ಪುತ್ತೂರು: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಮೊರಂಕಲ ಎಂಬಲ್ಲಿ ಸರಕಾರ ಕೊಟ್ಟ ಕೃಷಿ ಕೃತಾವಳಿಯನ್ನು ಮಾರಾಟ ಮಾಡುವ ಮೂಲಕ ಕಾನೂನು ಉಲ್ಲಂಘಿಸಿರುವ ಮತ್ತು ಕುಟುಂಬವೊಂದು ಜಾಗದ ಹೆಸರಿನಲ್ಲಿ ದಂಧೆ ಮಾಡುತ್ತಿದ್ದಾರೆಂದು ಆರೋಪಿಸಿ ದ.ಕ ಜಿಲ್ಲಾ ದಲಿತ ಸೇವಾ ಸಮಿತಿ ಆರೋಪ ವ್ಯಕ್ತಪಡಿಸಿದೆ.
ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಮೊರಂಕಲ ಎಂಬಲ್ಲಿ ಅಣ್ಣು ನಾಯ್ಕ ಅವರಿಗೆ ಮಂಜೂರಾಗಿರುವ ಜಮೀನಿನ ಮೂಲಕ ಸಾರ್ವಜನಿಕ ರಸ್ತೆ ಇದ್ದರೂ ಅವರು ಅದಕ್ಕೆ ಬೇಲಿ ಹಾಕಿದ್ದರು. ಈ ಕುರಿತು ಅತಿಕ್ರಮಣ ರಸ್ತೆಯನ್ನು ತೆರವು ಗೊಳಿಸುವ ಸಮಯದಲ್ಲಿ ಕಡಬ ತಹಸೀಲ್ದಾರ್ ಮತ್ತು ಉಪ್ಪಿನಂಗಡಿ ಪೊಲೀಸರಿಂದ ಅಣ್ಣು ನಾಯ್ಕ ಮತ್ತು ಅವರ ಮಗಳು ವಾರಿಜ ಅವರ ಮೇಲೆ ದೌರ್ಜನ್ಯ ನಡೆದಿದೆ ಎಂದು ಮರಾಟಿ ಸಂರಕ್ಷಣಾ ಸಮಿತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾದ್ಯಮದವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ವಾಸ್ತವವಾಗಿ ಅಣ್ಣು ನಾಯ್ಕ ಅವರಿಗೆ ಸರಕಾರ ಕೊಟ್ಟ ಕೃಷಿ ಕೃತಾವಳಿ ಜಾಗದಲ್ಲಿ ಈ ಹಿಂದೆಯೇ ಸಾರ್ವಜನಿಕ ರಸ್ತೆ ಊರ್ಜಿತವಾಗಿದ್ದರಿಂದ ರಸ್ತೆ ಬಿಟ್ಟು ಕೊಡಬೇಕಾಗುತ್ತದೆ. ಈ ನಡುವೆ ಅಣ್ಣು ನಾಯ್ಕ ಅವರು 2005ರಲ್ಲಿ ಬೇಬಿ ಜೋಸೆಫ್ ಅವರಿಗೆ ಎಗ್ರಿಮೆಂಟ್ ಮೂಲಕ ಜಮೀನು ಮಾರಾಟ ಮಾಡಿದ್ದಾರೆ. ಇದರೊಂದಿಗೆ 2017ರಲ್ಲಿ ಕೆ.ಜೆ ಪ್ರಕಾಶ್, 2018ರಲ್ಲಿ ಅಶ್ರಫ್, 2007ರಲ್ಲಿ ಸುಂದರ ಶೆಟ್ಟಿ, 2011ರಲ್ಲಿ ಪಿ.ಪಿ.