ನೆಲ್ಯಾಡಿ: ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಗ್ರಂಥಾಲಯ ವಿಭಾಗದಿಂದ ಗುರುನಾನಕ್ ಜಯಂತಿ ಪ್ರಯುಕ್ತ ಗ್ರಂಥಾವಲೋಕನ, ಪುಸ್ತಕ ವಿಮರ್ಶೆ, ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮ ನೆರವೇರಿತು.ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸೀತಾರಾಮ್ ಪಿ ಅವರು ಜ್ಯೋತಿ ಬೆಳಗಿಸಿ ಮಾತನಾಡಿ ಬುದ್ಧ, ತಮಿಳುನಾಡಿನ ಮಯನ್ಮಾರರು, ವಚನ ಚಳುವಳಿ, ಕೀರ್ತನಕಾರರು ಮತ್ತು ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಭಕ್ತಿಯ ಅಭಿವ್ಯಕ್ತಿ ಯನ್ನು ಕಾವ್ಯ ಮತ್ತು ಗದ್ಯಾತ್ಮಕ ಶೈಲಿಯಲ್ಲಿ ಕಾಣಲು ಸಾಧ್ಯವಿದೆ. ಈ ಭಕ್ತಿ ಪರಂಪರೆಯ ಬೆಳವಣಿಗೆಯು ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ಸಾಮಾಜಿಕ ಸುಧಾರಣೆಯ ಹಿನ್ನೆಲೆಯಲ್ಲಿಯೂ ಕೂಡ ಹಲವು ರೂಪಗಳನ್ನ ಪಡೆದುಕೊಂಡು ವಿಸ್ತರಿಸಿದೆ. ಈ ಹಿನ್ನಲೆಯಲ್ಲಿ ಉತ್ತರ ಭಾರತದಲ್ಲಿ ಭಕ್ತಿಯ ವ್ಯಾಖ್ಯಾನದ ಮೂಲಕ ಮಾನವೀಯ ಸಂದೇಶಗಳನ್ನು ಪ್ರತಿಪಾದಿಸಿದ ಗುರುನಾನಕ್ ಅವರ ಜಯಂತಿಯ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅರ್ಥಶಾಸ್ತ್ರದ ವಿಭಾಗದ ಉಪನ್ಯಾಸಕ ಸಚಿನ್ ಗೌಡ ಎನ್.ಟಿ ಶಿವರಾಮ ಕಾರಂತರ ‘ಬೆಟ್ಟದ ಜೀವ’ ಕಾದಂಬರಿ ಕುರಿತು ಮಾತನಾಡಿದರು.
ಪಶ್ಚಿಮಘಟ್ಟ ಪ್ರದೇಶದಲ್ಲಿ ಪ್ರಕೃತಿಯೊಂದಿಗೆ ಮನುಷ್ಯನ ಹೊಂದಾಣಿಕೆಯ ಬದುಕನ್ನು ಕಟ್ಟಿಕೊಂಡಿರುವ ರೀತಿಯು ಅನನ್ಯವಾದದ್ದು, ಪ್ರಾಕೃತಿಕ ಚಿತ್ರಣಗಳ ಜೊತೆಗೆ ಸಮುದಾಯಗಳ ಸಾಂಸ್ಕೃತಿಕ ಬದುಕಿನ ಅಭಿವ್ಯಕ್ತಿಯನ್ನು ಈ ಕಾದಂಬರಿಯಲ್ಲಿ ಕಾಣಲು ಸಾಧ್ಯವಿದೆ. ಐತಿಹಾಸಿಕವಾಗಿ ಈ ಕಾದಂಬರಿಯು ಸ್ವಾತಂತ್ರ್ಯ ಹೋರಾಟದ ಕಾಲಘಟ್ಟವನ್ನ ಪ್ರತಿನಿಧಿಸಿದ್ದು, ಕಥಾವಸ್ತುವಿನ ದೃಷ್ಟಿಯಲ್ಲಿ ಮನುಷ್ಯ ಸಂಬಂಧಗಳ ಅಂತರಾವಲೋಕನದ ಅನೇಕ ಭಾವಾಭಿವ್ಯಕ್ತಿಗಳನ್ನ ಈ ಕಾದಂಬರಿ ಯಲ್ಲಿ ಕಾಣಲು ಸಾಧ್ಯವಿದೆ ಎಂದರು.
ವಿದ್ಯಾರ್ಥಿಗಳಾದ ಅಂತಿಮ ಬಿ. ಎ. ವಿದ್ಯಾರ್ಥಿ ಸಂದೀಪ್ ಕುಮಾರ್ ತೇಜಸ್ವಿ ಯವರ ‘ಬೆಳ್ಳಂದೂರಿನ ನರಭಕ್ಷಕ’ ಕೃತಿಯನ್ನು, ಅಂತಿಮ ಬಿ .ಎ ವಿದ್ಯಾರ್ಥಿನಿ ವನಿತಾ ಕಾರಂತರ ‘ಚೋಮನ ದುಡಿ’ ಕೃತಿಯನ್ನು, ವಿದ್ಯಾರ್ಥಿನಿ ಅನುಪ್ರಿಯ ನೇಮಿಚಂದ್ರ ರವರ ‘ಬದುಕು ಬದಲಿಸಬಹುದು’ ಕೃತಿಯನ್ನು ಕುರಿತು ಮಾತನಾಡಿದರು.ಕಾರ್ಯಕ್ರಮ ಆಯೋಜಸಿದ ಗ್ರಂಥಪಾಲಕಿ ಶೋಭ ಡಿ. ಟಿ. ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಭವ್ಯಶ್ರಿ ಮತ್ತು ತಂಡದವರು ಪ್ರಾರ್ಥಿಸಿ, ಕನ್ನಡ ವಿಭಾಗದ ಉಪನ್ಯಾಸಕ ಡಾ.ನೂರಂದಪ್ಪ ಸ್ವಾಗತಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಚಂದ್ರಕಲಾ ವಂದಿಸಿ, ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಪುಸ್ತಕ ಪ್ರದರ್ಶನವನ್ನು ಕನ್ನಡ ವಿಭಾಗದ ಉಪನ್ಯಾಸಕ ಡಾ.ನೂರಂದಪ್ಪ ಉದ್ಘಾಟಿಸಿದರು. ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.