ನೆಲ್ಯಾಡಿ: ’ಹೃದಯಾರಾಂ’ ಮೈಂಡ್ ಕೇರ್ ಸೆಂಟರ್ ಶುಭಾರಂಭ

0

ನೆಲ್ಯಾಡಿ: ಕೇರಳದ ಕಣ್ಣೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ’ಹೃದಯಾರಾಂ’ ಮೈಂಡ್ ಕೇರ್ ಸೆಂಟರ್‌ನ 4ನೇ ಶಾಖೆ ನೆಲ್ಯಾಡಿಯಲ್ಲಿ ನ.28ರಂದು ಶುಭಾರಂಭಗೊಂಡಿತು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಮಾರ್ ಲಾರೆನ್ಸ್ ಮುಕ್ಕುಝಿ ಅವರು ಉದ್ಘಾಟಿಸಿ ಆಶೀರ್ವಚನ ವಿಧಿವಿಧಾನ ನೆರವೇರಿಸಿದರು. ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸ್ತುತ ಕಾಲಘಟ್ಟದಲ್ಲಿ ಕುಟುಂಬ ಜೀವನ ಬದಲಾಗಿದೆ. ಜನರಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ನೊಂದವರಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಆರಂಭಗೊಂಡಿರುವ ’ಹೃದಯಾರಾಂ’ ಮೈಂಡ್ ಕೇರ್ ಸೆಂಟರ್ ಈ ಪ್ರದೇಶದ ಜನರಿಗೆ ನೆಮ್ಮದಿಯ ತಾಣವಾಗಲಿ ಎಂದರು.

ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲುರವರು ಮಾತನಾಡಿ, ಆಧುನಿಕ ಮೊಬೈಲ್ ಯುಗದಲ್ಲಿ ಪ್ರತಿಯೊಂದು ಕುಟುಂಬಗಳಲ್ಲಿಯೂ ಕಲಹವಿದೆ. ಇಂತಹ ಸಂದರ್ಭದಲ್ಲಿ ಮೈಂಡ್ ಕೇರ್ ಸೆಂಟರ್ ಅನಿವಾರ್ಯವೂ ಆಗಿದೆ. ಕೌನ್ಸಿಲಿಂಗ್, ಸೈಕೋ ಥೆರಪಿಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು. ಅತಿಥಿಯಾಗಿದ್ದ ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ಎಲಿಯಾಸ್ ಎಂ.ಕೆ.ಅವರು ಮಾತನಾಡಿ, ಜಂಜಾಟದ ಬದುಕಿನಿಂದ ಜನರು ಮಾನಸಿಕ ಸ್ಥಿಮಿತವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕೌನ್ಸಿಲಿಂಗ್, ಸೈಕೋ ಥೆರಪಿಯಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ನೆಲ್ಯಾಡಿಯಲ್ಲಿ ಆರಂಭಗೊಂಡಿರುವ ಮೈಂಡ್ ಕೇರ್ ಸೆಂಟರ್‌ನಿಂದ ಜನರಿಗೆ ಸಹಾಯ ದೊರೆಯಲಿ ಎಂದರು. ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಮಾಥ್ಯು ವೆಟ್ಟಮ್‌ತಂಡಂ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ನೆಮ್ಮದಿಯ ತಾಣವಾಗಿ ಹೃದಯಾರಾಂ ಬೆಳೆಯಲಿ ಎಂದರು.
’ಹೃದಯಾರಾಂ’ ಇದರ ಸ್ಥಾಪಕ ನಿರ್ದೇಶಕಿ ಹಾಗೂ ಪ್ರೊವಿನ್ಶಿಯಲ್ ಸುಪಿರೀಯರ್ ಆಗಿರುವ ಸಿ| ಡಾ|ಟ್ರಿಸಾ ಪಾಲಕ್ಕಲ್ ಅವರು ಮಾತನಾಡಿ, ’ಹೃದಯಾರಾಂ’ ಮೈಂಡ್ ಕೇರ್ ಸೆಂಟರ್‌ನಲ್ಲಿ ಮಾನಸಿಕ ಸಮಸ್ಯೆಗಳಿಗೆ ಹಲವು ವರ್ಷಗಳ ಅನುಭವ ಹೊಂದಿರುವ ತಜ್ಞ ಸೈಕಾಲಜಿಸ್ಟ್‌ಗಳ ಮತ್ತು ನುರಿತ ಕೌನ್ಸಿಲರ್‌ಗಳ ಸಹಾಯದಿಂದ ಕೌನ್ಸಿಲಿಂಗ್ ಮತ್ತು ಸೈಕೋ ಥೆರಪಿ ಮೂಲಕ ಪರಿಹಾರ ಒದಗಿಸಲಾಗುತ್ತದೆ. ಸೋಮಾರಿತನ, ವಿಪರೀತ ಕೋಪ, ಖಿನ್ನತೆ, ಅತಿಯಾದ ಭಯ, ಕಲಿಕೆಯಲ್ಲಿನ ಅಸಮರ್ಥತೆ, ಹದಿಹರೆಯದ ಸಮಸ್ಯೆಗಳು, ಆತ್ಮಹತ್ಯಾ ಪ್ರವೃತ್ತಿ, ವೈವಾಹಿಕ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು, ಮೊಬೈಲ್/ಇಂಟರ್ನೆಟ್ ಅಡಿಕ್ಷನ್‌ಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಕೊಡಗು ಸಿದ್ದಾಪುರ ಸೆಕ್ರೇಡ್ ಹಾರ್ಟ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಸಿ|ಡಾ|ಟ್ರೀಸಾ ತೊಟ್ಟುಪುರಂ, ಸಿ| ಮೇರಿ ಚೆಲ್ಲಂಕೋಟ್ ಎಸ್.ಎಚ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೃದಯಾರಾಂನ ನಿರ್ದೇಶಕಿ ಸಿ|ಡಾ| ರಿನ್ಸಿ ಅಗಸ್ಟಿನ್ ಎಸ್.ಹೆಚ್.ಅವರು ಹೃದಯಾರಾಂ ಸ್ಥಾಪನೆ ಹಾಗೂ ಬೆಳೆದುಬಂದ ರೀತಿಯ ಬಗ್ಗೆ ತಿಳಿಸಿದರು. ರೀಜಿನಲ್ ಸುಪಿರೀಯರ್ ಸಿ| ಲಿಸ್ಸಿ ಮಾಥ್ಯು ಸ್ವಾಗತಿಸಿದರು. ರೀಜನಲ್ ಕೌನ್ಸಿಲರ್ ಸಿ| ಸೌಮ್ಯ ಮರಿಯಾ ವಂದಿಸಿದರು. ಸಿ| ಸೊನಿಯಾ ಅಗಸ್ಟಿನ್ ಎಸ್.ಹೆಚ್. ನಿರೂಪಿಸಿದರು. ರೋಸ್ಮಾ ಹಾಗೂ ಡೋನಾ ಪ್ರಾರ್ಥಿಸಿದರು.

