ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ಹೇಮನಾಥ ಶೆಟ್ಟಿ ಕಾವು ಸಹಿತ ಸಮಿತಿ ಸಂಚಾಲಕರಿಗೆ ಸನ್ಮಾನ
ನಿರೀಕ್ಷೆಗಿಂತಲೂ ಯಶಸ್ವಿಯಾಗಿದೆ – ಹೇಮನಾಥ ಶೆಟ್ಟಿ
ಪುತ್ತೂರು: ರಾಜ್ಯಮಟ್ಟದ ಕ್ರೀಡಾ ಕೂಟ ಕೇವಲ 2 ತಿಂಗಳ ಸಿದ್ದತೆಯಾಗಿ ಪುತ್ತೂರಿನಲ್ಲಿ ಯಶಸ್ವಿಯಾಗಿದೆ. ನಾ ಭೂತೋ ನಾ ಭವಿಷ್ಯತಿ ಎಂಬಂತೆ ಕ್ರೀಡಾಕೂಟ ನಡೆದಿದೆ. ಮುಂದೆ ರಾಷ್ಟ್ರಮಟ್ಟದ ಕ್ರೀಡಾಕೂಟವೂ ಇಲ್ಲೇ ನಡೆಯಬೇಕೆಂದು ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್ ಅವರು ಹೇಳಿದ್ದಾರೆ.
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಆತಿಥ್ಯದಲ್ಲಿ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಡಿ.2 ರಿಂದ 4 ರಂದು ಯಶಸ್ವಿಯಾಗಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟ ’ಕ್ರೀಡಾಕಾರಂಜಿ’ ಧನ್ಯತಾ ಸಭೆಯಲ್ಲಿ ಅವರು ಮಾತನಾಡಿದರು. ಇಂತಹ ಕ್ರೀಡಾಕೂಟ ಈ ಹಿಂದೆ ಆಗಲಿಲ್ಲ. ಇನ್ನು ಅಗುವುದು ಕೂಡಾ ಡೌಟ್ ಇದೆ ಎಂದ ಅವರು ಆರಂಭದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಕ್ಯಾಲೆಂಡರ್ ತಯಾರಾಗುವಾಗ ಪುತ್ತೂರಿಗೆ ಆಹ್ವಾನ ಬಂತು. ಆದರೆ ಅನಿವಾರ್ಯ ಕಾರಣದಿಂದ ಒಪ್ಪಿದ ಸಂಸ್ಥೆ ಹಿಂದೆ ಸರಿದಾಗ ಮುಂದೆ ಬಂದು ಪುತ್ತೂರಿನಿಂದ ಹೊರಗೆ ಹೋಗಲು ಬಿಡದೆ ಪುತ್ತೂರಿನಲ್ಲೇ ರಾಜ್ಯಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಕಾವು ಹೇಮನಾಥ ಶೆಟ್ಟಿಯವರಿಗೆ ಸಲ್ಲುತ್ತದೆ. ಕ್ರೀಡಾಕೂಟದ ಕುರಿತು ಯಾವುದೇ ಜಿಲ್ಲೆಯವರಿಂದ ಒಂದೇ ಒಂದು ದೂರು ಬಂದಿಲ್ಲ. ಹಾಗಾಗಿ ಮುಂದೆ 2026 ನೇ ಇಸವಿಗೆ ನಾನು ನಿವೃತ್ತಿ ಆಗುವ ಮೊದಲು ಮತ್ತೆ ನಾವು ಇಲ್ಲಿ ಸಭೆ ಸೇರಿ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ನಡೆಸುವಂತಾಗಲಿ ಎಂದು ಹೇಳಿದರು.