ವರ್ಗೀಸ್ ಅವರಿಗೂ ಸುಮಾರು ರೂ.75 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಈ ಒಪ್ಪಂದ ಪತ್ರಕ್ಕೆ ಅಣ್ಣು ನಾಯ್ಕ ಅವರ ಕುಟುಂಬದ ಪ್ರತಿ ಸದಸ್ಯರು ಸಹಿ ಹಾಕಿದ್ದಾರೆ. ಸರಕಾರ ಅಣ್ಣು ನಾಯ್ಕ ಅವರಿಗೆ ಜಮೀನು ಮಂಜೂರು ಮಾಡಿದ್ದು ಕೃಷಿ ಕೃತಾವಳಿ ಮಾಡಿ ಜೀವಿಸಲು. ಆದರೆ ಅವರು ಅದನ್ನು ಪೂರ್ತಿ ಉಲ್ಲಂಘನೆ ಮಾಡಿದ್ದಲ್ಲದೆ ಅವರ ಕುಟುಂಬ ಜಾಗದ ಹೆಸರಿನಲ್ಲಿ ದಂಧೆ ಮಾಡಿರುವುದು ಸ್ಪಷ್ಟವಾಗಿದೆ ಎಂದ ಅವರು ಜಮೀನಿನಲ್ಲಿರುವ ರಸ್ತೆಗೆ ಹಾಕಿದ ಬೇಲಿಯನ್ನು ಅಧಿಕಾರಿಗಳು ಕಾನೂನಾತ್ಮಕವಾಗಿ ತೆರವು ಮಾಡಿದ್ದಾರೆ. ಆದರೆ ಕೆಲವು ಸಂಘಟನೆ ಅಣ್ಣು ನಾಯ್ಕರ ಮಗಳಾದ ವಾರಿಜಳಿಗೆ ವಿಷ ಸೇವನೆ ಮಾಡಲು ಪ್ರಚೋದನೆ ನೀಡಿ ಅಧಿಕಾರಿಗಳ ಮೂಲಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಹೊರಿಸಿದ್ದಾರೆ. ಈ ನಿಟ್ಟಿನಲ್ಲಿ ವಿಷ ಸೇವನೆ ಮಾಡಲು ಪ್ರಚೋದನೆ ನೀಡಿದ ಸಂಘಟನೆ ವಿರುದ್ಧ ಪೊಲೀಸರು ಸುಮೋಟೋ ಕೇಸು ದಾಖಲಿಸುಂತೆ ಅವರು ಆಗ್ರಹಿಸಿದ್ದಾರೆ.
ಪಿಟಿಸಿಎಲ್ ಪ್ರಕರಣ ದಾಖಲು:
ಅಣ್ಣು ನಾಯ್ಕ ಅವರ ಜಮೀನನ್ನು ಪಿಟಿಸಿಎಲ್ ಪ್ರಕಾರ ತೆಗೆಸಿಕೊಡಬೇಕೆಂದು ವಾರಿಜ ಅವರ ಮೂಲಕ ಪುತ್ತೂರು ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಜೆಎಂಎಫ್ ನಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅಣ್ಣು ನಾಯ್ಕ ಅವರು ಸರಕಾರ ನೀಡಿರುವ ಜಮೀನನ್ನು ಮಾರಾಟ ಮಾಡಿ ಹಣ ಗಳಿಸಿರುವುದರಿಂದ ಮಂಜೂರಾತಿಯನ್ನು ರದ್ದು ಮಾಡಿ ಸರಕಾರದ ಸ್ವಾಧೀನ ಪಡೆದುಕೊಂಡು ಅಲ್ಲಿ ಸ್ವಾಧಿನ ಹೊಂದಿರುವ ಪ್ರತಿಯೊಬ್ಬರಿಗೂ ಹಂಚಿಕೆ ಮಾಡುವಂತೆ ಮತ್ತು ಅಣ್ಣು ನಾಯ್ಕರಿಗೆ ಮನೆ ಅಡಿಸ್ಥಳವನ್ನು ಒದಗಿಸಲು ಕ್ರಮ ವಹಿಸುವಂತೆ ಸರಕಾರವನ್ನು ನಾವು ಒತ್ತಾಯಿಸುತ್ತೇವೆ ಎಂದು ಸೇಸಪ್ಪ ಬೆದ್ರಕಾಡು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರಶೇಖರ್ ವಿಟ್ಲ, ಪುತ್ತೂರು ತಾಲೂಕು ಸಂಘಟನಾ ಕಾರ್ಯದರ್ಶಿ ಧನಂಜಯ ನಾಯ್ಕ ಬಲ್ನಾಡು, ಪದಾಧಿಕಾರಿ ಕೃಷ್ಣ ನಾಯ್ಕ ಬಜಪ್ಪಾಲ ಉಪಸ್ಥಿತರಿದ್ದರು.