ಕುಂಬ್ರ ವರ್ತಕರ ಸಂಘದಿಂದ ದಿ.ರಾಮಣ್ಣ ರೈಯವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಕೇವಲ ಹಣಕ್ಕಾಗಿ ಆಸೆ ಪಡದೆ ಗ್ರಾಹಕರೊಂದಿಗೆ ಪ್ರೀತಿ ವಿಶ್ವಾಸದಿಂದ ವ್ಯವಹರಿಸುವ ಮೂಲಕ ಸರಳತೆಯನ್ನು ತನ್ನ ಜೀವನದ ಕೊನೆವರೇಗೂ ಅಳವಡಿಸಿಕೊಂಡು ಬಂದಿದ್ದ ದಿ.ರಾಮಣ್ಣ ರೈಯವರು ಓರ್ವ ಪ್ರಾಮಾಣಿಕ ವರ್ತಕರಾಗಿದ್ದರು ಎಂದು ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಹೇಳಿದರು.
ಅವರು ಇತ್ತೀಚೆಗೆ ನಿಧನರಾದ ಕುಂಬ್ರದ ಹಿರಿಯ ಹೊಟೇಲ್ ಉದ್ಯಮಿ ಕುಂಬ್ರ ರಾಮಣ್ಣ ರೈಯವರಿಗೆ ಕುಂಬ್ರ ವರ್ತಕರ ಸಂಘದಿಂದ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು. ಸಭೆಯು ದ.16ರಂದು ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್ ವಠಾರದಲ್ಲಿ ಜರಗಿತು. ಒಳಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ, ಹೊಟೇಲ್ ರಾಮಣ್ಣ ರೈ ಎಂದೇ ಚಿರಪರಿಚಿತರಾಗಿದ್ದ ರಾಮಣ್ಣ ರೈಯವರು ಓರ್ವ ನಿಷ್ಠಾವಂತ ವರ್ತಕ. ಹಣಕ್ಕಾಗಿ ಎಂದೂ ಆಸೆಪಟ್ಟವರಲ್ಲ, ಗ್ರಾಹಕರ ತೃಪ್ತಿಯೆ ಅವರಿಗೆ ಮುಖ್ಯ ಧ್ಯೇಯವಾಗಿತ್ತು ಎಂದರು. ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು ಮಾತನಾಡಿ, ರಾಮಣ್ಣ ರೈಯವರ ಹೊಟೇಲ್ ಎಂದರೆ ಅಂದಿನ ಕಾಲದಲ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿತ್ತು ಎಂದರು. ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರು ಮಾತನಾಡಿ, ಗ್ರಾಹಕರಿಗೆ ಕನಿಷ್ಠ ದರಕ್ಕೆ ಗರಿಷ್ಠ ಆಹಾರವನ್ನು ತನ್ನ ಹೊಟೇಲ್‌ನಲ್ಲಿ ನೀಡುತ್ತಿದ್ದ ರಾಮಣ್ಣ ರೈಯವರು ಸದಾ ನೆನಪಲ್ಲಿ ಉಳಿಯುವ ಓರ್ವ ವ್ಯಕ್ತಿಯಾಗಿದ್ದಾರೆ ಎಂದರು.


ವೇದಿಕೆಯಲ್ಲಿ ಸಾವಿತ್ರಿ ಸಂಕೀರ್ಣದ ಮಾಲಕ ಜಗನ್ನಾಥ ಶೆಟ್ಟಿ ಕೊಂರ್ಬಡ್ಕಬೀಡು, ರಾಮಣ್ಣ ರೈಯವರ ಪುತ್ರ ಅನಿಲ್ ಉಪಸ್ಥಿತರಿದ್ದರು. ವರ್ತಕರ ಸಂಘದ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಮತ್ತು ವಿಮಾ ಸಲಹೆಗಾರ ನಾರಾಯಣ ಕುಕ್ಕುಪುಣಿ ಕಾರ್ಯಕ್ರಮ ನಿರ್ವಹಿಸಿದರು.ವರ್ತಕರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಮೊದಲು ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here