ನಿರೀಕ್ಷೆಗಿಂತಲೂ ಯಶಸ್ವಿಯಾಗಿದೆ:
ಕ್ರೀಡಾಕೂಟದ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರು ನಿಶ್ವಾರ್ಥವಾಗಿ ಸಹಕರಿಸಿದ ಕಾರಣ ಕ್ರೀಡಾಕೂಟ ಯಶಸ್ವಿಯಾಗಿದೆ. ಇತಿಹಾಸದಲ್ಲಿ ಇಲ್ಲಿನ ತನಕ ಆಗದ ರೀತಿಯಲ್ಲಿ ಮಾಡಬೇಕೆಂಬ ಆಸೆಯಿತ್ತು. ಅದೇ ರೀತಿ ಹರಕೆ ಸಂದಾಯವಾಗದೆ. ಎಲ್ಲಾ ವ್ಯವಸ್ಥೆಯಲ್ಲೂ ಅಚ್ಚುಕಟ್ಟಾದ ಜೋಡಣೆಯೊಂದಿಗೆ ಯಶಸ್ವಿಯಾಗಿ ನಡೆದಿದೆ. ಕ್ರೀಡಾಕೂಟದ ಪ್ರಥಮ ಸಭೆಯಲ್ಲಿ ಎಲ್ಲೂ ಕೊರತೆಯಾಗದಂತೆ ಯಶಸ್ವಿಯಾಗಬೇಕೆಂದು ಹೇಳಿದ್ದೆ. ಇವತ್ತು ಅದಕ್ಕಿಂತ ನೂರು ಪಟ್ಟು ಯಶಸ್ವಿಯಾಗಿದೆ ಎಂಬ ಮಾತು ಕೇಳಿ ಬಂದಿದೆ. ಕ್ರೀಡಾಂಗಣದ ಬದಲಾವಣೆ, ನಿರೀಕ್ಷೆಗೂ ಮೀರಿ ಊಟದ ವ್ಯವಸ್ಥೆ, ಹಸಿರುವಾಣಿ ಸಂಗ್ರಹ, ಮೆರವಣಿಗೆ ಮೆರುಗು, ಸ್ವಯಂ ಸೇವಕರ ಸೇವೆ ಅತ್ಯಂತ ಯಶಸ್ವಿಯಾಗಿದೆ. ಯಾವುದೇ ಒಂದು ದೊಡ್ಡ ಕಾರ್ಯಕ್ರಮಕ್ಕೆ ನಾವು ಆಲೋಚನೆ ಮಾಡುವುದು ಸುಲಭ ಕಾರ್ಯಗತ ಮಾಡುವುದು ಕಷ್ಟ. ಆದರೆ ಮೊನ್ನೆ ಕ್ರೀಡಾಕೂಟ ಆಲೋಚನೆ ಮಾಡಿದಕ್ಕಿಂತಲೂ ಹೆಚ್ಚು ವ್ಯವಸ್ಥಿತವಾಗಿ ನಡೆದಿದೆ. ವಿವಿಧ ಜಿಲ್ಲೆಯ ಕ್ರೀಡಾಧಿಕಾರಿಗಳು ಕ್ರೀಡಾಕೂಟದ ನಡುವೆ ನಡೆದ ಸಭೆಯಲ್ಲಿ ಇಲ್ಲಿನ ಅಯೋಜನೆಯ ಹೊಗಳಿಕೆಯು ಕ್ರೀಡಾಕೂಟದ ಯಶಸ್ವಿಗೆ ಸಾಕ್ಷಿಯಾಗಿದೆ ಎಂದ ಅವರು ಮುಂದಿನ ವರ್ಷ ರಾಜ್ಯ ಮಟ್ಟದ ಕ್ರೀಡಾ ಕೂಟ ಮಾಡುವವರು ಪುತ್ತೂರಿನ ಕ್ರೀಡಾಕೂಟದ ಮಾಹಿತಿ ಪಡೆದುಕೊಳ್ಳಲಿ ಎಂದರು. ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಗೌಡ, ಆಹಾರ ಸಮಿತಿ ಸಂಚಾಲಕ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅನಿಸಿಕೆ ವ್ಯಕ್ತಪಡಿಸಿ ಕಾರ್ಯಕ್ರಮದ ಯಶಸ್ವಿಯ ಕುರಿತು ಮಾತನಾಡಿದರು.
ಸನ್ಮಾನ:
ರಾಷ್ಟ್ರಮಟ್ಟದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಕೀರ್ತಿ ಅವರಿಗೆ ತರಬೇತಿ ನೀಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದಾಮೋದರ್, ರಾಜ್ಯಮಟ್ಟದ ಕ್ರೀಡಾಕೂಟದ ಯಶಸ್ವಿಗೆ ಕಾರಣಕರ್ತರಾದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಮುಖ್ಯಗುರು ಜಯಲಕ್ಷ್ಮೀ ರೈ, ದೈಹಿಕ ಶಿಕ್ಷಣ ಶಿಕ್ಷಕಿ ಸುನಿತಾ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ್ ಅಜಿಲ, ವಸತಿ ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದ ಅಕ್ಷರದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಮೋನಪ್ಪ ಪಟ್ಟೆ, ಆಹಾರ ಸಮಿತಿ ಸಂಚಾಲಕ ಜಗದೀಶ್ ಶೆಟ್ಟಿ, ನೀರಿನ ಸಮಿತಿ ಸಂಚಾಲಕ ರವಿಚಂದ್ರ ರೈ, ನೈರ್ಮಲ್ಯ ವ್ಯವಸ್ಥೆ ಅಲಿ ಪರ್ಲಡ್ಕ, ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕರುಗಳು, ತಾಂತ್ರಿಕ ವರ್ಗ, ವೇದಿಕೆ ಸಮಿತಿ, ಸ್ವಯಂ ಸೇವಕ ಸಮಿತಿ ಸಹಿತ ವಿವಿಧ ಸಮಿತಿಯ ಸಂಚಾಲಕಲಕರನ್ನು, ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು, ಕ್ರೀಡಾ ಪಟುಗಳ ಪಯಣಕ್ಕೆ ಸಹಕರಿಸಿದ ವಾಹನ ಚಾಲಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭ ಕ್ರೀಡಾಕೂಟಕ್ಕೆ ಪುತ್ತೂರಿನ ಉದ್ಯಮಿ ಕಲ್ಲೇಗ ಬಿ ಕೆ ಬಿಲ್ಡ್ ಮಾರ್ಟ್‌ನ ಬಾಯರು ಪುತ್ತು ಹಾಜಿ ರೂ.1 ಲಕ್ಷ ನೀಡಿ ಪ್ರೋತ್ಸಾಹಿಸಿದ ನಿಟ್ಟಿನಲ್ಲಿ ಅವರನ್ನು ಕಾವು ಹೇಮನಾಥ ಶೆಟ್ಟಿಯವರು ಗೌರವಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿರುವ ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಟರ ಯಾನೆ ನಾಡವರ ಸಂಘದ ಸಂಚಾಲಕ ದಯಾನಂದ ರೈ, ನಿರ್ದೇಶಕ ಜಯಪ್ರಕಾಶ್ ರೈ, ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಆಡಳಿತ ಮಂಡಳಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಪ್ರೌಢಶಾಲಾ ಸಹಶಿಕ್ಷಕ ಸಂಘದ ಅಧ್ಯಕ್ಷ ಅಬ್ರಾಹಂ, ಕಡಬ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮಾಮಚನ್, ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್ 2 ಅಧ್ಯಕ್ಷ ಸುಧಾಕರ್ ಸಹಿತ ಕ್ರೀಡಾ ಕೂಟದ ಯಶಸ್ವಿಗೆ ಕಾರಣಕರ್ತರಾದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರು ಜಯಲಕ್ಷ್ಮೀ ರೈ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಸುನಿತಾ ವಂದಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ರೈ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ಏರ್ಪಡಿಸಲಾಗಿತ್ತು. ಶಾಸಕ ಅಶೋಕ್ ಕುಮಾರ್ ರೈ ಮತ್ತು ಸಹಾಯಕ ಕಮಿಷನರ್ ಗಿರೀಶ್‌ನಂದನ್ ಅವರು ಕಾರ್ಯಕ್ರಮ ಮುಗಿದ ಬಳಿಕ ಅಗಮಿಸಿ ಸಹಭೋಜನ ಸ್ವೀಕರಿಸಿ, ಕ್ರೀಡಾಕೂಟದ ಯಶಸ್ವಿಗೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ತೆರಳಿದರು.
ಯಾವ ಕಂಪೆನಿಯವರು ದೊಡ್ಡ ಮೊತ್ತ ಕೊಡಲಿಲ್ಲ
ಕ್ರೀಡಾಕೂಟಕ್ಕೆ ವಿವಿಧ ಸಹಕಾರಕ್ಕೆ ಮನವಿ ಮಾಡಲಾಯಿತು. ಆದರೆ ಭರವಸೆ ಕೊಟ್ಟ ಯಾವ ದೊಡ್ಡ ಕಂಪೆನಿಯವರು ಕೂಡಾ ದೊಡ್ಡ ಮೊತ್ತ ಕೊಡಲಿಲ್ಲ. ಆದರೆ ಕ್ರೀಡಾಕೂಟಕ್ಕೆ ಸೇವೆ ನೀಡಿದವರಿಗೆ ಇಲ್ಲಿನ ತನಕ ರೂ.32 ಲಕ್ಷ ಪಾವತಿ ಮಾಡಲಾಗಿದೆ. ಇನ್ನಷ್ಟು ಪಾವತಿಗೆ ವ್ಯವಸ್ಥೆ ಇಟ್ಟು ಕೊಂಡಿದ್ದೇವೆ. ಹಾಗಾಗಿ ಈಗ ಎಷ್ಟು ಸಂಗ್ರಹ ಆಗಿದೆ ಎಂಬ ಲೆಕ್ಕವಿಲ್ಲ. ಇನ್ನಷ್ಟು ಲೆಕ್ಕ ಪತ್ರ ಆಗುತ್ತಾ ಇದೆ.
ಹೇಮನಾಥ ಶೆಟ್ಟಿ ಕಾವು, ಸಂಚಾಲಕರು ಶ್ರೀ ರಾಮಕೃಷ್ಣ ಪ್ರೌಢಶಾಲೆ