ಪಲ್ಯೊಟ್ಟು ನಾಗರಾಜ:
1985ರಲ್ಲಿ ಹುಟ್ಟಿ 2009ರ ವರೆಗೆ ಓಡುತ್ತಲೇ ಬದುಕಿದ ಕಂಬಳ ಓಟದ ರಾಜ ನಾಗರಾಜ ಚಿರಸ್ಥಾಯಿಯಾಗಿದ್ದಾನೆ. ತನ್ನನ್ನು ಪೊರೆದ ಒಡೆಯನಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ತಂದು ಕೊಟ್ಟಿದ್ದ. 1988ರಲ್ಲಿ ಪಲ್ಯೊಟ್ಟು ಮನೆಗೆ ಸೇರಿ 24 ವರ್ಷ ಕಾಲ ಬದುಕಿದ ನಾಗರಾಜ ಕೋಣ ತನ್ನ ನಾಲ್ಕನೇ ವರ್ಷದಿಂದ 20 ವರ್ಷದ ತನಕ 500ಕ್ಕೂ ಹೆಚ್ಚು ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನನ್ನು ಮಗನಂತೆ ಸಲಹಿದ ಒಡೆಯನಿಗೆ ಚಿನ್ನದ ಪದಕಗಳ ಸುರಿಮಳೆಯನ್ನೇ ತಂದು ಕೊಟ್ಟಿದ್ದಾನೆ.


ಕೊಳಚೂರು ಕೊಂಡೆಟ್ಟು ಚೆನ್ನ: ನಿರಂತರ 5 ವರ್ಷಗಳಲ್ಲಿ ಸರಣಿ ಶ್ರೇಷ್ಠ ಗೌರವ ಪಡೆದು, 15 ವರ್ಷಗಳಲ್ಲಿ 1580ಕ್ಕೂ ಅಧಿಕ ಚಿನ್ನ ಗೆದ್ದ ಮಹತ್ತರ ಸಾಧನೆ ಮಾಡಿದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ರ ‘ಚೆನ್ನ’ ಕಂಬಳ ಕ್ಷೇತ್ರದ ಮಿಂಚಿನ ಓಟಗಾರ. ಯಾವುದೇ ತರಬೇತಿಯಿಲ್ಲದೆ 4ರ ಹರೆಯದಲ್ಲೇ ಕಂಬಳಕ್ಕೆ ಇಳಿದಿದ್ದ ಚೆನ್ನ ಸೆಮಿ ಫೈನಲ್‌ಗೇರಿದ್ದ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. 75 ಬಾರಿ ಬಿರುಸಿನ -ನಲ್ ಸ್ಪರ್ಧೆಯಲ್ಲಿ ವೀಡಿಯೋ ತೀರ್ಪಿನಲ್ಲಿ ಗೆಲುವು ಸಾಧಿಸಿದ್ದಾನೆ. ಸಾಧು ಸ್ವಭಾವದ ಚೆನ್ನ ಕಂಬಳದ ದಿನ ಹಟ್ಟಿಯಿಂದ ಹೊರಬಂದಂತೆ ಮನೆ ತುಳಸೀ ಕಟ್ಟೆಗೆ ಪ್ರದಕ್ಷಿಣೆ ಬಂದು ತಾನು ಸಾಗುವ ವಾಹನವನ್ನೇರಿ ಮಲಗಿಬಿಡುವ ಬುದ್ಧಿಮತ್ತೆ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.


ಬೋಳದಗುತ್ತು ಧೋನಿ – ರಾಕೆಟ್ ಬೊಲ್ಲ:
ಕಂಬಳದಲ್ಲಿ ಕೂಡ ಧೋನಿ ಎಂಬ ಹೆಸರಿನ ಕೋಣವಿದೆ. ಈತನ ಜೊತೆಗಾರ ರಾಕೆಟ್ ಬೊಲ್ಲ. ಈ ಜೋಡಿ ಕೋಣಗಳ ರಾಕೆಟ್ ವೇಗದ ಓಟ ಇದೀಗ ಹೊಸ ದಾಖಲೆ ಬರೆದಿದೆ. ಕಳೆದ ಕೆಲವು ವರ್ಷಗಳಿಂದ ನೇಗಿಲು ಹಿರಿಯ ವಿಭಾಗದಲ್ಲಿ ಸಾಧನೆ ಮಾಡುತ್ತಿರುವ ಬೋಳದಗುತ್ತು ಸತೀಶ್ ಶೆಟ್ಟಿಯವರ ಕೋಣಗಳು ದಾಖಲೆ ಓಟ ಓಡಿ ಪ್ರಸಿದ್ಧಿ ಪಡೆದಿವೆ. 6 ವರ್ಷ ನಿರಂತರ ಚಾಂಪಿಯನ್‌ಶಿಪ್‌ನ್ನು ಪಡೆದುಕೊಂಡಿವೆ.

