ಜ. 21: 7ನೇ ವರ್ಷದ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಬಾಂಧವ್ಯ ಟ್ರೋಫಿ 2024

0

ಪುತ್ತೂರು: ಕ್ರಿಕೆಟ್ ಪಂದ್ಯದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿರುವ ಬಾಂಧವ್ಯ ಟ್ರೋಫಿ, ಈ ಬಾರಿ ಜ. 21ರಂದು ನೆಹರೂನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯಲಿದೆ.


ಬಾಂಧವ್ಯ ಫ್ರೆಂಡ್ಸ್ ಪುತ್ತೂರು ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ 7ನೇ ವರ್ಷದ ನಾಕೌಟ್ ಮಾದರಿಯ 16 ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಇದಾಗಿರಲಿದೆ.
ಪುತ್ತೂರಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ ಎಂಬಂತೆ ಮಹಿಳೆಯರನ್ನು ಮೈದಾನಕ್ಕಿಳಿಸಿ, ಕ್ರಿಕೆಟ್ ಆಡಿಸಿದ ಹೆಗ್ಗಳಿಕೆ ಬಾಂಧವ್ಯ ಟ್ರೋಫಿಯದ್ದು. ಅಲ್ಲದೇ, ಆಟಗಾರರಿಂದ ಪ್ರವೇಶ ಶುಲ್ಕ ಪಡೆಯದೇ ಆಟವಾಡಿಸುವುದು ಇಲ್ಲಿನ ವಿಶೇಷತೆ.


ಹೆಸರಿನಂತೆಯೇ ಸಮಾಜದಲ್ಲಿ ಬಾಂಧವ್ಯ ಮೂಡಿಸಬೇಕು ಎಂಬ ಸದುದ್ದೇಶದಿಂದ ಬಾಂಧವ್ಯ ಟ್ರೋಫಿ ಪ್ರತಿ ವರ್ಷ ಆಯೋಜಿಸಲಾಗುತ್ತಿದೆ. ಪುತ್ತೂರು ಬಾಂಧವ್ಯ ಫ್ರೆಂಡ್ಸ್ ನೇತೃತ್ವದಲ್ಲಿ ಪುತ್ತೂರಿನ ಎಲ್ಲಾ ಇಲಾಖೆಗಳ ಸಹಯೋಗ ಪಡೆದುಕೊಂಡು ಸಮಾಜದಲ್ಲಿ ಸೌಹಾರ್ದತೆಯ ವಾತಾವರಣಕ್ಕೆ ತಳಹದಿ ಹಾಕುವ ನಿಟ್ಟಿನಲ್ಲಿ ಬಾಂಧವ್ಯ ಟ್ರೋಫಿಯ ಹೆಜ್ಜೆ ಮಹತ್ತರವಾದುದು.ಅಮರ್, ಅಕ್ಬರ್, ಅಂತೋನಿ ಖ್ಯಾತಿಯ ಸ್ಕರಿಯ ಎಂ.ಎ., ಫಾರೂಕ್ ಶೇಖ್ ಮುಕ್ವೆ ಹಾಗೂ ಪ್ರಶಾಂತ್ ರೈ ಇವರೇ ಮೂರು ಮಂದಿ ಸೇರಿಕೊಂಡು ಪುತ್ತೂರು ಬಾಂಧವ್ಯ ಫ್ರೆಂಡ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಪಂದ್ಯ ನಡೆಯುವ ಇಡೀಯ ದಿನ ಪ್ರಾಯೋಜಕರ ಸಹಕಾರ ಪಡೆದುಕೊಂಡು, ಉಪಾಹಾರ,ಊಟ,ಪಾನೀಯದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುತ್ತಿದೆ ಎನ್ನುವುದು ಬಾಂಧವ್ಯ ಟ್ರೋಫಿಯ ಇನ್ನೊಂದು ವಿಶೇಷತೆ.


