ಕಂಬಳದಲ್ಲಿ ತೀರ್ಪುಗಾರಿಕೆ ಹೇಗೆ ನಡೆಯುತ್ತದೆ?

0

ಕಂಬಳ ಕೂಟಕ್ಕೆ ಲಕ್ಷಾಂತರ ಮಂದಿ ಕಂಬಳ ಅಭಿಮಾನಿಗಳು, ಪ್ರೇಕ್ಷಕರು ಸೇರುತ್ತಾರೆ. ಅಷ್ಟೂ ಮಂದಿಗೆ ಕೋಣಗಳ ಓಟ ಸ್ಪರ್ಧೆಯು ಒಂದು ಕಡೆಯಿಂದ ಸಾಕಷ್ಟು ಮನರಂಜನೆ ನೀಡಿದರೆ, ಕಂಬಳವನ್ನು ಇನ್ನಷ್ಟು ಮನರಂಜನೀಯವಾಗಿಸುವುದು ಕಂಬಳ ಕೂಟದಲ್ಲಿ ಕೇಳಿಬರುವ ಕಮೆಂಟರಿ ಅಥವಾ ಉದ್ಘೋಷಣೆ. ಹೌದು, ಇತರ ಎಲ್ಲಾ ಕ್ರೀಡೆಗಳಿಗಿಂತ ಭಿನ್ನವಾಗಿದೆ ಕರಾವಳಿಯ ಪುರಾತನ ಜಾನಪದ ಕ್ರೀಡೆ ಕಂಬಳದ ಕಾಮೆಂಟರಿ. ಇಲ್ಲಿ ಓಟಗಳಲ್ಲಿ ಭಾಗವಹಿಸುವ ಕೋಣಗಳು, ಯಜಮಾನರ ಬಗ್ಗೆ ಮಾಹಿತಿಯ ಜೊತೆಗೆ ಹಿಂದಿನ ಕಂಬಳ ಕೂಟಗಳ ಬಗ್ಗೆ ಒಂದಷ್ಟು ಮಾಹಿತಿ, ವಿಮರ್ಶೆ ಇರುತ್ತದೆ. ಜೊತೆಗೆ ಯುವಪೀಳಿಗೆಗೆ ತಿಳಿದಿರದ ಇನ್ನೊಂದಷ್ಟು ಮಾಹಿತಿಗಳನ್ನು ಉಣಬಡಿಸುವ ಕೆಲಸವೂ ನಡೆಯುತ್ತದೆ. ಕರಾವಳಿಯ ಕಂಬಳ ಕ್ರೀಡೆಗಳಲ್ಲಿ ಅಚ್ಚ ತುಳುವಿನಲ್ಲಿ ಕಮೆಂಟರಿ ಮೂಡಿಬಂದರೆ, ಈಗ ಬೆಂಗಳೂರು ಕಂಬಳಕ್ಕಾಗಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜನರಿಗೆ ಕಂಬಳ ಕ್ರೀಡೆ, ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಬೇಕೆನ್ನುವ ಉದ್ದೇಶದಿಂದ ಬೆಂಗಳೂರು ಕಂಬಳದಲ್ಲಿ ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಕಾಮೆಂಟರಿಯು ಮೂಡಿಬರಲಿದೆ.