ಗೌರವಾರ್ಪಣೆ:
ಧರ್ಮಾಧ್ಯಕ್ಷ ಪದವಿ ಸ್ವೀಕರಿಸಿದ ರಜತ ಮಹೋತ್ಸವ ಸಂಭ್ರಮದಲ್ಲಿರುವ ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಮಾರ್ ಲಾರೆನ್ಸ್ ಮುಕ್ಕುಝಿ ಅವರನ್ನು ಈ ಸಂದರ್ಭದಲ್ಲಿ ಶಾಲು, ಹಾರಾರ್ಪಣೆ, ಸ್ಮರಣಿಕೆ, ಫಲ ತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಯಾಸ ದೀಕ್ಷೆ ಸ್ವೀಕರಿಸಿದ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಸಿ| ಡಾ| ಟ್ರೀಸಾ ಪಾಲಕ್ಕಲ್ ಎಸ್.ಎಚ್., ಕೊಡಗು ಸಿದ್ದಾಪುರ ಸೆಕ್ರೇಡ್ ಹಾರ್ಟ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಸಿ|ಡಾ|ಟ್ರೀಸಾ ತೊಟ್ಟುಪುರಂ ಹಾಗೂ ಸಿ| ಮೇರಿ ಚೆಲ್ಲಂಕೋಟ್ ಎಸ್.ಎಚ್.ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಸಿ| ಟೆಸ್ಸಿ ಮನ್ವೆಲ್ ಎಸ್.ಹೆಚ್.ಅವರಿಗೂ ಗೌರವಾರ್ಪಣೆ ಮಾಡಲಾಯಿತು.

LEAVE A REPLY

Please enter your comment!
Please enter your name here