ಜ. 21ರಂದು ಬೆಳಿಗ್ಗೆ 9ಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರು ಪಂದ್ಯವನ್ನು ಉದ್ಘಾಟಿಸಲಿದ್ದಾರೆ. ಡಿವೈಎಸ್ಪಿ ಅರುಣ್ ನಾಗೇಗೌಡ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ನಗರಸಭೆ ಸದಸ್ಯ ಜೀವಂಧರ್ ಜೈನ್, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್, ವೃತ್ತ ನಿರೀಕ್ಷಕ ರವಿ ಬಿ.ಎಸ್., ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್, ಪೊಲೀಸ್ ಉಪನಿರೀಕ್ಷಕರಾದ ಸೇಸಮ್ಮ, ಭವಾನಿ, ಸುದ್ದಿ ಸಮೂಹ ಸಂಸ್ಥೆಗಳ ಸಿಇಓ ಸೃಜನ್ ಊರುಬೈಲ್, ಮೆಸ್ಕಾಂ ಇಂಜಿನಿಯರ್ ರಾಮಚಂದ್ರ, ಉದ್ಯಮಿಗಳಾದ ಸಹಜ್ ರೈ ಬಳಜ್ಜ, ಶಿವರಾಮ ಆಳ್ವ ಮುಖ್ಯ ಅತಿಥಿಗಳಾಗಿರುವರು.


ಬೆಳಿಗ್ಗೆ 8ರಿಂದ ಪೊಲೀಸ್ ಇಲೆವನ್ ಮತ್ತು ವಿವೇಕಾನಂದ ಕಾಲೇಜು ಇಲೆವನ್ ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯಾಟ ಏರ್ಪಡಿಸಲಾಗಿದೆ. ಇದರ ಪ್ರಥಮ ಬಹುಮಾನವಾಗಿ 3024 ರೂ. ಹಾಗೂ ಬಾಂಧವ್ಯ ಟ್ರೋಫಿ, ದ್ವಿತೀಯ 2024 ಮತ್ತು ಬಾಂಧವ್ಯ ಟ್ರೋಫಿ ನೀಡಿ ಗೌರವಿಸಲಾಗುವುದು.ಬಾಂಧವ್ಯ ಟ್ರೋಫಿಯ ಪ್ರಥಮ ಬಹುಮಾನವಾಗಿ 15024 ರೂ. ಹಾಗೂ ಬಾಂಧವ್ಯ ಟ್ರೋಫಿ, ದ್ವಿತೀಯ ಬಹುಮಾನವಾಗಿ 10024 ರೂ. ಹಾಗೂ ಬಾಂಧವ್ಯ ಟ್ರೋಫಿ, ತೃತೀಯ ಬಹುಮಾನವಾಗಿ 8024 ರೂ. ಹಾಗೂ ಬಾಂಧವ್ಯ ಟ್ರೋಫಿ, ಚತುರ್ಥ ಬಹುಮಾನವಾಗಿ 6024 ರೂ. ಹಾಗೂ ಬಾಂಧವ್ಯ ಟ್ರೋಪಿ ನೀಡಲಾಗುವುದು. ಇದರೊಂದಿಗೆ ಪಂದ್ಯದ ಪಂದ್ಯಶ್ರೇಷ್ಠ, ಅತೀ ಹೆಚ್ಚು ರನ್, ಅತೀ ಹೆಚ್ಚು ವಿಕೆಟ್, ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಬಹುಮಾನ ನೀಡಲಾಗುವುದು.


ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಪೊಲೀಸ್ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ, ಜಂಬೂರಾಜ್ ಮಹಾಜನ್, ರಾಜೇಶ್, ಉದಯ ರವಿ, ಕುಟ್ಟಿ ಎಂ.ಕೆ., ಸುದಾನ ವಸತಿಯುತ ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್, ಪುತ್ತೂರು ಪದ್ಮಾ ಸೋಲಾರ್ ಮಾಲಕ ಸೀತಾರಾಮ ರೈ, ಪ್ರೇಮ ಬೇಕರಿ ಮಾಲಕ ವಿನೋದ್, ಬಿಕೆ ಬಿಲ್ಡ್ ಮಾರ್ಟ್ ಮಾಲಕ ಮೊಯ್ದೀನ್, ಉದ್ಯಮಿ ಸುರೇಶ್ ನಾಡಾಜೆ, ಪಾಪ್ಯುಲರ್ ಸ್ವೀಟ್ ಮಾಲಕ ನರೇಂದ್ರ ಕಾಮತ್, ಮಾನಕ ಜ್ಯುವೆಲ್ಲರ್ಸ್ ಮಾಲಕ ಸಿದ್ದನಾಥ, ಕೃಷಿಕ ಶರತ್ ಚಂದ್ರ ಬೈಪಡಿತ್ತಾಯ ನರಿಮೊಗರು, ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಯೋಗೀಶ್, ಮಂಗಳೂರು ಕಟೀಲ್ ಲಾಜಿಸ್ಟಿಕಿನ ಜನಾರ್ದನ ಪೂಜಾರಿ ಅತಿಥಿಯಾಗಿರುವರು.


