ಪುತ್ತೂರು: ರಾಜ್ಯದಲ್ಲಿ ಸಾವಿರಾರು ಮಂದಿ ಕಟ್ಟಡ ಕಾರ್ಮಿಕರಲ್ಲದವರೂ ನೋಂದಾವಣೆ ಮಾಡಿಕೊಂಡಿದ್ದು ಇದರಿಂದ ನಿಜವಾದ ಕಟ್ಟಡ ಕಾರ್ಮಿಕರು ಸೌಲಭ್ಯ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಅಕ್ರಮ ಕಟ್ಟಡ ಕಾರ್ಮಿಕರನ್ನು ಪತ್ತೆ ಮಾಡುವಂತೆ ಆಗ್ರಹಿಸಿ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಪುತ್ತೂರು ಆಡಳಿತ ಸೌಧದ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿತು. ಬಳಿಕ ಸಹಾಯಕ ಕಮೀಷನರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪುತ್ತೂರು ತಾಲೂಕು ಆಡಳಿತ ಸೌಧದ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿದ ಸಂಘದ ಅಧ್ಯಕ್ಷ ಜಯರಾಮ ಕುಲಾಲ್ ರಾಜ್ಯದಲ್ಲಿ ಲಕ್ಷಾಂತರ ಮಂದಿ ಕಟ್ಟಡ ಕಾರ್ಮಿಕರಿದ್ದು, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಳೆದ 2 ವರ್ಷದಿಂದ ವಿದ್ಯಾರ್ಥಿ ವೇತನ ಬರುತ್ತಿಲ್ಲ. ಈ ಕುರಿತು ಕಾರ್ಮಿಕ ಒಕ್ಕೂಟದಿಂದ ಮನವಿ ಕೊಟ್ಟಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಸಾವಿರಾರು ಕಟ್ಟಡ ಕಾರ್ಮಿಕರಲ್ಲದವರೂ ನೋಂದಾವಣೆ ಮಾಡಿದ್ದರಿಂದ ನಿಜವಾದ ಪ್ರಾಮಾಣಿಕ ಕಟ್ಟಡ ಕಾರ್ಮಿಕರಿಗೆ ಬರುವ ಸೌಲಭ್ಯ ಕಡಿಮೆಯಾಗುತ್ತಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕಟ್ಟಡ ಕಾರ್ಮಿಕರ ಜಿಲ್ಲಾ ಸಮಿತಿ ರಚಿಸಬೇಕು ಮತ್ತು ಪ್ರತಿ ತಾಲೂಕು ಕೇಂದ್ರದಲ್ಲಿ ಕಾರ್ಮಿಕ ಇಲಾಖೆಯ ಮೂಲಕ ಸಮಿತಿ ರಚನೆ ಮಾಡಿ ಅಕ್ರಮ ಕಟ್ಟಡ ಕಾರ್ಮಿಕರನ್ನು ಪತ್ತೆ ಮಾಡುವ ಕೆಲಸ ಆಗಬೇಕು. ಅಕ್ರಮ ಕಟ್ಟಡ ಕಾರ್ಮಿಕರನ್ನು ನೋಂದಾಯಿಸುವಲ್ಲಿ ಕೆಲವೊಂದು ಸಂಘಟನೆಯ ಪಾತ್ರವಿದೆ. ಸೈಬರ್ ಕೇಂದ್ರದಲ್ಲೂ ಕಟ್ಟಡ ಕಾರ್ಮಿಕರ ಸೇರ್ಪಡೆ ಮಾಡಲಾಗುತ್ತಿದೆ. ಈ ಕುರಿತು ಸರಕಾರ ಎಚ್ಚೆತ್ತು ಕೊಂಡು ತನಿಖೆ ಮಾಡಬೇಕು. ಮಾತ್ರವಲ್ಲ ಇದರೊಂದಿಗೆ ಪುತ್ತೂರಿನಲ್ಲಿ ಕಾರ್ಮಿಕರ ಭವನ, ಕಾರ್ಮಿಕ ಕೌಶಲ್ಯ ಕೇಂದ್ರ ನಿರ್ಮಾಣ ಆಗಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಕಾನೂನು ಸಲಹೆಗಾರ ದೇವಾನಂದ ಕೆ, ಗೌರವ ಸಲಹೆಗಾರ ಶೇಷಪ್ಪ ಕುಲಾಲ್ ಮಚ್ಚಿಮಲೆ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಮುಕ್ವೆ, ಉಪಾಧ್ಯಕ್ಷ ಈಶ್ವರ ನಾಯ್ಕ್, ಜೊತೆ ಕಾರ್ಯದರ್ಶಿ ಚೆನ್ನಪ್ಪ ಮಚ್ಚಿಮಲೆ, ತೇಜ ಕುಮಾರ್ ಸೇರಿದಂತೆ ಹಲವಾರು ಮಂದಿ ಕಾರ್ಮಿಕರು ಉಪಸ್ಥಿತರಿದ್ದರು.