ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 25ರ ಚತುಷ್ಪಥ ಕಾಮಗಾರಿ ನಡೆಯುವ ಹಿರೇಬಂಡಾಡಿ ತಿರುವು ಸಂಪರ್ಕ ರಸ್ತೆಯ ಬಳಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಬಂದ ದೂರಿಗೆ ಸ್ಪಂದಿಸಿರುವ ಹೆದ್ದಾರಿ ಪ್ರಾಧಿಕಾರ ಗಾಂಧಿಪಾರ್ಕ್ ಬಳಿಯಲ್ಲಿ ಅಂಡರ್‌ಪಾಸ್ ನಿರ್ಮಿಸಲು ಮುಂದಾಗಿದೆ.
ಸಂಸದರ ಸೂಚನೆಯ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿ ಗೊಂದಲ ನಿವಾರಿಸಿದರು.
ಹೆದ್ದಾರಿ ವಿಸ್ತರಣೆಯ ಕಾರಣ ಉಪ್ಪಿನಂಗಡಿಯಲ್ಲಿ ಮೇಲ್ಸೇತುವೆ ನಿರ್ಮಾಣದ ನೀಲ ನಕ್ಷೆ ಈ ಮೊದಲು ಸಿದ್ದವಾಗಿದ್ದರೂ, ಬದಲಾದ ಗುತ್ತಿಗೆದಾರರ ಕಾಲಘಟ್ಟದಲ್ಲಿ ಮೇಲ್ಸೆತುವೆಯ ಬದಲು ಎತ್ತರಿಸಿದ ರಸ್ತೆ ನಿರ್ಮಾಣವಾಗುವುದಾಗಿ ತಿಳಿಸಲಾಯಿತು. ಈ ವೇಳೆ ಅಂಡರ್ ಪಾಸ್ ರಸ್ತೆ ಎಲ್ಲೆಲ್ಲಾ ನಿರ್ಮಾಣವಾಗಲಿದೆ ಎನ್ನುವುದು ನಿಖರವಾಗಿ ಯಾರೂ ತಿಳಿಸದ ಕಾರಣದಿಂದ ಸಾರ್ವಜನಿಕರಲ್ಲಿ ಈ ಬಗ್ಗೆ ಗೊಂದಲಗಳು ಉಂಟಾಗಿದ್ದವು. ಈ ಬಗ್ಗೆ ಸಂದೇಹಗಳನ್ನು ಬಗೆಹರಿಸುವ ಸಲುವಾಗಿ ಪಂಚಾಯತ್ ಜನಪ್ರತಿನಿಧಿಗಳ ನಿಯೋಗವು ಶುಕ್ರವಾರ ಸಂಸದರನ್ನು ಭೇಟಿ ಮಾಡಿ ಹೆದ್ದಾರಿ ಅಗಲೀಕರಣದ ವೇಳೆ ಮೂಡಿರುವ ಗೊಂದಲಗಳನ್ನು ಬಗೆಹರಿಸಲು ಮನವಿ ಮಾಡಿದ್ದರು. ಸಂಸದರ ಸೂಚನೆ ಮೇರೆಗೆ ಶನಿವಾರದಂದು ಹೆದ್ದಾರಿ ಇಲಾಖಾ ಎಂಜಿನಿಯರ್ ಗಳು ಭೇಟಿ ನೀಡಿ ಯಾವೆಲ್ಲಾ ಭಾಗದಲ್ಲಿ ಅಂಡರ್ ಪಾಸ್ ಬರುತ್ತಿದೆ. ಸರ್ವೀಸ್ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶವಿರುವ ಬಗ್ಗೆ ಹಾಗೂ ಎಲ್ಲೆಲ್ಲಾ ಚರಂಡಿ ವ್ಯವಸ್ಥೆಯನ್ನು ಪುನರ್ ನಿರ್ಮಿಸಲಾಗುತ್ತಿದೆ ಎಂದು ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಟಂದೂರು, ಉಪ್ಪಿನಂಗಡಿ- ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ. , ಪಂಚಾಯತ್ ಸದಸ್ಯರಾದ ಯು.ಟಿ. ತೌಸೀಫ್, ಧನಂಜಯ ಕುಮಾರ್, ಉಷಾ ಮುಳಿಯ, ಅಬ್ದುಲ್ ರಹಿಮಾನ್ , ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯೂನಿಕ್, ನಿತ್ಯಾನಂದ ಕಿಣಿ, ಇಳಂತಿಲ ಗ್ರಾ.ಪಂ. ಪಂಚಾಯತ್ ಅಧ್ಯಕ್ಷ ತಿಮ್ಮಪ್ಪ ಗೌಡ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ವಿವೇಕಾನಂದ, ಕೆಎನ್‌ಆರ್ ಸಂಸ್ಥೆಯ ಎಂಜಿನಿಯರ್ ರಘುನಾಥ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.