ಇದೇ ಸಂದರ್ಭ ಕ್ರೀಡಾ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, 400 ಮೀಟರ್ ಹರ್ಡಲ್ಸ್ ನ ರಾಷ್ಟ್ರೀಯ ಕ್ರೀಡಾಪಟು ಅನಘ ಕೆ.ಎ., ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಜುವೆನ್ನಾ ಡ್ಯಾಝಲ್ ಕುಟಿನ್ಹಾ, ರಾಷ್ಟ್ರಮಟ್ಟದ ತ್ರೋಬಾಲ್ ಆಟಗಾರ ಮಹಮ್ಮದ್ ಶಾನ್ ಅವರನ್ನು ಸನ್ಮಾನಿಸಿ, ಗೌರವಿಸಲಾಗುವುದು.


ಪಂದ್ಯದಲ್ಲಿ ಭಾಗವಹಿಸುವ ತಂಡಗಳು:
ಪೊಲೀಸ್ ಇಲೆವೆನ್ 1, ಪೊಲೀಸ್ ಇಲೆವೆನ್ 2, ಸುದ್ದಿ ಇಲೆವೆನ್, ಹೋಂ ಗಾರ್ಡ್ ಇಲೆವೆನ್, ಮೆಸ್ಕಾಂ ಇಲೆವೆನ್, ನಗರಸಭೆ ಇಲೆವೆನ್, ದೈಹಿ ಶಿಕ್ಷಕ ಶಿಕ್ಷಣ ಇಲಾಖೆ, ಡಾಕ್ಟರ್ಸ್ ಇಲೆವೆನ್, ಲಾಯರ್ಸ್ ಇಲೆವೆನ್,ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು,
ಕೆ.ಎಸ್.ಆರ್.ಟಿ.ಸಿ. ಇಲೆವೆನ್, ವಿವೇಕಾನಂದ ವಿದ್ಯಾವರ್ಧಕ ಸಂಘ, ವರ್ತಕರ ಸಂಘ, ಕ್ಯಾಂಪ್ಕೋ ಇಲೆವೆನ್, ಸೊಸೈಟಿ ಟೀಮ್, ಪುತ್ತೂರು ಪ್ರೆಸ್ ಕ್ಲಬ್ ಇಲೆವೆನ್ ತಂಡಗಳು ಪಂದ್ಯದಲ್ಲಿ ಭಾಗವಹಿಸಲಿವೆ.


ಆಟಗಾರರಿಗೆ ಸೂಚನೆ:
ಎಲ್ಲಾ ತಂಡದ ಆಟಗಾರರು ಬೆಳಿಗ್ಗೆ 8ಕ್ಕೆ ಸರಿಯಾಗಿ ಮೈದಾನದಲ್ಲಿ ಹಾಜರಿರಬೇಕು. ಕೋವಿಡ್ ತಡೆಗಟ್ಟಲು ಕರ್ನಾಟಕ ರಾಜ್ಯ ಸರ್ಕಾರ ಕೈಗೊಂಡಿರುವ ನಿಯಮಗಳನ್ನು ಅನುಸರಿಸಿ ಪಂದ್ಯಾಟ ಜರಗಲಿದೆ. ಆದ್ದರಿಂದ ಮಾಸ್ಕ್ ಕಡ್ಡಾಯ. ಆಟಗಾರರು ಐಡಿ ಕಾರ್ಡ್ ಅಥವಾ ಮೇಲಾಧಿಕಾರಿಗಳ ಸಹಿಯುಳ್ಳ ಪತ್ರವನ್ನು ಕಡ್ಡಾಯವಾಗಿ ತರಬೇಕು. ಎಲ್ಲಾ ಆಟಗಾರರು ಕಡ್ಡಾಯವಾಗಿ ಸಮವಸ್ತ್ರ (ಜೆರ್ಸಿ) ಮತ್ತು ಶೂ ಧರಿಸಬೇಕು. ಜೀನ್ಸ್ ಪ್ಯಾಂಟ್ ಧರಿಸಿ ಆಡುವಂತಿಲ್ಲ. ಸಂಘಟಕರ, ತೀರ್ಪುಗಾರರ ತೀರ್ಮಾನವೇ ಅಂತಿಮ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here