ಯುವಜನತೆ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸಬೇಕು-ದಂಬೆಕಾನ ಸದಾಶಿವ ರೈ
ಪುತ್ತೂರು: ಪುತ್ತೂರು ತಾಲೂಕು ಯುವ ಬಂಟರ ಸಂಘದ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ, ಬಂಟರ ಸಂಘ ಪುತ್ತೂರು ತಾಲೂಕು ಇವರ ಮಾರ್ಗದರ್ಶನದಲ್ಲಿ ಮಹಿಳಾ ಬಂಟರ ಸಂಘ, ವಿದ್ಯಾರ್ಥಿ ಬಂಟರ ಸಂಘ ಪುತ್ತೂರು ತಾಲೂಕು ಇವರ ಸಹಕಾರದೊಂದಿಗೆ ದಿ.ಎ. ಜೀವನ್ ಭಂಡಾರಿ ಸಿದ್ಯಾಳ ಸ್ಮರಣಾರ್ಥ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಪುತ್ತೂರ್ದ ಬಂಟ ಜವನೆರೆಗೊಬ್ಬು ಬಂಟ್ಸ್ ಪ್ರೀಮಿಯರ್ ಲೀಗ್-2024 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.
ಉದ್ಘಾಟನೆ:
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ತೆಂಗಿನಕಾಯಿ ಒಡೆದು ಧ್ವಜಾರೋಹಣ ನಡೆಸಿ ಕಾರ್ಯಕ್ರಮ ಉದ್ಘಾಟಿಸಿದರು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಟ್ಸ್ ಪ್ರೀಮಿಯರ್ ಲೀಗ್‌ನ ಸಿಇಒ ದಯಾನಂದ ರೈ ಕೋರ್ಮಂಡ ಕ್ರೀಡಾಪಟುಗಳಿಗೆ ಪ್ರಮಾಣವಚನ ಭೋಧಿಸಿದರು. ತಾಲೂಕು ಬಂಟರ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ಉಪಾಧ್ಯಕ್ಷ ಜಗಜೀವನದಾಸ್ ರೈ ಚಿಲ್ಮೆತ್ತಾರು, ಕ್ರೀಡಾ ಸಂಚಾಲಕ ನವೀನ್ ರೈ ಪಂಜಳ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ:
ಮಧ್ಯಾಹ್ನ ನಡೆದ ಸಭಾಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ದಂಬೆಕಾನ ಸದಾಶಿವ ರೈ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಿ.ಜೀವನ್ ಭಂಡಾರಿರವರು ಆದರ್ಶಪ್ರಾಯವಾದ ವ್ಯಕ್ತಿ. ಅವರ ನೆನಪಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದಾಯಕ. ಇವತ್ತು ಯುವಜನತೆ ಆತ್ಮಹತ್ಯೆ ಮಾಡಿಕೊಳ್ಳತ್ತಿರುವುದು ಕಂಡುಬರುತ್ತಿದೆ. ಯುವಜನರಿಗೆ ಸಂಸ್ಕೃತಿ ಸಂಸ್ಕಾರ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಸಂಸ್ಕಾರ ಕಳಿಸಿಕೊಡುವ ಪ್ರಯತ್ನ ಮಾಡಬೇಕು ಎಂದು ಹೇಳಿ ಶುಭಹಾರೈಸಿದರು. ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ ಮಾತನಾಡಿ ಯುವ ಬಂಟರ ಸಂಘ ಶಶಿರಾಜ್ ರೈ ನೇತೃತ್ವದಲ್ಲಿ ಚಿಗುರೊಡೆದಿದೆ. ಈ ಸಂಘಟನೆಯನ್ನು ಎಲ್ಲರೂ ಬೆಳೆಸಿ ಉಳಿಸಬೇಕು ಎಂದು ಹೇಳಿ ಶುಭಹಾರೈಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು ಮಾತನಾಡಿ, ಯುವ ಬಂಟರ ಸಂಘ ಪ್ರತೀ ಗ್ರಾಮದಲ್ಲಿ ಅಸ್ತಿತ್ವದಲ್ಲಿದೆ. ಇದರ ಮೂಲಕ ಯುವ ಬಂಟರು ಪಾಲ್ಗೊಳ್ಳಬೇಕು. ಎಲ್ಲರಲ್ಲಿಯೂ ಪ್ರತಿಭೆ ಇರುತ್ತದೆ. ಪ್ರತಿಭೆ ಅನಾವರಣಕ್ಕೆ ಅವಕಾಶ ಇದೆ ಎಂದು ಹೇಳಿ ಶುಭಹಾರೈಸಿದರು.
ಸನ್ಮಾನ:
ರಾಜ್ಯಮಟ್ಟದ ಗುಂಡುಎಸೆತ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತನುಶ್ರೀ ರೈ, ವಿಶೇಷ ಆಹ್ವಾನಿತರಾಗಿದ್ದ ಸ್ಮಿತಾ ಜೀವನ್ ಭಂಡಾರಿ ಸಿದ್ಯಾಳ, ಹಾಗೂ ಎಡಪದವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿರವರನ್ನು ಸನ್ಮಾನಿಸಲಾಯಿತು.
ತಾಲೂಕು ಬಂಟರ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ತಾಲೂಕು ಬಂಟರ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ಗೌರವಸಲಹೆಗಾರ ರಾಧಾಕೃಷ್ಣ ರೈ ಪರಾರಿಗುತ್ತು, ನಿರ್ದೇಶಕರಾದ ಸದಾಶಿವ ರೈ ಸೂರಂಬೈಲು, ಸುರೇಶ್ ರೈ ಸೂಡಿಮುಳ್ಳು, ಸ್ಮಿತಾ ಜೀವನ್ ಭಂಡಾರಿ ಸಿದ್ಯಾಳ, ಸಾತ್ವಿಕ್ ಭಂಡಾರಿ, ಉದ್ಯಮಿ ನಿತಿನ್ ಪಕ್ಕಳ, ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿ ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ನಾಮನಿರ್ದೇಶಿತ ಸದಸ್ಯ ನಿತ್ಯಾನಂದ ಶೆಟ್ಟಿ, ಆಲಂಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ರೈ ಮನವಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳಗುತ್ತು ಸ್ವಾಗತಿಸಿದರು. ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.