ಇರುವೈಲ್ ಪಾಣಿಲದ ಬೊಟ್ಟಿಮಾರ್-ತಾಟೆ:
ಇರುವೈಲು ಪಾಣಿಲ ಬಾಡ ಪೂಜಾರಿಯವರ ತಾಟೆ-ಬೊಟ್ಟಿಮಾರು ಜೋಡಿಗಳು ನೇಗಿಲು ಹಿರಿಯ ವಿಭಾಗದಲ್ಲಿ ನೂರಾರು ಪದಕಗಳನ್ನು ಬೇಟೆಯಾಡಿವೆ. ತಾಟೆ ಕಂಬಳ ಕೆರೆಯಲ್ಲಿ ಓಟಕ್ಕೆ ನಿಂತರೆ ಚಿರತೆಯನ್ನೂ ಮೀರಿಸುವ ಓಟಗಾರ ಎಂದೇ ಪ್ರಸಿದ್ಧಿ. ಅದೆ? ಸ್ಪರ್ಧೆಯ ಸಂದರ್ಭ ಎದುರಾಳಿಗಿಂತ 5 ರಿಂದ 6 ಅಡಿ ಹಿಂದಿರುವ ತಾಟೆ ಅರ್ಧ ಓಟದ ಬಳಿಕ ಎದುರಾಳಿಗಳನ್ನು ಓರೆಗಣ್ಣಿನಲ್ಲೇ ನೋಡಿ, ನಿಸ್ಸೀಮತೆಯನ್ನು ಪ್ರದರ್ಶಿಸಿ ಗೇಮ್ ಫಿನಿಷರ್ ಮಾಡುವ ಹೀರೋ. ತಾಟೆ- ಬೊಟ್ಟಿಮಾರ್ ಜೋಡಿಯ ಓಟವನ್ನು ನೋಡಲೆಂದೇ ಜನ ಸೇರುತ್ತಾರೆ.


ನಂದಳಿಕೆ ಪಾಂಡು: ನಂದಳಿಕೆ ಶ್ರೀಕಾಂತ ಭಟ್‌ರ ಮಾಲಕತ್ವದ ಪಾಂಡು ಕೋಣ ಕೂಡ ಈಗ ಕಂಬಳ ಕ್ಷೇತ್ರದ ಚಾಂಪಿಯನ್ ಎನ್ನಬಹುದು.2೦೦ಕ್ಕಿಂತಲೂ ಅಧಿಕ ಪದಕಗಳನ್ನು ಗೆದ್ದುಕೊಂಡ ಗೆಲುವಿನ ಸರದಾರ. ಹಲವು ಬಾರಿ ಚಾಂಪಿಯನ್ ಪಟ್ಟವನ್ನು ಕೂಡ ಪಡೆದುಕೊಂಡಿದ್ದಾನೆ. 7 ಬಾರಿ ಸರಣಿಶ್ರೇಷ್ಟನಾಗಿ ಹೊರಹೊಮ್ಮಿದ ವೀರ. ಪಾಂಡುವಿನ ಓಟವನ್ನು ಕಣ್ತುಂಬಿಕೊಳ್ಳಲೆಂದೇ ಲಕ್ಷಾಂತರ ಮಂದಿ ಸೇರುವುದು ಪಾಂಡುವಿನ ಹೆಗ್ಗಳಿಕೆ.


ಕಾರ್ಕಳದ ಮುಕೇಶ: ಕಾರ್ಕಳ ಜೀವನದಾಸ ಅಡ್ಯಂತಾಯರ ಕಂಬಳ ಓಟದ ಕೋಣ ಮುಕೇಶ. ಅಭಿಮಾನಿಗಳ ಹೃದಯದಲ್ಲಿ ಸೂಪರ್ ಸ್ಟಾರ್ ಸ್ಥಾನಕ್ಕೇರಿದವನು. ಕೋಣಕ್ಕೆ ಮೂಗಿನ ಹಗ್ಗ ಹಾಕುವ ಸಮಯದಲ್ಲಿ ಮಾಡಿದ್ದ ಎಡವಟ್ಟಿನಿಂದಾಗಿ ಈತನ ಮೂಗಿನ ಹೊಳ್ಳೆ ತುಸು ದೊಡ್ಡದಾಗಿತ್ತು. ಹೀಗೆ ತನ್ನ ಮೂಗಿನ ಕಾರಣದಿಂದ ’ಮೂಂಕೇಶ’ ಎಂದು ಅಡ್ಡ ಹೆಸರು ಪಡೆದ ಆತ ಮುಂದೆ ಅಭಿಮಾನಿಗಳ ಪ್ರೀತಿಯ ಮುಕೇಶನಾಗಿದ್ದಾನೆ. ನಿಖರ ಓಟ, ಅತ್ಯಂತ ಸುಂದರ ಮೈಕಟ್ಟು, ನಡವಳಿಕೆಯಿಂದಲೇ ಜನಮನ ಗೆದ್ದಿರುವ ಕೋಣ. ಜೊತೆಗಾರ ಯಾರೇ ಇರಲಿ, ಒಮ್ಮೆಯೂ ಯಾವುದೇ ಉಪದ್ರ ನೀಡದಂತೆ ಓಡಿದವ, ನೂಲು ಕಟ್ಟಿ ಬಿಟ್ಟಂತೆ ನೇರ ಓಟ ಮುಕೇಶನದು. ಜೊತೆಗಾರ ಎಷ ವೇಗವಾಗಿ ಓಡಲಿ, ಆದರೆ ಮುಕೇಶ ಎಂದೂ ಒಂದು ಹೆಜ್ಜೆ ಎದುರೇ ಓಡುತ್ತಾನೆ. ಎಂದೂ ಹಿಂದೆ ಬಿದ್ದವನಲ್ಲ ಈ ಗೇಮ್‌ಚೇಂಜರ್.

