ಸನಾತನ ಧರ್ಮ ಶ್ರೇಷ್ಠತೆಯಿಂದ ಕೂಡಿದೆ-ಮಿತ್ರಂಪಾಡಿ ಜಯರಾಮ ರೈ
ಪುತ್ತೂರು: ದೇವಸ್ಥಾನದ ಕೆಲಸ, ಸೇವೆ ಮಾಡುವುದೆಂದರೆ ಅದು ಪುಣ್ಯದ ಕೆಲಸ. ಸನಾತನ ಧರ್ಮ ಶ್ರೇಷ್ಠತೆಯಿಂದ ಕೂಡಿದೆ ಎಂದು ಉದ್ಯಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಹೇಳಿದರು.
ಡಿ.26ರಂದು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸನಾತನ ಧರ್ಮದ ಶ್ರೇಷ್ಠತೆ ಬೇರೆ ದೇಶಕ್ಕೆ ಹೋದಾಗ ತಿಳಿಯುತ್ತದೆ. ಇಲ್ಲಿನ ಕಲೆ, ಆಚಾರ ವಿಚಾರ, ಪರಂಪರೆ ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲ, ಹಾಗಾಗಿ ನಾವು ಭಾಗ್ಯವಂತರು ಎಂದು ಅವರು ಹೇಳಿದರು.
ಅಬುಧಾಬಿಯಲ್ಲಿ 850 ಕೋಟಿ ರೂ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿದ್ದು ನಮ್ಮ ಪ್ರಧಾನಿ ಮೋದಿಯವರು ಇದಕ್ಕೆ ಕಾರಣಕರ್ತರಾಗಿದ್ದಾರೆ, ಮುಸ್ಲಿಂ ರಾಷ್ಟ್ರವಾದರೂ ಅಬುಧಾಬಿಯವರು ಸನಾತನ ಧರ್ಮಕ್ಕೆ ಗೌರವ ಕೊಡುತ್ತಾರೆ ಎಂದು ಮಿತ್ರಂಪಾಡಿ ಜಯರಾಮ ರೈ ಹೇಳಿದರು.
ಮುಂಬೈಯ ಉದ್ಯಮಿ ಸದಾಶಿವ ಶೆಟ್ಟಿ ಮುಂಜಲ್ತೋಡಿ ಮಾತನಾಡಿ ಸನಾತನ ಹಿಂದೂ ಧರ್ಮದ ಶ್ರೇಷ್ಠತೆ ಬಗ್ಗೆ ನಾವೆಲ್ಲಾ ತಿಳಿದುಕೊಳ್ಳಬೇಕು, ಸರ್ವೆ ದೇವಸ್ಥಾನದ ಜಾತ್ರೆಯಲ್ಲಿ ಭಾಗವಹಿಸಿರುವುದು ಖುಷಿ ನೀಡಿದೆ, ಇಲ್ಲಿಗೆ ಸಹಕಾರ ನೀಡಲು ನಾನು ಯಾವತ್ತೂ ಸಿದ್ದನಿದ್ದೇನೆ ಎಂದು ಅವರು ಹೇಳಿದರು.
ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್ಎಸ್ಡಿ ಸರ್ವೆದೋಳಗುತ್ತು ಮಾತನಾಡಿ ದೇವಸ್ಥಾನ ನೆಮ್ಮದಿಯ ಕೇಂದ್ರವಾಗಿದ್ದು ಜನರು ದೇವಸ್ಥಾನದತ್ತ ಹೆಚ್ಚು ಆಕರ್ಷಿತರಾಗಬೇಕು. ಧರ್ಮವನ್ನು ನಾವು ರಕ್ಷಿಸಿದಾಗ ಧರ್ಮ ನಮ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ ಮಾತನಾಡಿ ನಮ್ಮ ದೇವಸ್ಥಾನ ನಿಮ್ಮೆಲ್ಲರ ಸಹಕಾರದಿಂದ ಸುಂದರವಾಗಿ ನಿರ್ಮಾಣಗೊಂಡಿದೆ. ದೇವಸ್ಥಾನದ ಕಾರ್ಯಕ್ರಮಗಳಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೇವಸ್ಥಾನದ ಕಾರ್ಯಗಳಿಗೆ ಸದಾ ಸಹಕಾರ ನೀಡುತ್ತಿರುವ ಊರ, ಪರವೂರ ಮಂದಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಮಾತನಾಡಿ ನಮ್ಮ ದೇವಸ್ಥಾನಕ್ಕೆ ಎಲ್ಲರ ಸಹಕಾರ ಸಿಗುತ್ತಿದೆ, ಭಜನೆ ಮುಖಾಂತರ ಪ್ರತೀ ಮನೆಗೂ ಹೋಗಿ ಆಮಂತ್ರಣ ನೀಡಿದ್ದು ಇದು ಕಾರ್ಯಕ್ರಮಕ್ಕೆ ಆಹ್ವಾನಿಸುವ ಉದ್ದೇಶವೇ ಹೊರತು ದುಡ್ಡಿನ ಉದ್ದೇಶವಲ್ಲ ಎಂದು ಹೇಳಿದರು. ನಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ಚಿಕ್ಕಂದಿನಿಂದಲೇ ಕಲಿಸಿಕೊಡುವ ಮೂಲಕ ಅವರನ್ನು ಸುಸಂಸ್ಕೃತರನ್ನಾಗಿ ಬೆಳೆಸಬೇಕು, ಅದಕ್ಕಾಗಿ ಅವರನ್ನು ದೇವಸ್ಥಾನದ ಕಡೆಗೆ ಬರುವಂತೆ ಪ್ರೇರೇಪಿಸಬೇಕು ಎಂದು ಶಿವನಾಥ ರೈ ಮೇಗಿನಗುತ್ತು ಹೇಳಿದರು.
ಸನ್ಮಾನ:
ಅಬುಧಾಬಿಯ ಉದ್ಯಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ ರೈಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮುಂಡೂರು ಗ್ರಾ.ಪಂ ಸದಸ್ಯರಾದ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ, ರಸಿಕಾ ರೈ ಮೇಗಿನಗುತ್ತು, ವಿಜಯಾ ಕರ್ಮಿನಡ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಶ್ವನಾಥ ರೈ ಮೇಗಿನಗುತ್ತು(ಮುಂಬೈ), ಪ್ರವೀಣಾ ಯಶೋಧರ ರೈ ಮೇಗಿನಗುತ್ತು, ಜಯಂತಿ ನಾಯ್ಕ ನೆಕ್ಕಿತ್ತಡ್ಕ ಉಪಸ್ಥಿತರಿದ್ದರು. ಜಾತ್ರೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಆನಂದ ಪೂಜಾರಿ ವಂದಿಸಿದರು. ವಿನಯ ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಗೀತಾ ಸಾಹಿತ್ಯ ಸಂಭ್ರಮ:
ಡಿ.26ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಗಣಪತಿಹೋಮ, ಕಲಶಪೂಜೆ, ಕಲಶಾಭಿಷೇಕ ನಡೆಯಿತು. ಮದ್ಯಾಹ್ಯ ಗಂಟೆ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಸಂಜೆ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ಕಟ್ಟೆಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.