ಬೇರಿಕೆ- ಬೊಳಂತಿಲ ರಸ್ತೆ ಕಾಮಗಾರಿ ಶಂಕು ಸ್ಥಾಪನೆ

0

ಮೂರು ರಸ್ತೆಗೆ 22 ಕೋಟಿ ರೂ., ಸುಳ್ಳು ಆರೋಪಗಳಿಗೆ ಅಭಿವೃದ್ದಿಯಿಂದ ಉತ್ತರ-ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆಯ ಮೂರು ರಸ್ತೆಗಳಿಗೆ ಒಟ್ಟು 22 ಕೋಟಿ ರೂ. ಅನುದಾನ ಬಂದಿದ್ದು, ರಸ್ತೆಗಳ ಅಭಿವೃದ್ಧಿಗಾಗಿ ಜಿ.ಪಂ. ಹಾಗೂ ತಾ.ಪಂ.ನ 6 ಕೋಟಿ ರೂ. ಅನುದಾನ ಮಂಜೂರಾಗಿದೆ. ಮಳೆಯ ಕಾರಣದಿಂದಾಗಿ ಕಾಮಗಾರಿಯ ಆರಂಭ ಸ್ವಲ್ಪ ವಿಳಂಬವಾಗಿದ್ದು, ಈಗಾಗಲೇ ಕಾಮಗಾರಿಗಳಿಗೆ ಚಾಲನೆ ನೀಡುವ ಕೆಲಸ ನಡೆಯುತ್ತಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅನುದಾನ ನೀಡುತ್ತಿಲ್ಲ ಎಂದು ಸುಳ್ಳು ಆರೋಪ ಮಾಡುವವರಿಗೆ ಎರಡು ತಿಂಗಳ ಬಳಿಕ ಅಭಿವೃದ್ಧಿಯೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ನೀಡಿರುವ ಅನುದಾನಗಳ ಬಗ್ಗೆ ಮನವರಿಕೆ ಮಾಡಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು- ಉಪ್ಪಿನಂಗಡಿ ರಸ್ತೆಯ ಬೇರಿಕೆಯಿಂದ ಬೊಳಂತಿಲದವರೆಗೆ 10 ಕೋಟಿ ರೂ. ಅನುದಾನದಲ್ಲಿ ನಡೆಯಲಿರುವ ಚತುಷ್ಪಥ ರಸ್ತೆಯ ಕಾಮಗಾರಿಗೆ ಡಿ.1ರಂದು ಶಂಕು ಸ್ಥಾಪನೆ ನೆರವೇರಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.


ಈಗ ಬಿಡುಗಡೆಯಾಗಿರುವ 22 ಕೋ.ರೂ. ಅನುದಾನದಲ್ಲಿ ಬೇರಿಕೆಯಿಂದ ಬೊಳಂತಿಲದವರೆಗಿನ ರಸ್ತೆ ಅಭಿವೃದ್ಧಿಗೆ 10 ಕೋ.ರೂ., ವಿಟ್ಲ- ಸಾರಡ್ಕ ರಸ್ತೆಗೆ 9.25 ಕೋ.ರೂ., ಪುರುಷರಕಟ್ಟೆಯಿಂದ ಪಾಪೆತ್ತಡ್ಕದವರೆಗಿನ ರಸ್ತೆ ಕಾಮಗಾರಿಗೆ 2.75 ಕೋ.ರೂ. ಅನುದಾನ ಮೀಸಲಿಡಲಾಗಿದೆ. ಈ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಪುತ್ತೂರು – ಉಪ್ಪಿನಂಗಡಿ ರಸ್ತೆಗೆ ಎರಡನೇ ಹಂತವಾಗಿ ಇನ್ನೂ 20 ಕೋ. ರೂ.ನಷ್ಟು ಅನುದಾನ ಮಂಜೂರಾತಿ ಹಂತದಲ್ಲಿದ್ದು, ಬಾಕಿಯಿರುವ ಬೊಳುವಾರು- ಪಡೀಲು, ದಾರಂದಕುಕ್ಕು- ವಿನಾಯಕನಗರ, ಬೊಳಂತಿಲದಿಂದ 34 ನೆಕ್ಕಿಲಾಡಿ ರಾಷ್ಟ್ರೀಯ ಹೆದ್ದಾರಿಯವರೆಗೆ ಚತುಷ್ಪಥ ರಸ್ತೆ ಕಾಮಗಾರಿ ನಡೆಯಲಿದೆ. ಜಿ.ಪಂ. ಹಾಗೂ ತಾ.ಪಂ.ನ ಸುಮಾರು 6 ಕೋಟಿ ರೂ. ಅನುದಾನ ಬಂದಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಉಪ್ಪಿನಂಗಡಿಯಲ್ಲಿ ಕಿಂಡಿ ಅಣೆಕಟ್ಟು, ಪುತ್ತೂರನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಅನುದಾನ ಬರಲಿದೆ ಎಂದರು.