ಕ್ರಿಕೆಟ್ ಕ್ಷೇತ್ರದಲ್ಲಿ ಹೇಗೆ ಗಂಗೂಲಿ, ತೆಂಡೂಲ್ಕರ್, ಕೊಹ್ಲಿ ಮುಂತಾದ ಸ್ಟಾರ್ ಕ್ರಿಕೆಟರ್‌ಗಳ ಹೆಸರು ಫೇಮಸ್ ಆಗಿದೆಯೋ ಹಾಗೆಯೇ ಕಂಬಳ ಕ್ಷೇತ್ರದಲ್ಲಿ ಕೂಡ ನಾಗರಾಜ, ಚೆನ್ನ, ತಾಟೆ, ಬೊಟ್ಟಿಮಾರ್ ಮುಂತಾದವುಗಳು ಸ್ಟಾರ್ ಕೋಣಗಳು. ಹೌದು ಯಾವುದೇ ಸ್ಟಾರ್ ಆಟಗಾರನಿಗಿಂತಲೂ ಹೆಚ್ಚಿನ ಕ್ರೇಝ್ ನಮ್ಮ ಕಂಬಳದ ಸ್ಟಾರ್ ಕೋಣಗಳಿಗೆ ಇದೆ. ಅನೇಕ ಕೋಣಗಳು ತಾವು ಗೆಲ್ಲುವ ಜೊತೆಗೆ ಓಟಗಾರನಿಗೆ, ಯಜಮಾನನಿಗೆ ಗೌರವ, ಬಹುಮಾನವನ್ನು ತಂದುಕೊಡುತ್ತವೆ. ಅಷ್ಟೇ ಅಲ್ಲದೆ ಇನ್ನೊಂದಷ್ಟು ಕೋಣಗಳು ತಮ್ಮ ಯಜಮಾನರು, ಓಡಿಸಿದವರಿಗೆ ರಾಜ್ಯೋತ್ಸವ, ಕ್ರೀಡಾರತ್ನ ಪ್ರಶಸ್ತಿಗಳನ್ನು ದೊರಕಿಸಿಕೊಟ್ಟಿವೆ. ಅಂದಹಾಗೆ ಕೋಣಗಳಿಗೆ ಹೆಸರು ಇಡುವುದು ಹೇಗೆ ಎನ್ನುವ ಬಗ್ಗೆ ಹೆಚ್ಚಿನವರಲ್ಲಿ ಕುತೂಹಲ ಇದೆ. ಕೋಣಗಳನ್ನು ಗುರುತಿಸುವುದು ಅವುಗಳ ಜಾತಿಯಿಂದ. ಅಂದರೆ ಕಾಲ, ಬೊಳ್ಳ, ಕೆಂಚ, ಕೊಕ್ಕೆ ಇತ್ಯಾದಿ. ಕಪ್ಪು ಬಣ್ಣದ ಕೋಣಕ್ಕೆ ಕಾಲ, ಬಿಳಿ ಚರ್ಮದ ಕೋಣವನ್ನು ಬೊಳ್ಳ, ಸ್ವಲ್ಪ ಕೆಂಪು ಬಣ್ಣದ ಚರ್ಮ ಹೊಂದಿರುವುದನ್ನು ಕೆಂಚ, ಕೊಂಬು ಕೆಳಗಿರುವ ಕೋಣವನ್ನು ಮೋಡ, ಸಣ್ಣ ಕೊಂಬಿನ ಕೋಣವನ್ನು ಕುಟ್ಟಿ ಎಂದು ಕರೆಯುವ ವಾಡಿಕೆ ಕಂಬಳ ಕ್ಷೇತ್ರದ್ದು. ಬಳಿಕ ಮನುಷ್ಯರಂತೆ ಹೆಸರಿಡುವ ಸಂಪ್ರದಾಯ ಆರಂಭಗೊಂಡಿತು. ಇದು ಆರಂಭಗೊಂಡಿದ್ದು 1960ರ ದಶಕದಲ್ಲಿ ಎಂದು ಹೇಳಲಾಗಿದೆ. ನಿಡ್ಪಳ್ಳಿ ಜೀವಂಧರ ಆರಿಗರು ತಮ್ಮ ಕೋಣಗಳಿಗೆ ’ಜಯ’ ಮತ್ತು ’ಗೋಪಾಲ’ ಎಂದು ಹೆಸರಿಡುವ ಮೂಲಕ ಈ ಸಂಪ್ರದಾಯ ಆರಂಭಗೊಂಡಿದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here