ಕಂಬಳದ ತೀರ್ಪುಗಾರಿಕೆ ಕೂಡ ಬಹಳಷ್ಟು ವಿಭಿನ್ನವಾಗಿ ನಡೆಯುವ ವಿಚಾರ. ಈಗ ಕಂಬಳದ ತೀರ್ಪುಗಾರಿಕೆಗೆ ಬಹಳಷ್ಟು ಮಟ್ಟಿಗೆ ತಂತ್ರಜ್ಞಾನ ನೆರವು ನೀಡುತ್ತಿದೆ. ತೀರ್ಪುಗಾರರ ಕಣ್ತಪ್ಪಿನಿಂದ ಕೋಣಗಳಿಗೆ ಮೋಸವಾಗಬಾರದು, ತೀರ್ಪಿನಲ್ಲಿ ತೊಂದರೆಯಾಗಬಾರದು ಎನ್ನುವ ದೃಷ್ಟಿಯಲ್ಲಿ ಲೇಸರ್ ಬೀಮ್ ನೆಟ್‌ವರ್ಕ್ ಅಂದರೆ ಸೆನ್ಸಾರ್ ಮೂಲಕ ತೀರ್ಪು ನೀಡುವ ಪದ್ಧತಿ ನಡೆದುಕೊಂಡು ಬಂದಿದೆ. ನೇಗಿಲು, ಹಗ್ಗ ಮತ್ತು ಅಡ್ಡಹಲಗೆ ವಿಭಾಗದ ಸ್ಪರ್ಧೆಗಳ ವೇಳೆ ಕೋಣಗಳನ್ನು ಬಿಡಿಸುವಲ್ಲಿ ಅಂದರೆ ಗಂತ್‌ನ ಬಳಿ ಒಂದು ಸೆಟ್ ತೀರ್ಪುಗಾರರು ಇರುತ್ತಾರೆ. ಕರೆಯಲ್ಲಿ ಜೋಡಿ ಕೋಣಗಳು ನಿಂತು ತಯಾರಾದ ಕೂಡಲೇ ಒಬ್ಬರು ಕೆಂಪು ಬಾವುಟವನ್ನು ಎತ್ತಿ ಸ್ಪರ್ಧೆಗೆ ಚಾಲನೆ ನೀಡುತ್ತಾರೆ. ಉದ್ಘೋಷಕರು ಮೈಕ್‌ನಲ್ಲಿ ಸರದಿ ಪ್ರಕಾರ ಬಿಡುವ ಕೋಣಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಜೊತೆಗೆ ಟೆಂಟ್‌ನಲ್ಲಿ ಇರುವವರು ಅಂಕಿ ಅಂಶಗಳನ್ನು ದಾಖಲಿಸಿಕೊಳ್ಳುತ್ತಾರೆ. ಬಿಟ್ಟ ಕೂಡಲೇ ಯಾರ ಕೋಣಗಳು ಯಾರ ಕರೆಯಲ್ಲಿವೆ ಎನ್ನುವ ಮಾಹಿತಿಯನ್ನು ನೀಡುತ್ತಾರೆ. ‘ಬುಡ್ತೆರ್’ (ಬಿಟ್ಟಿದ್ದಾರೆ) ಎನ್ನುವ ಮೂಲಕ ಓಟ ಆರಂಭವಾಗಿರುವುದನ್ನು ಘೋಷಣೆ ಮಾಡುತ್ತಾರೆ. ಓಡುವ ಕೋಣಗಳು ಮಂಜೊಟ್ಟಿ ತಲುಪುವ ಮಧ್ಯೆ ಸೆನ್ಸಾರ್ ಅಳವಡಿಕೆ ಮಾಡಲಾಗಿರುತ್ತದೆ. ಎರಡೂ ಬದಿಗಳಲ್ಲಿ ಸೆನ್ಸಾರ್ ಸ್ಕ್ಯಾನರ್ ಇದ್ದು, ಅವುಗಳ ಮೂಲಕ ಮೊದಲು ಹಾದುಹೋಗುವ ಕೋಣವನ್ನು ವಿಜೇತ ಎಂದು ಪರಿಗಣಿಸಲಾಗುತ್ತದೆ. ಇದು ಕರಾರುವಕ್ಕಾಗಿ ಫಲಿತಾಂಶ ನೀಡುತ್ತದೆ. ಹೀಗಾಗಿ ಇಲ್ಲಿ ಫಲಿತಾಂಶದಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳು ಆಗುವುದಿಲ್ಲ. ಮಂಜೊಟ್ಟಿ ಬಳಿ ಇರುವ ಟೆಂಟ್‌ನಲ್ಲಿ ಇರುವ ತೀರ್ಪುಗಾರರ ತಂಡದ ಪೈಕಿ ಉದ್ಘೋಷಕರು ಯಾರ ಕೋಣ ಮೊದಲು ಗುರಿ ಮುಟ್ಟಿತು ಎನ್ನುವುದನ್ನು ದಾಖಲಿಸಿಕೊಳ್ಳುತ್ತಾರೆ. ಸೆನ್ಸಾರ್ ಟೈಮರ್‌ನಲ್ಲಿ ಮೂಡಿದ ಸಮಯವನ್ನು ಅಂಕಿ ಅಂಶ ನಿರ್ವಾಹಕರು ದಾಖಲಿಸಿಕೊಳ್ಳುತ್ತಾರೆ. ಇನ್ನು ಕನೆಹಲಗೆಯ ಸ್ಪರ್ಧೆಯಲ್ಲಿ ನಿಶಾನೆಗೆ ನೀರು ಹಾರಿಸುವುದು ಫಲಿತಾಂಶಕ್ಕೆ ಪರಿಗಣಿಸುವ ವಿಚಾರವಾದ್ದರಿಂದ ಕಂಬಳ ಕರೆಯ ಮೇಲೆ ಕಟ್ಟಿರುವ ಎರಡು 6.5 ಕೋಲು ಮತ್ತು ಒಂದು 7 ಕೋಲಿನ ನಿಶಾನೆಯ ಬಳಿ ಮೂವರು ವ್ಯಕ್ತಿಗಳನ್ನು ಆಯಾ ಕಂಬಳ ಸಮಿತಿಯವರು ನೇಮಿಸಿರುತ್ತಾರೆ. ಇವರು ನೀರು ಹಾರುವ ಮಟ್ಟವನ್ನು ನೋಡಿ ಅದನ್ನು ತೀರ್ಪುಗಾರರಿಗೆ ತಿಳಿಸುತ್ತಾರೆ. ಈ ಮೂಲಕ ಈ ವಿಭಾಗದ ತೀರ್ಪು ನೀಡಲಾಗುತ್ತದೆ.

LEAVE A REPLY

Please enter your comment!
Please enter your name here