ಕೆಎಂಎಫ್‌ಗೆ ಜಾಗ ಮಂಜೂರಾತಿ:
ಪಡ್ನೂರು ಬಳಿ ಕೆಎಂಎಫ್‌ನವರಿಗೆ 11 ಎಕ್ರೆ ಜಮೀನು ಕ್ಯಾಬಿನೆಟ್‌ನಲ್ಲಿ ಮಂಜೂರಾಗಿದ್ದು, ಅಲ್ಲಿ ಕೆಎಂಎಫ್‌ನವರ ಘಟಕ ನಿರ್ಮಾಣಗೊಂಡು ಸ್ಥಳೀಯರಿಗೆ ಉದ್ಯೋಗವಕಾಶವೂ ದೊರೆಯಲಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದಿಂದ ಅಭಿವೃದ್ಧಿಯ ಪರ್ವ ಆರಂಭವಾಗಿದ್ದು, ಇನ್ನು ನಿರಂತರ ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದರು.


ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ:
ಈ ರಸ್ತೆಗೆ ಈಗಾಗಲೇ ಹಿಂದಿನ ಶಾಸಕರು ಶಿಲಾನ್ಯಾಸ ನೆರವೇರಿಸಿರುವ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕ ಅಶೋಕ್ ಕುಮಾರ್ ರೈ, ಅನುದಾನ ನಾವು ತಂದಿದ್ದು ಎಂದು ಬಿಜೆಪಿಯವರು ಹೇಳಿಕೊಂಡು ತಿರುಗುತ್ತಿದ್ದಾರೆ. ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಅನುದಾನ ಬಿಡುಗಡೆಯಾಗುವುದಿಲ್ಲ. ಹಾಗಿದ್ದರೆ ಅವರ ಅವಧಿಯಲ್ಲೇ ಈ ಕಾಮಗಾರಿಯನ್ನು ಆರಂಭ ಮಾಡಬಹುದಿತ್ತಲ್ವಾ? ಈ ರಸ್ತೆಯ ಅಭಿವೃದ್ಧಿಗೆ ಅನುದಾನ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಮಾಡಿದ ರಸ್ತೆ ಕಾಮಗಾರಿ ಇದಕ್ಕಿಂತ ಮೊದಲು ಇದೆ. ಈಗಲೇ ಅದರ ಡಾಮರೀಕರಣ ಕಿತ್ತು ಹೋಗಿ ಮರು ತೇಪೆ ಕಾರ್ಯ ನಡೆಸುವ ಪರಿಸ್ಥಿತಿ ಬಂದೊದಗಿದೆ. ಇನ್ನೊಂದು ಕಡೆ ಒಂದು ಕೋಟ್ ಡಾಮರು ಹಾಕಲು ಬಾಕಿ ಇದೆ. ಇದೆಲ್ಲಾ ಅವರ ಶೇ.30-40ರ ಪರಿಣಾಮ ಎಂದ ಅವರು, ಅಭಿವೃದ್ಧಿಯಲ್ಲಿ ಯಾವತ್ತೂ ನಾನು ರಾಜಕೀಯ ಮಾಡುವುದಿಲ್ಲ. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಊರು ಅಭಿವೃದ್ಧಿಯಾಗಬೇಕು ಅದರೊಂದಿಗೆ ಜನರ ಅಭಿವೃದ್ಧಿನೂ ಆಗಬೇಕು ಅಷ್ಟೇ ನನ್ನ ಆಶಯ ಎಂದರು.


