ಪುತ್ತೂರು:ಶಾಲಾ ಬಸ್ವೊಂದರ ಚಾಲಕನ ಅವಾಂತರದಿಂದಾಗಿ ಸರಣಿ ಅಪಘಾತ ಸಂಭವಿಸಿ, ರಸ್ತೆ ಬದಿಯಲ್ಲಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಪುತ್ರನ ಕಾರು ಹಾಗೂ ತಾ.ಪಂ.ಮಾಜಿ ಸದಸ್ಯ ಲಕ್ಷ್ಮಣ ಅವರ ಕಾರಿಗೆ ಡಿಕ್ಕಿಯಾಗಿ ಕಾರುಗಳು ಜಖಂಗೊಂಡ ಘಟನೆ ಡಿ.6ರಂದು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ.ಅದೃಷ್ಟವಶಾತ್ ಬಸ್ಸಲ್ಲಿದ್ದ ಶಾಲಾ ಮಕ್ಕಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಖಾಸಗಿ ವಿದ್ಯಾ ಸಂಸ್ಥೆಗೆ ಸೇರಿದ ಬಸ್ ಇದಾಗಿದ್ದು ಬೆಳ್ತಂಗಡಿ ಮೊಗ್ರು ಮೂಲದ ಜನಾರ್ದನ ಎಂಬವರು ಬಸ್ ಚಾಲಕರಾಗಿದ್ದರು.ಸಂಜೆ 4 ಗಂಟೆಗೆ ಶಾಲೆಯಿಂದ ಮಕ್ಕಳನ್ನು ಹೊತ್ತುಕೊಂಡು ಹೊರಟ ಬಸ್ ಆರಂಭದಲ್ಲಿ ವಿವೇಕಾನಂದ ಶಾಲಾ ಬಳಿಯೇ ನಿಲ್ಲಿಸಿದ್ದ ತಾ.ಪಂ.ಮಾಜಿ ಸದಸ್ಯ ಬೆಳ್ಳಿಪ್ಪಾಡಿ ಲಕ್ಷ್ಮಣ ಗೌಡ ಅವರ ಕಾರಿಗೆ ಡಿಕ್ಕಿಯಾಗಿದೆ.ಮುಂದೆ, ಅಶ್ಮಿ ಕಂಫರ್ಟ್ ಸಮೀಪ ನಿಲ್ಲಿಸಿದ್ದ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಅವರ ಪುತ್ರ ಬಿಪಿನ್ ಶೆಟ್ಟಿ ಅವರ ಕಾರಿಗೆ ಅಪಘಾತವುಂಟು ಮಾಡಿದೆ.
ಲಕ್ಷ್ಮಣ ಗೌಡ ಅವರು ವಿವೇಕಾನಂದ ಶಾಲೆಯಿಂದ ತನ್ನ ಮಗಳನ್ನು ಕರೆದುಕೊಂಡು ಬಂದು ದರ್ಶನ್ ಕಲಾ ಮಂದಿರ ಬಳಿ ಪಾರ್ಕ್ ಮಾಡಿದ ಆಲ್ಟೋ ಕಾರಿಗೆ ಹತ್ತಿಸಿ ಇನ್ನೇನು ಅಲ್ಲಿಂದ ಹೊರಡಲೆಂದು ಕಾರು ಚಲಾಯಿಸುತ್ತಿದ್ದ ವೇಳೆಗೇ ಕಾರಿನ ಹಿಂಬದಿಯಿಂದ ಬಂದ ಶಾಲಾ ಬಸ್ ಅವರ ಕಾರಿಗೆ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಕಾರಿಗೆ ಹಾನಿಯಾಗಿದೆ.ಲಕ್ಷ್ಮಣ ಗೌಡ ಅವರ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಮೇಲಕ್ಕೆಸೆಯಲ್ಪಟ್ಟು ಹಾನಿಯಾಗಿದೆ.ಅವರ ಕಾರಿಗೆ ಡಿಕ್ಕಿಯಾಗಿ ಮುಂದೆ ಸಾಗಿದ ಬಸ್ ಅಶ್ಮಿ ಕಂಫರ್ಟ್ ಸಮೀಪ ನಿಲ್ಲಿಸಲಾಗಿದ್ದ ಬಿಪಿನ್ ಶೆಟ್ಟಿ ಅವರ ಕಾರಿಗೆ ಡಿಕ್ಕಿಯಾಗಿದೆ.ಅಲ್ಲಿಂದ ಮುಂದೆ ಹೋದ ಬಸ್ ಮುರ ಸಮೀಪ ಮತ್ತೊಂದು ವಾಹನಕ್ಕೆ ಅಪಘಾತ ನಡೆಸಿದೆ.