ಈ ಸಂದರ್ಭ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರಾದ ರಾಜಾರಾಮ್, ಸಹಾಯಕ ಅಭಿಯಂತರರಾದ ಕನಿಷ್ಕ, ಕಿರಿಯ ಅಭಿಯಂತರರಾದ ಎಲ್.ಸಿ. ಸಿಕ್ವೇರಾ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್, ಕೋಡಿಂಬಾಡಿ ವಲಯಾಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು, ಕಾರ್ಯದರ್ಶಿ ಯೊಗೀಶ್ ಸಾಮಾನಿ, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯ ಯು.ಟಿ. ತೌಸೀಫ್, ಸಣ್ಣಣ್ಣ, ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, 34 ನೆಕ್ಕಿಲಾಡಿ ಬೂತ್ ಅಧ್ಯಕ್ಷ ಇಸಾಕ್ ಎಚ್., ಕಾಂಗ್ರೆಸ್ ಮುಖಂಡರಾದ ಡಾ. ರಘು, ನಝೀರ್ ಮಠ, ಆನಂದ ಸಾಂತ್ಯಡ್ಕ, ಅಬ್ದುಲ್ ಖಾದರ್ ಆದರ್ಶನಗರ, ಸುಂದರ ಸಾಲ್ಯಾನ್, ಪ್ರಭಾಕರ ಆದರ್ಶನಗರ, ವೆಂಕಟೇಶ್ ಕಿಣಿ, ವೆಂಕಪ್ಪ ಪೂಜಾರಿ ಮರುವೇಲು, ಇಬ್ರಾಹೀಂ ಆದರ್ಶನಗರ, ಸಿಪ್ರಿನ್ ವೇಗಸ್ ಬೇರಿಕೆ, ಪ್ರಸಾದ್ ಶೆಟ್ಟಿ ಬೇರಿಕೆ, ರಾಜೇಶ್ ಶೆಟ್ಟಿ ಬೇರಿಕೆ, ವಿಕ್ರಂ ಶೆಟ್ಟಿ ಅಂತರ, ಜಾನ್ ಕೆನ್ಯೂಟ್, ಯತೀಶ್ ಶೆಟ್ಟಿ ಬರಮೇಲು, ಕೇಶವ ಗೌಡ, ಸುರೇಶ್ ಶೆಟ್ಟಿ ಬರಮೇಲು, ದಾಮೋದರ ಶೆಟ್ಟಿ ಮಠಂತಬೆಟ್ಟು, ಶಿವಪ್ರಸಾದ್ ರೈ ಮಠಂತಬೆಟ್ಟು, ವಿಜಯಕುಮಾರ್ ಚೀಮುಳ್ಳು ಮತ್ತಿತರರು ಉಪಸ್ಥಿತರಿದ್ದರು.

ರಸ್ತೆಗೆ ಜಾಗ ಬಿಡುವಂತೆ ಮನವೊಲಿಕೆ
ರಸ್ತೆ ಕಾಮಗಾರಿಗೆ ಜಾಗ ಬಿಡಲು ಆಕ್ಷೇಪ ವ್ಯಕ್ತಪಡಿಸುವವರನ್ನು ಭೇಟಿಯಾದ ಅಶೋಕ್ ಕುಮಾರ್ ರೈಯವರು, ರಸ್ತೆಗೆ ಜಾಗ ಬಿಡುವುದಿಲ್ಲವೆಂದು ನೀವು ಆಕ್ಷೇಪ ವ್ಯಕ್ತಪಡಿಸಿದರೆ, ಅದು ನ್ಯಾಯಾಲಯದ ಮೆಟ್ಟಿಲೇರುತ್ತದೆ. ಮತ್ತೆ ಪರಿಹಾರ ಸಿಗುವಾಗ ವರ್ಷಾನುಗಟ್ಟಲೇ ಹಿಡಿಯಬಹುದು. ಈಗ ಆ ಪ್ರದೇಶದಲ್ಲಿ ಇರುವ ಜಾಗದ ಸರಕಾರಿ ದರಕ್ಕಿಂತ ನಾಲ್ಕು ಪಟ್ಟು ಪರಿಹಾರ ರಸ್ತೆಗೆ ಜಾಗ ಬಿಟ್ಟವರಿಗೆ ನೀಡಲಾಗುತ್ತದೆ. ಆದರೆ ಅದು ಈಗಲೇ ಸಿಗುತ್ತದೆ ಅಂತ ನಾನು ಹೇಳುವುದಿಲ್ಲ. ಒಂದು ವರ್ಷವಾದರೂ ಹಿಡಿಯಬಹುದು. ರಸ್ತೆಗೆ ನನ್ನ ಜಾಗವೂ ಹೋಗಿದ್ದು, ಅದರ ಪರಿಹಾರ ಇಲ್ಲಿಯ ತನಕ ನನಗೆ ಬಂದಿಲ್ಲ. ಆದರೆ ಖಂಡಿತಾ ಬರುತ್ತದೆ. ಈಗಲೇ ಬೇಕು ಅಂದರೆ ಸಿಗುವುದಿಲ್ಲ. ರಸ್ತೆ ಕಾಮಗಾರಿಯ ಸಂದರ್ಭ ಕಾಂಪೌಂಡ್ ಕಟ್ಟಿಕೊಡುವ ನಿಬಂಧನೆಗಳಿಲ್ಲ. ನನ್ನ ಮನೆಗೆ ಸುಮಾರು ಒಂದು ಕೋಟಿಗೂ ಅಧಿಕ ಸ್ವಂತ ಖರ್ಚು ಮಾಡಿ ನಾನೇ ಕಂಪೌಂಡ್ ನಿರ್ಮಿಸಿದ್ದೇನೆ. ಆದರೂ ಇಲ್ಲಿ ಕೆಲವರು ಬಾವಿಗೆ ರಿಂಗ್ ಹಾಕಿ ಕೊಡುವ ಬೇಡಿಕೆ, ಚರಂಡಿ ವ್ಯವಸ್ಥೆಯನ್ನು ಕೇಳಿದ್ದಾರೆ. ಅದನ್ನು ಮಾಡಿಕೊಡಲಾಗುವುದು ಎಂದರಲ್ಲದೆ, ಸ್ಥಳದಲ್ಲಿದ್ದ ಎಂಜಿನಿಯರ್ ಅವರನ್ನು ಕರೆದು ಅಗತ್ಯವಿದ್ದ ಕಡೆ ಧರೆಯ ಬೇಸ್ ಜಾರದಂತೆ ಸ್ವಲ್ಪ ಮಟ್ಟಿನ ತಡೆಗೋಡೆಯಾದರೂ ನಿರ್ಮಿಸಿಕೊಡಿ ಎಂದು ಸೂಚಿಸಿದರು. ಶಾಸಕರ ಮನವೊಲಿಕೆಗೆ ಹಲವರು ಜಾಗ ಬಿಟ್ಟುಕೊಡುವ ಬಗ್ಗೆ ಒಪ್ಪಿಗೆ ನೀಡಿದರು. ಇನ್ನು ಕೆಲವು ಜಾಗದ ಮಾಲಕರು ದೂರದ ಊರಲ್ಲಿದ್ದು, ಅವರನ್ನು ಸಂಪರ್ಕಿಸುವಂತೆ ಎಂಜಿನಿಯರ್ ಅವರಿಗೆ ಶಾಸಕರು ಸೂಚಿಸಿದರು.

ಅಜ್ಜಿಗೆ ಶೀಟ್: ಮಹಿಳೆಗೆ ಕೆಲಸ
ಶಾಸಕರು ಬರುವ ವಿಷಯ ತಿಳಿದು ಅಲ್ಲಿಗೆ ೩೪ ನೆಕ್ಕಿಲಾಡಿಯ ಕೊಳಕ್ಕೆಯ ಕಮಲಜ್ಜಿಯವರು ತನ್ನ ಮನೆಯ ಮೇಲ್ಚಾವಣಿಗೆ ಶೀಟಿನ ಅಗತ್ಯವಿರುವುದನ್ನು ತಿಳಿಸಿದ್ದು, ಈ ಸಂದರ್ಭ ಅಜ್ಜಿಯೊಂದಿಗೆ ಆಪ್ತತೆಯಿಂದಲೇ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈಯವರು ತಮ್ಮ ಟ್ರಸ್ಟ್‌ನ ವತಿಯಿಂದ ಅಜ್ಜಿಗೆ 10 ಸಿಮೆಂಟ್ ಶೀಟ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೇ, ಕೊಳ್ತಿಗೆ ಮಮತಾ ಎಂಬವರು ಕೂಡಾ ಶಾಸಕರನ್ನು ಭೇಟಿ ಮಾಡಿ ಕ್ಯಾಂಪ್ಕೊದಲ್ಲಿ ತಾನು ಕೆಲಸಕ್ಕೆ ಅರ್ಜಿ ಕೊಟ್ಟು 2 ವರ್ಷವಾಯಿತು. ಆದರೆ ನನಗೆ ಕೆಲಸ ದೊರೆತ್ತಿಲ್ಲ ಎಂಬುದರ ಬಗ್ಗೆ ತಿಳಿಸಿದ್ದು, ಕೂಡಲೇ ಸ್ಪಂದಿಸಿದ ಅಶೋಕ್ ಕುಮಾರ್ ರೈಯವರು ಅಲ್ಲಿನ ಅಧಿಕಾರಿಗೆ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದು, ಮುಂಬರುವ ಸೋಮವಾರದಿಂದಲೇ ಕೆಲಸಕ್ಕೆ ಹಾಜರಾಗುವ ಬಗ್ಗೆ ಒಪ್ಪಿಗೆಯೂ ಮಮತಾ ಅವರಿಗೆ ಸಿಕ್ಕಿತು. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಬೇರಿಕೆಯ ಶೀನ ಶೆಟ್ಟಿಯವರಿಗೆ ಕಣ್ಣು ಕಾಣದಿರುವ ಬಗ್ಗೆ ವಿಚಾರಿಸಿದ ಶಾಸಕರು ಅವರನ್ನು ಶೀಘ್ರವೇ ಕಣ್ಣಿನ ಆಸ್ಪತ್ರೆಗೆ ದಾಖಲಿಸಿ. ಅಲ್ಲಿ ಹೋಗಿ ಬರುವ ಖರ್ಚು ಸಮೇತ ಚಿಕಿತ್ಸೆಯ ಖರ್ಚು ನಾನು ಭರಿಸುತ್ತೇನೆ. ಮನೆಯವರೊಬ್ಬರು ಮಾತ್ರ ಅವರೊಟ್ಟಿಗೆ ಆಸ್ಪತ್ರೆಯಲ್ಲಿ ನಿಲ್ಲಬೇಕು ಎಂದರು.

LEAVE A REPLY

Please enter your comment!
Please enter your name here