ಅಷ್ಟರಲ್ಲಾಗಲೇ ಬಸ್ ಚಾಲಕನ ಅವಾಂತರ ಎಲ್ಲಾ ಕಡೆ ಸುದ್ದಿಯಾಗಿ ಮುರದಲ್ಲಿ ಬಸ್ಸನ್ನು ನಿಲ್ಲಿಸಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.ಶಕುಂತಳಾ ಶೆಟ್ಟಿಯವರ ಪುತ್ರ ಬಿಪಿನ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.`ದ.6ರAದು ಸಂಜೆ ಆರೋಪಿ ಚಾಲಕ ಚಲಾಯಿಸುತ್ತಿದ್ದ ಕೆ.ಎ.21 ಬಿ:8771 ನೋಂದಣಿಯ ಸ್ಕೂಲ್ ವಾಹನ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪ್ಯ ಕಡೆಯಿಂದ ಕಬಕ ಕಡೆಗೆ ಚಲಾಯಿಸಿಕೊಂಡು ಹೋಗಿ ಆಶ್ಮಿ ಲಾಡ್ಜ್ ಬಳಿ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಹೆದ್ದಾರಿಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ ಅಶ್ಮಿ ಲಾಡ್ಜ್ ಎದುರು ಮಣ್ಣು ರಸ್ತೆಯಲ್ಲಿ ನಿಲ್ಲಿಸಿದ ಕೆ.ಎ.04 ಎಮ್ ವೈ 4177ನೇ ನೋಂದಣಿಯ ಕಾರಿಗೆ ಅಪಘಾತವನ್ನುಂಟು ಮಾಡಿದೆ.
ಪರಿಣಾಮ ಕಾರಿನ ಬಲ ಬದಿ ಸಂಪೂರ್ಣ ಜಖಂಗೊಂಡಿದೆ.ಕಾರಿನಲ್ಲಿದ್ದ ಯಾರಿಗೂ ಗಾಯಗಳಾಗಿರುವುದಿಲ್ಲ.ಅಪಘಾತದ ಬಳಿಕ ಆರೋಪಿ ಚಾಲಕ ವಾಹನವನ್ನು ನಿಲ್ಲಿಸದೆ ಅಪಘಾತ ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ಬಿಪಿನ್ ಶೆಟ್ಟಿ ಅವರು ದೂರಿನಲ್ಲಿ ತಿಳಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಶಾಲಾ ಬಸ್ ಚಾಲಕ ಪಾನಮತ್ತನಾಗಿ ಬಸ್ ಚಲಾಯಿಸಿದ್ದ ಪರಿಣಾಮ ಈ ಸರಣಿ ಅಪಘಾತ ಸಂಭವಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗಿದೆ.
ಪುತ್ರಿಯನ್ನು ಕಾರಿನಲ್ಲಿ ಹತ್ತಿಸಿ ಹೊರಡುತ್ತಿದ್ದಂತೆ ಬಸ್ ಡಿಕ್ಕಿ:
“ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದಿದ್ದ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ ಹಿಂದಿರುಗುವ ವೇಳೆ, ವಿವೇಕಾನಂದ ಶಾಲೆಯಿಂದ ನಿತ್ಯ ಬಸ್ನಲ್ಲೇ ಹೋಗುವ ತನ್ನ ಮಗಳನ್ನೂ ಕಾರಿನಲ್ಲಿ ಕರೆದುಕೊಂಡು ಹೋಗುವ ಎಂದು ದರ್ಶನ್ ಕಲಾ ಮಂದಿರದ ಬಳಿ ಕಾರು ಪಾರ್ಕ್ ಮಾಡಿದ್ದೆ.ಹಾಗೆ ಶಾಲೆಯಿಂದ ಬಂದ ಪುತ್ರಿಯನ್ನು ಕಾರಿಗೆ ಹತ್ತಿಸಿ ನಾನು ಕಾರಿನ ಒಳಗೆ ಕೂತಾಗ ಹಿಂಬದಿಯಿಂದ ಶಾಲಾ ಬಸ್ ಬಂದು ಡಿಕ್ಕಿಯಾಗಿದೆ” ಎಂದು ಲಕ್ಷ್ಮಣ ಗೌಡ ಹೇಳಿದ್ದಾರೆ.
ಮದುವೆಗೆ ಬಂದವರು ಹೊರಡುತ್ತಿದ್ದಾಗ ಘಟನೆ
ಬಂಟರ ಭವನದಲ್ಲಿ ನಡೆದಿದ್ದ ವಿವಾಹ ಸಮಾರಂಭಕ್ಕೆ ಬೆಂಗಳೂರಿನಿಂದ ಬಂದಿದ್ದ ನನ್ನ ಮಗ ಬಿಪಿನ್, ಮನೆ ಮಂದಿ ಬೈಪಾಸ್ನ ಅಶ್ಮಿ ಕಂಫರ್ಟ್ನಲ್ಲಿ ತಂಗಿದ್ದರು.ಅಲ್ಲಿಂದ ಹೊರಗಡೆ ತೆರಳಲೆಂದು ಅವರು ಕಾರಿನ ಬಳಿ ಬಂದು ಕೂತಿದ್ದ ವೇಳೆ ಶಾಲಾ ಬಸ್ ಕಾರಿಗೆ ಡಿಕ್ಕಿಯಾಗಿ ಪರಾರಿಯಾಗಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ.